ಗೆಳೆಯನಿಗೆ ಧನ್ಯವಾದ ಹೇಳುತ್ತಾ ಕಣ್ಣೀರು ಹಾಕಿದ ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಕೆಲವೇ ದಿನಗಳಲ್ಲಿ 200 ಕೋಟಿ ರು ಕಲೆಕ್ಷನ್ ದಾಟಿ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿದೆ. ಸಹಜವಾಗಿಯೇ ಅಲ್ಲು ಅರ್ಜುನ್ ಖುಷಿಯಾಗಿದ್ದಾರೆ. ಆದರೆ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.
'ಪುಷ್ಪ' ಸಿನಿಮಾ ಯಶಸ್ವಿ ಆಗಿದ್ದಕ್ಕೆ 'ಥ್ಯಾಂಕ್ಸ್ ಗಿವಿಂಗ್' ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲು ಅರ್ಜುನ್ ಬಹಳ ಭಾವುಕವಾಗಿ ಮಾತನಾಡಿದ್ದಾರೆ.
ಸಿನಿಮಾ ನಿರ್ದೇಶಕ ಸುಕುಮಾರ್ ಅನ್ನು ಹೊಗಳಿದ ಅಲ್ಲು ಅರ್ಜುನ್, ಸುಕುಮಾರ್ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಸುಕುಮಾರ್ ಇಲ್ಲದೇ ಇದ್ದಿದ್ದರೆ ನನ್ನ ಜೀವನ ಬೇರೆ ಏನೋ ಆಗಿಬಿಟ್ಟಿರುತ್ತಿತ್ತು, ಇಂದು ನಾನು ಇಷ್ಟು ಬೆಳೆದಿದ್ದರ ಹಿಂದೆ ಸುಕುಮಾರ್ ಯೋಗದಾನ ದೊಡ್ಡದು ಎಂದರು ಅಲ್ಲು ಅರ್ಜುನ್.
ವೃತ್ತಿ ಆರಂಭಿಸಿದಾಗ ನಾನು ಯಾವ ಸಿನಿಮಾ ಮಾಡಬೇಕು, ಯಾವ ಸಿನಿಮಾ ಮಾಡಬಾರದು ಎಂಬ ಗೊಂದಲದಲ್ಲಿದ್ದೆ. ಆಗ ಸುಕುಮಾರ್ ಜೊತೆಗೆ ನಾನು ಹೋದೆ. 'ಆರ್ಯ' ಸಿನಿಮಾದಿಂದ ನಾನು ಇಂದು ಏನಾಗಿದ್ದೇನೋ ಅದು ಆಗಲು ಸಾಧ್ಯವಾಯಿತು. ನನ್ನ ಜೀವನ ತಿರುವು ಪಡೆದುಕೊಳ್ಳಲು ಸುಕುಮಾರ್ ಕಾರಣರಾದರು. ಸ್ಟೈಲಿಶ್ ಸ್ಟಾರ್‌ನಿಂದ ಇಂದು ಐಕಾನಿಕ್ ಸ್ಟಾರ್ ಎಂದು ಇಡೀ ರಾಷ್ಟ್ರವೇ ಮೆಚ್ಚುವಂತೆ ನನ್ನನ್ನು ಸುಕುಮಾರ್ ರೂಪಿಸಿದರು'' ಎಂದು ಭಾವುಕರಾದರು ಅಲ್ಲು ಅರ್ಜುನ್.

ನನ್ನ ಜೀವನದಲ್ಲಿ ಕೆಲವರಿಗೆ ಮಾತ್ರ ನಾನು ಋಣಿ: ಅಲ್ಲು ಅರ್ಜುನ್
''ನನ್ನ ಜೀವನದಲ್ಲಿ ಕೆಲವರಿಗೆ ಮಾತ್ರವೇ ನಾನು ಋಣಿ. ನನ್ನ ತಾತ ಅಲ್ಲು ರಾಮಲಿಂಗಯ್ಯ. ನನಗೆ ಜೀವ ಕೊಟ್ಟ ನನ್ನ ತಂದೆ-ತಾಯಿ ಹಾಗೂ ಮೊದಲ ಸಿನಿಮಾದಿಂದಲೂ ನನ್ನ ಬೆನ್ನು ತಟ್ಟುತ್ತಾ ಬರುತ್ತಿರುವ ಮಾವ ಚಿರಂಜೀವಿ ಹಾಗೂ ನನ್ನ ವೃತ್ತಿ ಜೀವನಕ್ಕೆ ತಿರುವು ನೀಡಿದ ನಿರ್ದೇಶಕ ಸುಕುಮಾರ್ ಇವರಿಗಷ್ಟೆ ನಾನು ಋಣಿಯಾಗಿರುವುದು. ಇನ್ನಾರಿಗೂ ಇಲ್ಲ'' ಎನ್ನುತ್ತಾ ಅತ್ತು ಬಿಟ್ಟರು ಅಲ್ಲು ಅರ್ಜುನ್.

ಮೊದಲು ನೆನಪಿಗೆ ಬಂದಿದ್ದು ಸುಕುಮಾರ್: ಅಲ್ಲು ಅರ್ಜುನ್
ಮತ್ತೆ ಮಾತು ಮುಂದುವರೆಸಿದ ಅಲ್ಲು ಅರ್ಜುನ್, 'ಆರ್ಯ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನನ್ನ ವೃತ್ತಿಯಲ್ಲಿ ಬಹಳ ದೊಡ್ಡ ತಿರುವು ಬಂದಿತ್ತು. ಹಲವು ಅವಕಾಶಗಳು ನನ್ನನ್ನು ಅರಸಿ ಬರುತ್ತಿದ್ದವು. ಆ ಸಮಯದಲ್ಲಿ 80 ಲಕ್ಷ ಕೊಟ್ಟು ಬಹಳ ದುಬಾರಿಯಾದ ಸ್ಪೋರ್ಟ್ಸ್ ಕಾರೊಂದನ್ನು ಖರೀದಿ ಮಾಡಿದ್ದೆ. ಅದ್ಭುತವಾದ ಕಾರ್ ಅದು. ಆ ಕಾರಿನ ಸ್ಟೀರಿಂಗ್ ವ್ಹೀಲ್ ಮೇಲೆ ಕೈ ಇಟ್ಟು, ಇದು ಯಾರಿಂದ ಸಾಧ್ಯವಾಯಿತು ಎಂದು ನೆನಪಿಸಿಕೊಂಡಾಗ ನನಗೆ ಮೊದಲ ನೆನಪು ಬಂದ ವ್ಯಕ್ತಿ ಸುಕುಮಾರ್'' ಎಂದರು ಅಲ್ಲು ಅರ್ಜುನ್. ನಟನ ಮಾತು ಕೇಳಿ ಮುಂದೆ ಕೂತಿದ್ದ ಸುಕುಮಾರ್ ಕಣ್ಣೀರು ಹಾಕಿದರು.

ಸುಕುಮಾರ್ ನನ್ನ ಜೀವನದಲ್ಲಿ ಬಹಳ ಪ್ರಮುಖ ವ್ಯಕ್ತಿ: ಅಲ್ಲು ಅರ್ಜುನ್
''ಸುಕುಮಾರ್ ನನ್ನ ಜೀವನದಲ್ಲಿ ಅದೆಷ್ಟು ಮುಖ್ಯ ವ್ಯಕ್ತಿ ಎಂದರೆ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ನನ್ನ ತಂದೆ-ತಾಯಿ, ಪತ್ನಿ ಇವರ ಬಗ್ಗೆ ನನಗೆ ಇರುವ ಪ್ರೀತಿ ಗೌರವವನ್ನು ಹೇಗೆ ಬಹಿರಂಗವಾಗಿ ಮಾತುಗಳಲ್ಲಿ ಹೇಳಲು ಆಗುವುದಿಲ್ಲವೋ ಹಾಗೆಯೇ ಸುಕುಮಾರ್ ಬಗ್ಗೆ ನನಗೆ ಇರುವ ಪ್ರೀತಿಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಸುಕುಮಾರ್ ಇಲ್ಲದಿದ್ದರೆ ಅಲ್ಲು ಅರ್ಜುನ್ ಅದೇನಾಗಿಬಿಡುತ್ತಿದ್ದನೋ ಗೊತ್ತಿಲ್ಲ'' ಎಂದರು ಅಲ್ಲು ಅರ್ಜುನ್.

'ಆರ್ಯ'ದಿಂದ ಬೆಳಕಿಗೆ ಬಂದ ಇಬ್ಬರು ಸ್ಟಾರ್‌ಗಳು
2004ನೇ ಇಸವಿಯ ಮೇ 7 ರಂದು ತೆಲುಗಿನ 'ಆರ್ಯ' ಸಿನಿಮಾ ಬಿಡುಗಡೆ ಆಯಿತು. ಅದು ನಿರ್ದೇಶಕರಾಗಿ ಸುಕುಮಾರ್‌ಗೆ ಮೊದಲ ಸಿನಿಮಾ. ಆಗ ತಾನೇ ಹೀರೋ ಆಗಿದ್ದ ಅಲ್ಲು ಅರ್ಜುನ್‌ಗೆ ನಾಯಕ ನಟನಾಗಿ ಎರಡನೇ ಸಿನಿಮಾ. 'ಆರ್ಯ' ಸಿನಿಮಾ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿಬಿಟ್ಟಿತು. ಹಲವು ದಾಖಲೆಗಳನ್ನು ಬರೆಯಿತು. ಆ ಸಿನಿಮಾ ಮೂಲಕ ಅಲ್ಲು ಅರ್ಜುನ್ ಸ್ಟೈಲಿಷ್ ಸ್ಟಾರ್ ಆದರು. ಸುಕುಮಾರ್ ಎಂಬ ಅದ್ಭುತ ನಿರ್ದೇಶಕ ತೆಲುಗು ಚಿತ್ರರಂಗಕ್ಕೆ ದೊರೆತರು. 'ಆರ್ಯ'ದಿಂದ ಸ್ಟಾರ್‌ಗಳಾದ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಇಂದಿಗೂ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಹಲವು ಅದ್ಭುತ ಸಿನಿಮಾಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನ ಹೊಸ ಸಿನಿಮಾ 'ಪುಷ್ಪ' ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ.


Click it and Unblock the Notifications











