'ಕಾಂತಾರ-1' ಚಿತ್ರದ ಬಗ್ಗೆ ಎಳೆ ಎಳೆಯಾಗಿ ರಿವ್ಯೂ ಮಾಡಿದ ನಟ ಅಲ್ಲು ಅರ್ಜುನ್
'ಕಾಂತಾರ- 1' ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿದೆ. ಸದ್ಯ ಸಿನಿಮಾ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಬರಬೇಕಿದೆ. 2 ವಾರಕ್ಕೆ ಸಿನಿಮಾ 717 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಫಿಲ್ಮಸ್ ಘೋಷಿಸಿತ್ತು. ಇದೀಗ ಅಲ್ಲು ಅರ್ಜುನ್ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ.
'ಪುಷ್ಪ' ಸರಣಿ ಸಿನಿಮಾಗಳಲ್ಲಿ ನಟಿಸಿ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. 'ಕಾಂತಾರ' ಹಾಗೂ 'ಪುಷ್ಪ' ಸರಣಿಗಳ ಬಗ್ಗೆ ಕೆಲವರು ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಇಬ್ಬರಲ್ಲಿ ಯಾರ ನಟನೆ ಚೆನ್ನಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಅಲ್ಲು ಅಲ್ಲು ಅರ್ಜುನ್ ಇದೀಗ ಸ್ವತಃ ರಿಷಬ್ ಶೆಟ್ಟಿ ಪ್ರತಿಭೆಯನ್ನು ಕೊಂಡಾಡಿದ್ದಾರೆ.

"ನಿನ್ನೆ ರಾತ್ರಿ 'ಕಾಂತಾರ'-1 ಸಿನಿಮಾ ನೋಡಿದೆ. ವಾಹ್, ಎಂತಹ ಅದ್ಭುತ ಚಿತ್ರ. ನಾನು ಅದನ್ನು ನೋಡುತ್ತಾ ಮೂಕವಿಸ್ಮಿತನಾಗಿದ್ದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ ಏಕವ್ಯಕ್ತಿ ಪ್ರದರ್ಶನಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆಗಳು. ಅವರು ಪ್ರತಿ ವಿಭಾಗದಲ್ಲೂ ಶ್ರೇಷ್ಠರು. ಜಯರಾಂ, ಗುಲ್ಷನ್ ದೇವಯ್ಯ ಹಾಗೂ ರುಕ್ಮಿಣಿ ವಸಂತ್ ನಟನೆ ಸೊಗಸಾಗಿದೆ" ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.
'ಕಾಂತಾರ- 1' ಸಿನಿಮಾ ಇಡೀ ತಂಡದ ಗೆಲುವುದು. ಪ್ರತಿ ವಿಭಾಗದಲ್ಲಿ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ "ತಂತ್ರಜ್ಞರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಧರಣಿ ಕಲಾನಿರ್ದೇಶನ. ಅರ್ಜುನ್ ರಾಜ್ ಸಾಹಸ ಎಲ್ಲವೂ ಅದ್ಭುತ. ವಿಜಯ್ ಕಿರಗಂದೂರ್ ಹಾಗೂ ಇಡೀ ಹೊಂಬಾಳೆ ಸಂಸ್ಥೆಗೆ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ಈ ಅನುಭವನ್ನು ವಿವರಿಸಲು ಪದಗಳು ಸಾಲದು" ಎಂದು ಅಲ್ಲು ಅರ್ಜುನ್ ಕೊಂಡಾಡಿದ್ದಾರೆ.
ಅಲ್ಲು ಅರ್ಜುನ್ ಟ್ವೀಟ್ ಅನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ರೀ-ಟ್ವೀಟ್ ಮಾಡಿದೆ. "ನ್ಯವಾದಗಳು ಅಲ್ಲು ಅರ್ಜುನ್ ಸರ್" ಎಂದು ರಿಪ್ಲೇ ಮಾಡಿದೆ. ಇನ್ನು ರಿಷಬ್ ಶೆಟ್ಟಿ ರಿಪ್ಲೇ ಮಾಡಿ "ನಿಮ್ಮ ಪ್ರೀತಿಯ ಶುಭಾಶಯಕ್ಕೆ ಥ್ಯಾಂಕ್ಯೂ ಅಲ್ಲು ಅರ್ಜುನ್ ಅವ್ರೇ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಿಜವಾಗಿಯೂ ಕೃತಜ್ಞತೆಗಳು. ನಿಮಗೆ ಯಾವಾಗಲೂ ಹೆಚ್ಚಿನ ಶಕ್ತಿ ಮತ್ತು ಯಶಸ್ಸು ಸಿಗಲಿ" ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಪ್ರಭಾಸ್, ಜ್ಯೂ. ಎನ್‌ಟಿಆರ್, ಸಂದೀಪ್ ರೆಡ್ಡಿ ವಂಗಾ, ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವರು ಈಗಾಗಲೇ 'ಕಾಂತಾರ-1' ಸಿನಿಮಾ ನೋಡಿ ಹಾಡಿ ಕೊಂಡಾಡಿದ್ದಾರೆ.
ಪ್ರಭಾಸ್, ಯಶ್, ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್, ರಾಮ್‌ಚರಣ್ ಈಗ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ರಿಷಬ್ ಶೆಟ್ಟಿಗಿಂತ ಒಳ್ಳೆ ಪರ್ಫಾರ್ಮೆನ್ಸ್ ಕೊಟ್ಟವರು ಇರಬಹುದು. ಆದರೆ ರಿಷಬ್ ರೀತಿ ನಿರ್ದೇಶಕನಾಗಿ ನಟನಾಗಿ ಇಷ್ಟು ದೊಡ್ಡ ಚಿತ್ರವನ್ನು ಯಾರು ಮಾಡಿ ಗೆದ್ದಿಲ್ಲ. ಬೇರೆ ಎಲ್ಲಾ ಪ್ಯಾನ್ ಇಂಡಿಯಾ ಸ್ಟಾರ್‌ಗಳಿಗಿಂತ ರಿಷಬ್ ಒಂದು ಮೆಟ್ಟಿಲು ಮೇಲೆ ನಿಲ್ಲುತ್ತಾರೆ. 'ಕಾಂತಾರ-1' ಚಿತ್ರದಲ್ಲಿ ರಿಷಬ್ ನಟನೆ ನಿಜಕ್ಕೂ ಅದ್ಭುತ. ಆದರೆ ಬರಹಗಾರನಾಗಿ ನಿರ್ದೇಶಕನಾಗಿ ಇಡೀ ಚಿತ್ರವನ್ನು ತೆರೆಗೆ ತಂದಿರುವ ಅವರ ಪರಿಶ್ರಮಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ.
'ಪುಷ್ಪ'-2 ಬಳಿಕ ತಮಿಳು ನಿರ್ದೇಶಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಜೋಡಿ ತಯಾರಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ. ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ಸಂಸ್ಥೆಗಳು ಈ ಚಿತ್ರಕ್ಕಾಗಿ ಕೈಜೋಡಿಸುತ್ತಿವೆ.


Click it and Unblock the Notifications











