ಸುಗ್ಗಿ ಸಂಭ್ರಮದಲ್ಲಿ ತೆಲುಗು ನಟನೊಟ್ಟಿಗೆ ಸಿನಿಮಾ ಘೋಷಿಸಿದ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸಿನಿಮಾ ಸದ್ದು ಮಾಡಲಿಲ್ಲ. ಆದರೂ ಆವರೇಜ್ ಹಿಟ್ ಅನಿಸಿಕೊಂಡಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು.
'ಕೂಲಿ' ಬಳಿಕ ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ನಡೆಯುತ್ತಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತೆಲುಗು ನಟ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಲೋಕೇಶ್ ಸಿನಿಮಾ ಘೋಷಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಸದ್ಯ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಬನ್ನಿ ನಟಿಸುತ್ತಿದ್ದಾರೆ. ಮುಂದೆ ಲೋಕೇಶ್ ಜೊತೆ ಕೈ ಜೋಡಿಸುವುದು ಪಕ್ಕಾ ಆಗಿದೆ.

ಕೆಲ ದಿನಗಳಿಂದ ಅಲ್ಲು ಅರ್ಜುನ್‌ಗೆ ಲೋಕೇಶ್ ಕನಕರಾಜ್ ಕಥೆ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇದೀಗ ಅದು ಖಚಿತವಾದಂತೆ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣವಾಗಲಿದೆ. ಇದು ನಿರ್ದೇಶಕರ 7ನೇ ಸಿನಿಮಾ. ಈ ಹಿಂದೆ ಕಟ್ಟಿಕೊಟ್ಟ 6 ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 'ಕೈದಿ' ಹಾಗೂ 'ವಿಕ್ರಂ' ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಂಡಿತ್ತು.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಕಲಾವಿದರು, ತಂತ್ರಜ್ಞರು ಭಾಷೆಯ ಗಡಿ ಮೀರಿ ಕೆಲಸ ಮಾಡುತ್ತಿದ್ದಾರೆ. ಫಿಲ್ಮ್ ಮೇಕರ್ಸ್ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಅದಕ್ಕೆ ನಿರ್ಮಾಪಕರು ನೀರೆರೆಯುತ್ತಿದ್ದು ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣವಾಗುವಂತಾಗಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸರಣಿ ಚಿತ್ರಗಳನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಅದೇ ಸಂಸ್ಥೆ ಈಗ ಮತ್ತೊಮ್ಮೆ ಐಕಾನ್ ಸ್ಟಾರ್ ಚಿತ್ರಕ್ಕೆ ಹಣ ಹೂಡುತ್ತಿದೆ.
ಇದು ಅಲ್ಲು ಅರ್ಜುನ್ ನಟನೆಯ 23ನೇ ಸಿನಿಮಾ. ಸದ್ಯಕ್ಕೆ ಟೈಟಲ್ ಫೈನಲ್ ಆಗಿಲ್ಲ. #AALoki ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಕೆಲಸ ನಡೀತಿದೆ. ಇದೇ ವರ್ಷ ಸಿನಿಮಾ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ. ಒಂದು ಆನಿಮೇಷನ್ ಟೀಸರ್ ಪೋಸ್ಟ್ ಮಾಡಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಸೇರಿ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಆ ಚಿತ್ರಕ್ಕಾಗಿ ಹಾಲಿವುಡ್ ಸಂಸ್ಥೆಗಳು ಕೈಜೋಡಿಸಿವೆ.
ಅಟ್ಲಿ ಬಳಿಕ ಮತ್ತೊಬ್ಬ ತಮಿಳು ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡಲು ಒಪ್ಪಿದ್ದಾರೆ. ತಮಿಳು ನಿರ್ದೇಶಕರು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಅಲ್ಲಿನ ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಹೊತ್ತಲೇ ಲೋಕೇಶ್ ಕನಕರಾಜ್ ಹೊಸ ಸಿನಿಮಾ ಚರ್ಚೆ ಹುಟ್ಟಾಕ್ಕಿದೆ. 'ಮಾನಗರಂ' ಚಿತ್ರಕ್ಕೆ ಮೊದಲ ಬಾರಿಗೆ ಅವರು ಆಕ್ಷನ್ ಕಟ್ ಹೇಳಿದ್ದರು.
ಕಾರ್ತಿ ನಟನೆಯ 'ಕೈದಿ' ಚಿತ್ರ ಸಂಚಲನ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಮಾಡಿ ಗೆದ್ದಿದ್ದರು. ಬಳಿಕ 'ವಿಕ್ರಂ' ಚಿತ್ರ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ ಹಾಸನ್ ಕಂಬ್ಯಾಕ್ ಮಾಡಿದ್ದರು. ಬಳಿಕ ಮತ್ತೆ ವಿಜಯ್ ಜೊತೆ 'ಲಿಯೋ' ಚಿತ್ರಕ್ಕೆ ಕೆಲಸ ಮಾಡಿದ್ದರು.
ಅಲ್ಲು ಅರ್ಜುನ್ ಹಾಗೂ ಲೋಕೇಶ್ ಕನಕರಾಜ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ದೊಡ್ಡ ತಾರಾಗಣ ಚಿತ್ರದಲ್ಲಿ ಇರಲಿದೆ. ಬೇರೆ ಭಾಷೆಯ ಸ್ಟಾರ್ ನಟರನ್ನು ಚಿತ್ರಕ್ಕಾಗಿ ಲೋಕೇಶ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕೆ ಇರಲಿದೆ.


Click it and Unblock the Notifications











