ನಟ ಅಲ್ಲು ಅರ್ಜುನ್ ಸಂಭಾವನೆ 30 ಪೈಸೆನಾ? ಏನಿದು ಹೊಸ ಲೆಕ್ಕಾಚಾರ?
ಸ್ಟಾರ್ ನಟರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ರಜನಿಕಾಂತ್, ಪ್ರಭಾಸ್, ಸಲ್ಮಾನ್ ಖಾನ್, ಶಾರುಖ್ ಖಾನ್, ಯಶ್, ರಿಷಬ್ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಕೆಲ ಸ್ಟಾರ್ ನಟರು ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯಲು ಆರಂಭಿಸಿದ್ದಾರೆ. ಈ ಮೂಲಕ ಮತ್ತಷ್ಟು ಆದಾಯ ಗಳಿಸುತ್ತಿದ್ದಾರೆ.
'ಪುಷ್ಪ' ಸರಣಿ ಸಿನಿಮಾಗಳಿಂದ ತೆಲುಗು ನಟ ಅಲ್ಲು ಅರ್ಜುನ್ ರೇಂಜ್ ಬದಲಾಗಿದೆ. ಪುಷ್ಪರಾಜ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟೈಲಿಶ್ ಸ್ಟಾರ್ ಅಬ್ಬರಿಸಿದ್ದು ಗೊತ್ತೇಯಿದೆ. ಇದೀಗ 'ರಾಕಾ' ಆಗಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರ್ತಿದ್ದಾರೆ. ಅಟ್ಲಿ ನಿರ್ದೇಶನದ ಈ ಸಿನಿ ಆ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ. ಸದ್ಯ ಅಲ್ಲು ಅರ್ಜುನ್ ಸಂಭಾವನೆ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದೆ.

ಅಲ್ಲು ಅರ್ಜುನ್ ಇತ್ತೀಚೆಗೆ ಚಿತ್ರವೊಂದಕ್ಕೆ ಒಂದು ರೂಪಾಯಿಯಲ್ಲಿ 30 ಪೈಸೆ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎಂದು ತಮಿಳು ನಿರ್ಮಾಪಕ ಜಿ. ಧನಂಜಯನ್ ಹೇಳಿದ್ದಾರೆ. Pinkvilla ವೆಬ್ ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. "ಒಂದು ಚಿತ್ರ ಗಳಿಸುವ ಪ್ರತಿ ರೂಪಾಯಿಯಲ್ಲಿ 30 ಪೈಸೆ ಲೆಕ್ಕದಲ್ಲಿ ಅಲ್ಲು ಅರ್ಜುನ್ ಸಂಭಾವನೆ ಪಡೆಯುತ್ತಾರೆ. ಆ ಲೆಕ್ಕದಲ್ಲಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ 300 ಕೋಟಿ ರೂ. ಸಂಭಾವನೆ ರೂಪದಲ್ಲಿ ಅವರಿಗೆ ಸಿಗುತ್ತದೆ. 500 ಕೋಟಿ ರೂ. ಗಳಿಸಿದ್ರೆ, 150 ಕೋಟಿ ರೂ. ಹೋಗುತ್ತದೆ" ಎಂದು ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಸ್ಟ್ರ್ಯಾಟಜಿ ನಿಜಕ್ಕೂ ಚೆನ್ನಾಗಿದೆ. ಇದು ನಿರ್ಮಾಪಕರಿಗೆ ಹೆಚ್ಚಿನ ಹೊರೆಯನ್ನು ತಗ್ಗಿಸುತ್ತದೆ ಎಂದು ಜಿ. ಧನಂಜಯನ್ ಹೇಳಿದ್ದಾರೆ. ನಿರ್ಮಾಪಕರು ನಟನಿಗೆ ಸಂಭಾವನೆ ಕೊಡಲು ಹೆಚ್ಚು ಹಣವನ್ನು ಸಾಲ ಮಾಡಿ ತಂದು ಕೊಡುವುದು ತಪ್ಪುತ್ತದೆ. ಬಡ್ಡಿ ಕೂಡ ತಗ್ಗುತ್ತದೆ. ಬಜೆಟ್ ಕಮ್ಮಿ ಆಗಿ ತೆರೆಕಂಡ ಬಳಿಕ ಸಿನಿಮಾ ಬೇಗ ಲಾಭ ಗಳಿಸಲು ಆರಂಭಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ರೂಪಾಯಿಗೆ 30 ಪೈಸೆ ಅಂದ್ರೆ 'ಪುಷ್ಪ'-2 ಸಿನಿಮಾ 1700 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆ ಲೆಕ್ಕದಲ್ಲಿ 500 ರೂ. ಸಂಭಾವನೆ ರೂಪದಲ್ಲಿ ಅಲ್ಲು ಅರ್ಜುನ್‌ಗೆ ಸಿಕ್ತಾ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕೆಲ ನಟರು ಇಂಥದ್ದೇ ಲೆಕ್ಕಾಚಾರದಲ್ಲಿ ಸಂಭಾವನೆ ಪಡೆಯಲು ಆರಂಭಿಸಿದ್ದಾರೆ. ಮೊದಲು ಸಿನಿಮಾ ನಿರ್ಮಾಣವಾಗಲಿ, ಆ ಬಳಿಕ ಸಂಭಾವನೆ ಎನ್ನುತ್ತಿದ್ದಾರೆ. ತಮ್ಮ ಸಂಭಾವನೆ ಹಣವನ್ನೇ ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡಿ ಸಿನಿಮಾ ತೆರೆಕಂಡ ಬಳಿಕ ಒಟ್ಟಿಗೆ ದೊಡ್ಡ ಮೊತ್ತದ ಲಾಭ ಪಡೆಯುತ್ತಿದ್ದಾರೆ.
ಚಿರಂಜೀವಿ ಸೋದರಳಿಯ ಆದರೂ ಅಲ್ಲು ಅರ್ಜುನ್ ತನ್ನದೇ ಪರಿಶ್ರಮದಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಮೆಗಾಸ್ಟಾರ್ ಪ್ರಭಾವಳಿಯಿಂದ ಹೊರ ಬಂದು ಐಕಾನ್ ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ. 'ಪುಷ್ಪ' ಸರಣಿ ಸಿನಿಮಾಗಳಲ್ಲಿ ನಟಿಸಿ ಗೆದ್ದು ಬೀಗಿದ್ದಾರೆ. ಆರಂಭದಲ್ಲಿ ತನ್ನ ಲುಕ್ಸ್ ಕಾರಣಕ್ಕೆ ಟೀಕೆ ಎದುರಿಸಿದ್ದ ಅಲ್ಲು ಅರ್ಜುನ್ ಮುಂದೆ ಸ್ಟೈಲಿಶ್ ಸ್ಟಾರ್ ಎಂಬ ಬಿರುದು ಪಡೆದರು. 'ರಾಕಾ' ಚಿತ್ರದ ಮೂಲಕ ಮತ್ತೊಂದು ದಾಖಲೆ ಬರೆಯಲು ಅಣಿಯಾಗುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿತ್ತು. 800 ಕೋಟಿ ರೂ. ಬಜೆಟ್‌ನಲ್ಲಿ ಈ ಸೈಫೈ ಸಿನಿಮಾ ನಿರ್ಮಾಣವಾಗ್ತಿದೆ. ದೀಪಿಕಾ ಪಡುಕೋಣೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications