National Awards 2023: ಟಾಲಿವುಡ್‌ನಲ್ಲಿ ಇತಿಹಾಸ ನಿರ್ಮಿಸಿದ ಅಲ್ಲು ಅರ್ಜುನ್: ತಾರಕ್, ಚರಣ್ ಸೋತಿದ್ದೆಲ್ಲಿ?
2021ನೇ ಸಾಲಿನ ಸಿನಿಮಾಗಳಿಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ ಪ್ರಶಸ್ತಿಗಾಗಿ ಭಾರೀ ಪೈಪೋಟಿ ನಡೆದಿತ್ತು. ವಿವಿಧ ಭಾಷೆಗಳ ನೂರಾರು ಸಿನಿಮಾಗಳು ಹಲವು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿಗಾಗಿ ಕಣದಲ್ಲಿ ಇದ್ದವು. ಕೊನೆಗೂ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆಯಾಗಿದ್ದು ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಗ ಭಾಜನರಾಗಿದ್ದಾರೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ 2 ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಪಕ್ಕಾ ಮಾಸ್ ಎಂಟರ್‌ಟೈನರ್ ಚಿತ್ರದಲ್ಲಿ ಅಲ್ಲು ಅರ್ಜುನ್ ದರ್ಬಾರ್ ಮಾಡಿದ್ದರು. ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಅದಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎನ್ನುವ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. 68 ವರ್ಷಗಳಿಂದ ತೆಲುಗಿನ ಯಾವುದೇ ನಟ ಮಾಡದ ಸಾಧನೆಯನ್ನು ಬನ್ನಿ ಮಾಡಿದ್ದಾರೆ.

ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅತ್ಯುತ್ತಮ ನಟ ಪ್ರಶಸ್ತಿಗಾಗಿ ಈ ಸಲ ಭಾರೀ ಪೈಪೋಟಿಯೇ ಇತ್ತು. ಮುಖ್ಯವಾಗಿ 'RRR' ಚಿತ್ರದಿಂದ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ರೇಸ್‌ನಲ್ಲಿ ಇದ್ದರು. ಆದರೆ ಅಂತಿಮವಾಗಿ ವಿಜಯ ಮಾಲೆ ಅಲ್ಲುಅರ್ಜುನ್ ಕೊರಳಿಗೆ ಬಿದ್ದಿದೆ. ಸ್ಟೈಲಿಶ್ ಸ್ಟಾರ್ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಮಧ್ಯಾಹ್ನವೇ ಅಲ್ಲು ಅರ್ಜುನ್ ಮನೆಗೆ ನಿರ್ದೇಶಕರು ಸುಕುಮಾರ್ ಆಗಮಿಸಿದ್ದರು. ಅಲ್ಲು ಅರ್ಜುನ್ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಭಾವುಕರಾಗಿದ್ದರು. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡರು. ಚಿರಂಜೀವಿ ಸೋದರಳಿಯ ಅಲ್ಲು ಅರ್ಜುನ್ ಬಾಲನಟರಾಗಿದ್ದಾಗಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಗಂಗೋತ್ರಿ' ಸಿನಿಮಾ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಬಂದರು. 'ಆರ್ಯ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು.

ಮೆಗಾಸ್ಟಾರ್ ಚಿರಂಜೀವಿ ಹಾದಿಯಲ್ಲೇ ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಬಂದರೂ ತಮ್ಮದೇ ವಿಭಿನ್ನ ನಟನೆ, ಡ್ಯಾನ್ಸ್, ಸ್ಟೈಲ್, ಮ್ಯಾನರಿಸಂನಿಂದ ಪ್ರೇಕ್ಷಕರ ಮನಗೆದ್ದರು. ಚಿರಂಜೀವಿ ಛಾಯೆಯಿಂದ ಹೊರಬಂದು ತಮ್ಮದೇ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಚಿತ್ರದಿಂದ ಚಿತ್ರಕ್ಕೆ ನಟನೆಯನ್ನು ಉತ್ತಮಗೊಳಿಸಿಕೊಳ್ಳುತ್ತ ಬಂದ ಬನ್ನಿ 'ಪುಷ್ಪ'ರಾಜ್ ಆಗಿ ದೇಶ ವಿದೇಶಗಳಲ್ಲಿ ಸದ್ದು ಮಾಡಿದರು. ಸುಕುಮಾರ್ ಡಿಸೈನ್ ಮಾಡಿದ್ದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಗೆದ್ದರು. 'ತಗ್ಗೋದೇ ಇಲ್ಲ' ಡೈಲಾಗ್ ಮೂಲಕ ಮೋಡಿ ಮಾಡಿದರು.
ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನ ಅದ್ಭುತ ಕಲಾವಿದರು ಬಂದು ಹೋಗಿದ್ದಾರೆ. ಆದರೆ ರಾಷ್ಟ್ರಪ್ರಶಸ್ತಿ ಮಾತ್ರ ಗಗನ ಕುಸುಮವೇ ಆಗಿತ್ತು. ಆದರೆ ಅದನ್ನು ಅಲ್ಲು ಅರ್ಜುನ್ ಸಾಧಿಸಿ ತೋರಿಸಿದ್ದಾರೆ. ಸೀತಾರಾಮರಾಜು ಆಗಿ ರಾಮ್‌ಚರಣ್, ಕೋಮುರಂ ಭೀಮ್ ಆಗಿ ತಾರಕ್ ಅದ್ಭುತ ನಟನೆ ಪ್ರದರ್ಶಿಸಿದ್ದರು. ಇಬ್ಬರಲ್ಲಿ ಒಬ್ಬರು ಪ್ರಶಸ್ತಿ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅಚ್ಚರಿ ಎನ್ನುವಂತೆ ಅಲ್ಲು ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ 'ಪುಷ್ಪ'-2 ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸುತ್ತಿದ್ದಾರೆ.
ಅಲ್ಲು ಅರ್ಜುನ್ ವಿಭಿನ್ನ ಪಾತ್ರಗಳನ್ನು ಮಾಡುವುದರಲ್ಲಿ ನಿಸ್ಸೀಮರು. 'ಪುಷ್ಪ'ರಾಜ್ ಪಾತ್ರಕ್ಕಾಗಿ ಮತ್ತಷ್ಟು ಕಷ್ಟಪಟ್ಟಿದ್ದರು. ಚಿತ್ತೂರು ಶೈಲಿಯ ಭಾಷೆಯ ಜೊತೆಗೆ ಡಿಗ್ಲಾಮರ್ ಲುಕ್‌ನಲ್ಲಿ ಪ್ರೇಕ್ಷಕರ ಮನಗೆದ್ದರು. ಕಾಮಿಡಿ, ಎಮೋಷನ್, ಫೈಟ್ಸ್ ಎಲ್ಲರಲ್ಲೂ ಮಾಸ್ ಪರ್ಫಾರ್ಮನ್ಸ್ ಕೊಟ್ಟಿದ್ದರು. ಹಾಗಾಗಿ ಎಲ್ಲರೂ ಬನ್ನಿಗೆ ಫಿದಾ ಆಗಿದ್ದರು. ಚರಣ್- ತಾರಕ್ ಭಾರೀ ಪೈಪೋಟಿ ಕೊಟ್ಟರೂ ಕೊನೆ ಹಂತದಲ್ಲಿ ಪ್ರಶಸ್ತಿ ಐಕಾನ್ ಸ್ಟಾರ್ ಪಾಲಾಗಿದೆ.
'RRR' ಚಿತ್ರದಲ್ಲಿ ರಾಮ್‌ಚರಣ್- ತಾರಕ್ ಇಬ್ಬರಲ್ಲಿ ಯಾರು ಹೀರೊ ಎನ್ನುವ ಚರ್ಚೆ ಅಭಿಮಾನಿಗಳಲ್ಲಿ ಇನ್ನು ಕಮ್ಮಿ ಆಗಿಲ್ಲ. ಕೆಲವರು ಮಾತ್ರ ಚರಣ್ ಹೀರೊ ಎನ್ನುತ್ತಿದ್ದಾರೆ. ಆದರೆ ರಾಜಮೌಳಿ ಮಾತ್ರ ಇಬ್ಬರನ್ನು ಹೀರೊಗಳ ರೀತಿಯಲ್ಲೇ ತೋರಿಸಿದ್ದರು. ಇಲ್ಲಿ ಯಾರಿಗೂ ಹೆಚ್ಚು ಕಡಿಮೆ ಅವಕಾಶ ಸಿಕ್ಕಿರಲಿಲ್ಲ. ಇಬ್ಬರಲ್ಲಿ ಒಬ್ಬರಿಗೆ ರಾಷ್ಟ್ರಪ್ರಶಸ್ತಿ ಬಂದಿದ್ದರೆ ಅವರೇ ಹೀರೊ ಎನ್ನುವ ಸಂದೇಶ ರವಾನೆ ಆಗುತ್ತಿತ್ತು. ಚರಣ್- ಎನ್‌ಟಿಆರ್ ಅಭಿಮಾನಿಗಳು ಇದನ್ನೇ ನಿರೀಕ್ಷಿಸಿದ್ದರು. ಆದರೆ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಒಲಿದಿದೆ. ಅಲ್ಲಿಗೆ ಆ ಚರ್ಚೆಗೆ ಬ್ರೇಕ್ ಬಿದ್ದಂತಾಗಿದೆ.


Click it and Unblock the Notifications











