ಆಂಧ್ರ ಪ್ರದೇಶ: ಚಿತ್ರಮಂದಿರಗಳ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳ ದಾಳಿ
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಎಲ್ಲೆಡೆಯಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದ್ದು, ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.
ಆದರೆ ಆಂಧ್ರ ಪ್ರದೇಶದ ಕೆಲವು ಕಡೆಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟಿ ಮಾಡಿ ದಾಂಧಲೆ ನಡೆಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಚಿತ್ರರಂಗ ಹಾಗೂ ಸರ್ಕಾರ ನಡುವೆ ನಡೆಯುತ್ತಿರುವ ಮುಸಿಕಿನ ಗುದ್ದಾಟದಿಂದ ಚಿತ್ರಪ್ರೇಮಿಗಳು ಬಡವಾಗಿದ್ದಾರೆ. ಸಿನಿಮಾದ ಟಿಕೆಟ್ ಹಾಗೂ ಫ್ಯಾನ್ಸ್ ಶೋ, ಬೆನಿಫಿಟ್ ಶೋಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಟಿಕೆಟ್ ದರಗಳನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿತ್ತು, ಮತ್ತು ಇನ್ನು ಮುಂದೆ ಫ್ಯಾನ್ಸ್ ಶೋ ಹಾಗೂ ಬೆನಿಫಿಟ್ ಶೋಗಳನ್ನು ಪ್ರದರ್ಶನ ಮಾಡದಂತೆ ಆದೇಶ ಹೊರಡಿಸಿತ್ತು.

ಆದರೆ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಚಿತ್ರಮಂದಿರ ಮಾಲೀಕರ ಸಂಘಕ್ಕೆ ಗೆಲುವು ಲಭಿಸಿದ್ದು, ಚಿತ್ರಮಂದಿರಗಳ ಟಿಕೆಟ್ ಬೆಲೆಯಲ್ಲಿ ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲವೆಂಬ ಆದೇಶ ಹೈಕೋರ್ಟ್‌ನಿಂದ ಹೊರಬಿತ್ತು. ಆದರೆ ಫ್ಯಾನ್ಸ್ ಶೋ, ಬೆನಿಫಿಟ್ ಶೋ ಬಗ್ಗೆ ಸ್ಪಷ್ಟತೆ ಇನ್ನೂ ದೊರಕಿಲ್ಲ.
ಅಲ್ಲದೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಹೇಳಿದ್ದು, ಚಿತ್ರಮಂದಿರ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ತಾನು ಹೊರಡಿಸಿದ್ದ ಆದೇಶ ಸಂಖ್ಯೆ 35 ಜಾರಿಯಲ್ಲಿದೆ ಎಂದಿತ್ತು.
ಆದರೆ ಆಂಧ್ರದ ಕೆಲವು ಚಿತ್ರಮಂದಿರಗಳು, ಹೈಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಬೆಳಿಗ್ಗೆ ಮುಂಜಾನೆ ಬೆನಿಫಿಟ್ ಶೋ ಆಯೋಜನೆ ಮಾಡಿತ್ತು. ಅಭಿಮಾನಿಗಳಿಂದ ಟಿಕೆಟ್ ದರವನ್ನು ಸಹ ವಸೂಲಿ ಮಾಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಶೋ ಅನ್ನು ರದ್ದು ಮಾಡಿ, ಟಿಕೆಟ್ ಹಣ ಹಿಂತಿರಿಗಿಸುವುದಾಗಿ ಹೇಳಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಬಾಲಾಜಿ ಚಿತ್ರಮಂದಿರದ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೆ ಗುಂಟೂರಿನ ಒಂದು ಚಿತ್ರಮಂದಿರದ ಮೇಲೂ ಕಲ್ಲು ತೂರಾಟ ನಡೆದಿದೆ. ನಂತರ ತಿರುಪತಿಯ ಎಸ್‌ಪಿ ಚಿತ್ರಮಂದಿರದಲ್ಲಿಯೂ ಅಲ್ಲು ಅರ್ಜುನ್ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಚಿತ್ರಮಂದಿರದ ಮುಂದೆ ಧರಣಿ ಕುಳಿತಿದ್ದಾರೆ.
ತಿರುಪತಿಯಲ್ಲಿಯೇ ಮತ್ತೊಂದು ಚಿತ್ರಮಂದಿರದಲ್ಲಿ ಸಿನಿಮಾಕ್ಕೆ ಸರಿಯಾಗಿ ಸೌಂಡ್ ನೀಡಿಲ್ಲವೆಂದು ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಇದು ಸಿನಿಮಾದವರ ಸಮಸ್ಯೆ ಎಂದು ಚಿತ್ರಮಂದಿರದವರು ಕಾರಣ ನೀಡಿದರೂ ಅಭಿಮಾನಿಗಳು ಚಿತ್ರಮಂದಿರದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಕೊನೆಗೆ ಪೊಲಿಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡುತ್ತಿದ್ದವರ ಮೇಲೆ ಲಾಠಿ ಬೀಸಿದ್ದಾರೆ.
ಇನ್ನು ಕೇರಳದಲ್ಲಿ ಸಹ 'ಪುಷ್ಪ' ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. 'ಪುಷ್ಪ' ಸಿನಿಮಾದ ಮಲಯಾಳಂ ಆವೃತ್ತಿ ಪೂರ್ಣವಾಗಿ ಸಿದ್ಧವಾಗಿಲ್ಲವಾದ್ದರಿಂದ ಕೇರಳದಲ್ಲಿ ಇಂದು 'ಪುಷ್ಪ' ಸಿನಿಮಾದ ಮಲಯಾಳಂ ಡಬ್ಬಿಂಗ್ ಆವೃತ್ತಿ ಬಿಡುಗಡೆ ಆಗಿಲ್ಲ. ಹಾಗಾಗಿ ಕೇರಳದ ಹಲವೆಡೆ ಶೋ ರದ್ದಾಗಿವೆ. ಕೆಲವು ಕಡೆಗಳಲ್ಲಿ ಮಲಯಾಳಂ ಆವೃತ್ತಿಯ ಬದಲಿಗೆ ತಮಿಳು ಆವೃತ್ತಿಯನ್ನು ಪ್ರದರ್ಶಿಸಲಾಗಿದೆ.


Click it and Unblock the Notifications











