ತನ್ನ ಬರ್ತ್‌ಡೇಗೆ ವಿಶ್ ಮಾಡದ ಅಲ್ಲು ಅರ್ಜುನ್‌ಗೆ ಹುಟ್ಟುಹಬ್ಬದ ದಿನವೇ ತಕ್ಕ ತಿರುಗೇಟು ಕೊಟ್ಟ ರಾಮ್ ಚರಣ್!
ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಟಾಲಿವುಡ್ ಚಿತ್ರರಂಗದ ಸ್ಟಾರ್ ನಟರು. ತೆಲುಗು ಸಿನಿಮಾಗಳ ಮೂಲಕವೇ ಪ್ಯಾನ್ ಇಂಡಿಯಾ ಹಂತವನ್ನು ತಲುಪಿರುವ ಈ ಇಬ್ಬರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾದರೆ, ರಾಮ್ ಚರಣ್ ಮೆಗಾ ಸ್ಟಾರ್ ಚಿರಂಜೀವಿ ಅವರ ಪುತ್ರ.
ಅಲ್ಲು ಅರವಿಂದ್ ಅವರ ಸೋದರಿ ಸುರೇಖ ಕೊನಿಡೆಲಾ ಅವರನ್ನೇ ಮೆಗಾಸ್ಟಾರ್ ಚಿರಂಜೀವಿ ವಿವಾಹವಾಗಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಸಂಬಂಧಿಗಳಾಗಿದ್ದಾರೆ. ಅಲ್ಲು ಅರ್ಜುನ್‌ಗೆ ರಾಮ್ ಚರಣ್ ಸ್ವಂತ ಮಾವನ ಮಗ ಆಗಿದ್ದಾರೆ. ಹೀಗೆ ಸಂಬಂಧವನ್ನು ಹೊಂದಿರುವ ಈ ಎರಡೂ ಕುಟುಂಬಗಳನ್ನು ಸೇರಿಸಿ ಮೆಗಾ ಫ್ಯಾಮಿಲಿ ಎಂದು ಕರೆಯಲಾಗುತ್ತದೆ. ಇನ್ನು ಸಂಬಂಧಿಗಳಾಗಿದ್ದರೂ ಸಹ ಈ ಎರಡು ಕುಟುಂಬಗಳ ನಡುವಿನ ಹೀರೊಗಳ ಮಧ್ಯೆ ಪೈಪೋಟಿ ಇದೆ ಹಾಗೂ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿಗಳು ತೆಲುಗು ಮೀಡಿಯಾಗಳಲ್ಲಿ ಈ ಹಿಂದಿನಿಂದಲೂ ಹರಿದಾಡುತ್ತಿದೆ.

ಈ ರೀತಿಯ ಸುದ್ದಿಗಳಿಗೆ ಇದೀಗ ಮತ್ತಷ್ಟು ಪುಷ್ಟಿ ನೀಡಿರುವುದು ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ನಡೆದುಕೊಂಡಿರುವ ರೀತಿ. ಹೌದು, ಮಾರ್ಚ್ 27ರಂದು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಹುಟ್ಟುಹಬ್ಬವಿತ್ತು. ಆದರೆ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿಶ್ ಮಾಡಿ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಆದರೆ ಅದರ ಮಾರನೇ ದಿನ ಮಾರ್ಚ್ 28ರಂದು ಅಲ್ಲು ಅರ್ಜುನ್ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳನ್ನು ಪೂರೈಸಿದ್ದರು.
ಇದರ ಕುರಿತು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅಲ್ಲು ಅರ್ಜುನ್ ಅವರ ಈ ನಡೆ ಕಂಡಿದ್ದ ಸಿನಿ ರಸಿಕರು ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂದಿದ್ದರು. ಕೆಲವರು ಅಲ್ಲು ಅರ್ಜುನ್‌ಗೆ ರಾಮ್ ಚರಣ್ ಆರ್ಆರ್ಆರ್ ಮೂಲಕ ಸಾಧಿಸಿದ ಸಕ್ಸಸ್ ಕಂಡು ಸಹಿಸಿಕೊಳ್ಳಲಾಗುತ್ತಿಲ್ಲ ಎಂದೂ ಸಹ ಕಾಮೆಂಟ್ ಮಾಡಿದ್ದರು.

ಹೀಗೆ ರಾಮ್ ಚರಣ್ ಹುಟ್ಟುಹಬ್ಬದಂದು ಉಂಟಾಗಿದ್ದ ವಿವಾದ ಇದೀಗ ಮತ್ತೊಮ್ಮೆ ಮರುಕಳಿಸಿದೆ. ಇಂದು ( ಏಪ್ರಿಲ್ 8 ) ಅಲ್ಲು ಅರ್ಜುನ್ ಹುಟ್ಟುಹಬ್ಬ. ರಾಮ್ ಚರಣ್ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದನ್ನು ಮರೆತಿಲ್ಲ. ಆದರೆ ಅಲ್ಲು ಅರ್ಜುನ್‌ಗೆ ರಾಮ್ ಚರಣ್ ವಿಶ್ ಮಾಡಿದ ರೀತಿ ಸದ್ಯ ಟ್ರೋಲ್‌ಗೆ ಒಳಗಾಗಿದ್ದು, ಇಬ್ಬರ ನಡುವೆ ನಿಜಕ್ಕೂ ಎಲ್ಲವೂ ಸರಿ ಇಲ್ಲ ಎಂದು ಸಿನಿ ರಸಿಕರು ಮಾತನಾಡಿಕೊಳ್ಳುವಂತಾಗಿದೆ.
ಹೌದು, ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಕೇವಲ ಹುಟ್ಟುಹಬ್ಬದ ಶುಭಾಶಯಗಳು ಅಲ್ಲು ಅರ್ಜುನ್ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದು, ಇದೇ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಾಗಾರ್ಜುನ ಅವರ ದ್ವಿತೀಯ ಪುತ್ರ ಅಖಿಲ್ ಅಕ್ಕಿನೇನಿಗೆ ಮಾತ್ರ ತಾನು ಹಾಗೂ ಅಖಿಲ್ ಜತೆಗಿರುವ ಫೋಟೊವನ್ನು ಹಂಚಿಕೊಂಡು ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಹೀಗೆ ರಾಮ್ ಚರಣ್ ಅಲ್ಲು ಅರ್ಜುನ್‌ಗೂ ಸಹ ಫೋಟೊ ಹಂಚಿಕೊಳ್ಳುವ ಮೂಲಕ ವಿಶ್ ಮಾಡಬಹುದಿತ್ತು ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ, ರಾಮ್ ಚರಣ್ ಅಭಿಮಾನಿಗಳು ತನ್ನ ಬರ್ತ್‌ಡೇಗೆ ವಿಶ್ ಮಾಡದ ಅಲ್ಲು ಅರ್ಜುನ್‌ಗೆ ಹುಟ್ಟುಹಬ್ಬದ ದಿನವೇ ತಮ್ಮ ನಟ ಸರಿಯಾದ ತಿರುಗೇಟು ನೀಡಿದ್ದಾರೆ ಎಂದು ಕಾಮೆಂಟ್ ಮಾಡಿ ಫ್ಯಾನ್ ವಾರ್ ಮಾಡುತ್ತಿದ್ದಾರೆ. ಇನ್ನು ಸಾಮಾನ್ಯ ಸಿನಿ ರಸಿಕರು ವಿಶ್ ಎಂದರೆ ಸಾಮಾಜಿಕ ಜಾಲತಾಣದಲ್ಲೇ ಮಾಡಬೇಕು ಎಂದೇನಿಲ್ಲ, ಅವರು ಸಂಬಂಧಿಕರಾದ ಕಾರಣ ಕರೆ ಮಾಡಿಯೇ ಶುಭ ಕೋರಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications