ಹೈದರಾಬಾದ್ ಬಿಟ್ಟು ಮಾಯಾನಗರಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್?
ಟಾಲಿವುಡ್ ನಟ ಅಲ್ಲು ಅರ್ಜುನ್ 'ಪುಷ್ಪ' ಸರಣಿ ಸಿನಿಮಾಗಳ ಬಳಿಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. 'ರಾಕಾ' ಸಿನಿಮಾ ಮೂಲಕ ಈ ಜೋಡಿ ದರ್ಬಾರ್ ಮಾಡಲು ಬರ್ತಿದೆ. ಇತ್ತೀಚೆಗೆ ಬನ್ನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೆಲ್ಲದರ ನಡುವೆ ಅಲ್ಲು ಅರ್ಜುನ್ ಮುಂಬೈಗೆ ಶಿಫ್ಟ್ ಆಗ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ಕೆಲ ಉದ್ಯಮಿಗಳು, ತಾರೆಯರು ತಮ್ಮ ಹುಟ್ಟೂರು ಬಿಟ್ಟು ಮುಂಬೈ ಮಹಾನಗರಿಗೆ ವಾಸ್ತವ್ಯ ಬದಲಿಸಿದ್ದಾರೆ. ತಮಿಳು ನಟ ಸೂರ್ಯ ಮಡದಿ ಮಕ್ಕಳ ಜೊತೆ ಮುಂಬೈಗೆ ಹೋಗಿ ನೆಲೆಸಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಅವರು ವಿವರಿಸಿದ್ದರು. ನಮ್ಮ ಅತ್ತೆ, ಮಾವನಿಗೆ ವಯಸ್ಸಾಗಿದೆ. ಜ್ಯೋತಿಕಾ ಅಲ್ಲೇ ಇದ್ರೆ ಅವರನ್ನು ನೋಡಿಕೊಳ್ಳಬಹುದು, ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾನು ಹೆಚ್ಚಿನ ಸಮಯ ಸಿನಿಮಾ ಚಿತ್ರೀಕರಣದಲ್ಲೇ ಇರ್ತೀನಿ. ಹಾಗಾಗಿ ಆಗಾಗ್ಗೆ ಮುಂಬೈಗೆ ಹೋಗಿ ಬರ್ತೀನಿ ಎಂದು ಸೂರ್ಯ ಹೇಳಿದ್ದರು.

ತೆಲುಗು ನಟಿ ಮಂಚು ಲಕ್ಷ್ಮಿ ಕೂಡ ಮುಂಬೈನಲ್ಲಿ ಬಂಗಲೆ ಖರೀದಿಸಿ ನೆಲೆಸಿದ್ದಾರೆ. ಚಿತ್ರವೊಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ಅಲ್ಲು ಅರ್ಜುನ್ ದಿಢೀರನೆ ಮುಂಬೈನಲ್ಲಿ ನೆಲೆಸುತ್ತಾರೆ ಎನ್ನುವ ಸುದ್ದಿ ಕೇಳಿ ಕೆಲವರು ಅಚ್ಚರಿಗೊಂಡಿದ್ದರು. ಇದೀಗ ಸ್ವತಃ ಅವರ ತಂದೆ ಅಲ್ಲು ಅರವಿಂದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ 'ರಾಕಾ' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೀತಿದೆ. ಪದೇ ಪದೆ ಹೈದರಾಬಾದ್‌ಗೆ ಬಂದು ಹೋಗುವ ಬದಲು ಕೆಲ ದಿನಗಳ ಕಾಲ ಮುಂಬೈನಲ್ಲೇ ಉಳಿಯಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸ್ಟಾರ್ ನಟ ಪದೇ ಪದೆ ಮುಂಬೈ, ಹೈದರಾರಾಬ್ ಫ್ಲೈಟ್ ಏರಿ ಇಳಿಯುವುದು, ಖರ್ಚಿನ ವಿಚಾರದಲ್ಲಿ ಕೂಡ ದುಬಾರಿ ಎನಿಸಿಕೊಳ್ಳಲಿದೆ. ಅದೇ ಕಾರಣಕ್ಕೆ ನಿರ್ಮಾಪಕರಿಗೆ ಸಮಸ್ಯೆ ಬೇಡ ಎಂದು ಅಲ್ಲು ಅರ್ಜುನ್ ಈ ನಿರ್ಧಾರಕ್ಕೆ ಬಂದಿದ್ದಾರೆ. 'ರಾಕಾ' ಚಿತ್ರದಲ್ಲಿ ವಿಚಿತ್ರ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಎರಡ್ಮೂರು ಗಂಟೆಗಳ ಕಾಲ ಮೇಕಪ್ ಹಾಕಿಕೊಳ್ಳಬೇಕು. ಹಾಗಾಗಿ ಹೆಚ್ಚಿನ ಸಮಯ ಬೇಡುತ್ತದೆ.

ಅಲ್ಲು ಅರ್ಜುನ್ ಪ್ರೈವೇಟ್ ಜೆಟ್‌ನಲ್ಲಿ ಓಡಾಡುತ್ತಾರೆ. ಅಷ್ಟೆಲ್ಲಾ ವೆಚ್ಚ ಭರಿಸಲು 'ರಾಕಾ' ಸಿನಿಮಾ ನಿರ್ಮಾಣ ಮಾಡುತ್ತಿರುವ ಸನ್ ಪಿಕ್ಚರ್ಸ್ ಸಂಸ್ಥೆ ಒಪ್ಪುತ್ತಿಲ್ಲ. ಅದೇ ಕಾರಣಕ್ಕೆ ಸಿನಿಮಾ ಚಿತ್ರೀಕರಣ ಮುಗಿಯುವರೆಗೂ ಅಲ್ಲು ಅರ್ಜುನ್ ಮುಂಬೈನಲ್ಲೇ ಉಳಿಯುತ್ತಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದೆಲ್ಲದ್ದಕ್ಕೂ ಅವರ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಉತ್ತರ ಕೊಟ್ಟಿದ್ದಾರೆ. ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
"ರಾಕಾ ಚಿತ್ರದ ಹೆಚ್ಚಿನ ಚಿತ್ರೀಕರಣ ಮುಂಬೈನಲ್ಲಿ ನಡೀತಿದೆ. ಹಾಗಾಗಿ ಕೆಲವರಿಗೆ ಈ ರೀತಿ ಅನ್ನಿಸಿರಬಹುದು. ಆದರೆ ಅಲ್ಲು ಅರ್ಜುನ್ ಮನಸ್ಸು ಸದಾ ಹೈದರಾಬಾದ್ ಸುತ್ತಾ ಸುತ್ತುತ್ತಿರುತ್ತದೆ. ಇಲ್ಲೇ ಸ್ವಂತ ಮನೆ ಇದೆ. ಮಕ್ಕಳು ಓದುತ್ತಿದ್ದಾರೆ. ಸ್ನೇಹಿತರು ಎಲ್ಲರೂ ಹೈದರಾಬಾದ್‌ನಲ್ಲೇ ಇದ್ದಾರೆ. ಹಾಗಿರುವಾಗಿ ಅಲ್ಲು ಅರ್ಜುನ್ ಯಾಕೆ ಮುಂಬೈಗೆ ಶಿಫ್ಟ್ ಆಗ್ತಾನೆ? ಮುಂಬೈನಲ್ಲೇ ಸೆಟ್ಲ್ ಆಗುವ ಆಲೋಚನೆ ಆತನಿಗೆ ಇಲ್ಲ" ಎಂದು ಅಲ್ಲು ಅರವಿಂದ್ ತಿಳಿಸಿದ್ದಾರೆ.
800 ಕೋಟಿ ರೂ. ಬಜೆಟ್‌ನಲ್ಲಿ 'ರಾಕಾ' ಸಿನಿಮಾ ನಿರ್ಮಾಣ ಆಗ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ದೀಪಿಕಾ ಪಡುಕೋಣೆ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಆಕೆ 2ನೇ ಬಾರಿ ಗರ್ಭಿಣಿ ಆಗಿರುವ ಸಿಹಿಸುದ್ದಿ ಹಂಚಿಕೊಂಡಿದ್ದರು. ಹಾಗಾಗಿ ಆದಷ್ಟು ಬೇಗ ದೀಪಿಕಾ ನಟಿಸುವ ಸನ್ನಿವೇಶಗಳನ್ನು ಸೆರೆಹಿಡಿಯಲು ಅಟ್ಲಿ ಅಂಡ್ ಟೀಮ್ ಸಜ್ಜಾಗಿದೆ ಎನ್ನಲಾಗ್ತಿದೆ.


Click it and Unblock the Notifications