ಅಪ್‌ಗ್ರೇಡ್ ಆಗಿದೆ 'ಪುಷ್ಪ'ನ 'ತಗ್ಗೇದೆ ಲೇ'! 'ಪುಷ್ಪ 2' ಸಿನಿಮಾದ ಪಂಚ್ ಡೈಲಾಗ್ ಏನು?
ಬಾಲಿವುಡ್ ಪ್ರದೇಶದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಭರ್ಜರಿ ಯಶಸ್ಸು ಗಳಿಸುತ್ತಿವೆ. ಒಂದರ ಹಿಂದೆ ಒಂದು ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್-ಡೂಪರ್ ಹಿಟ್ ಆಗುತ್ತಿವೆ.
ಹಿಂದಿ ಭಾಷಿಕ ಪ್ರದೇಶದ ಮೇಲೆ ದಕ್ಷಿಣ ಭಾರತ ಸಿನಿಮಾಗಳ ದಂಡಯಾತ್ರೆ ಪ್ರಾರಂಭವಾಗಿದ್ದು 'ಪುಷ್ಪ' ಸಿನಿಮಾ ಮೂಲಕ. ಅದಕ್ಕೂ ಮುನ್ನ 'ಬಾಹುಬಲಿ 2' ಹಾಗೂ ಇನ್ನಿತರೆ ಕೆಲವೇ ಸಿನಿಮಾಗಳು ಹಿಂದಿ ಪ್ರದೇಶದಲ್ಲಿ ಹಿಟ್ ಆಗಿದ್ದವು. ಆದರೆ 'ಪುಷ್ಪ' ಸಿನಿಮಾದ ಬಳಿಕ ಹಲವು ದಕ್ಷಿಣ ಭಾರತದ ಸಿನಿಮಾಗಳು ಹಿಂದಿಯಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದವು.
ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆದ 'ಪುಷ್ಪ' ಸಿನಿಮಾ ತನ್ನ ನೇಟಿವ್ ಕತೆಯಿಂದ, ಗುನುಗುವ ಹಾಡುಗಳ ಮೂಲಕ, ಭರ್ಜರಿ ಆಕ್ಷನ್ ದೃಶ್ಯಗಳ ಮೂಲಕ ಹಾಗೂ ಭರ್ಜರಿ ಡೈಲಾಗ್‌ಗಳ ಮೂಲಕ ಗಮನ ಸೆಳೆದಿತ್ತು. 'ಪುಷ್ಪ' ಸಿನಿಮಾದ ಡೈಲಾಗ್‌ಗಳಂತೂ ಯುವಕರಿಗೆ ಕಂಠಪಾಠವಾಗಿತ್ತು.

ಸಖತ್ ಹಿಟ್ ಆಗಿತ್ತು ಡೈಲಾಗ್
ಸಿನಿಮಾದಲ್ಲಿ ಪುಷ್ಪ ಪಾತ್ರಧಾರಿ ಅಲ್ಲು ಅರ್ಜುನ್ ತನ್ನ ಗಡ್ಡವನ್ನು ಒಂದು ಕೈಯಲ್ಲಿ ಸವರಿಕೊಳ್ಳುತ್ತಾ, 'ತಗ್ಗೇದೆ ಲೇ' ಎನ್ನುತ್ತಿದ್ದಂತೆ ಚಿತ್ರಮಂದಿರದ ತಾರಸಿ ಹಾರುವಂತೆ ಶಿಳ್ಳೆ-ಚಪ್ಪಾಳೆಗಳು ಬೀಳುತ್ತಿದ್ದವು. ತೆಲುಗಿನಲ್ಲಿ 'ತಗ್ಗೇದೆ ಲೇ' ಎಂಬ ಡೈಲಾಗ್ ಹಿಂದಿಯಲ್ಲಿ 'ಸಾಲ ಜುಕೇಗಾ ನೈ' ಆಗಿ ಬದಲಾಗಿತ್ತು. ಕನ್ನಡದಲ್ಲಿ 'ನನ್ ಮಗಂದ್ ತಗ್ಗೋದೆ ಇಲ್ಲ' ಎಂದಾಗಿತ್ತು. ಎಲ್ಲ ಭಾಷೆಯಲ್ಲಿಯೂ ಈ ಡೈಲಾಗ್‌ಗಳು ಭಾರಿ ಹಿಟ್ ಆಗಿದ್ದವು. ಸಾಮಾಜಿಕ ಜಾಲತಾಣದ ರೀಲ್ಸ್‌ಗಳಲ್ಲಿ ಸಹ ಬಳಕೆಯಾಗಿದ್ದವು. ಕೆಲವು ಖ್ಯಾತನಾಮ ನಟರು ಸಹ ಈ ಡೈಲಾಗ್ ಹೇಳಿ ವಿಡಿಯೋ ಮಾಡಿದ್ದರು.

'ಪುಷ್ಪ 2' ಸಿನಿಮಾದ ಥೀಮ್ ಡೈಲಾಗ್
ಇದೀಗ 'ಪುಷ್ಪ 2' ಸಿನಿಮಾ ಬರುತ್ತಿದ್ದು, ಈ ಸಿನಿಮಾದಲ್ಲಿಯೂ ಒಂದು ಥೀಮ್ ಡೈಲಾಗ್ ಇರಲಿದೆ. ಈ ಡೈಲಾಗ್ ಏನಿರಬಹುದು ಎಂಬ ಕುತೂಹಲ ಸಹಜವಾಗಿಯೇ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ 'ಪುಷ್ಪ 2' ಸಿನಿಮಾದ ಥೀಮ್ ಡೈಲಾಗ್ ಅನ್ನು ಅಭಿಮಾನಿಗಳಿಗಾಗಿ ಎಕ್ಸ್‌ಕ್ಲೂಸಿವ್ ಆಗಿ ಹೇಳಿದ್ದಾರೆ!

ಡೈಲಾಗ್ ಹೇಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ತಮ್ಮ ಸಹೋದರ ಅಲ್ಲು ಸಿರೀಶ್‌ರ 'ಊರ್ವಶಿವೋ ರಾಕ್ಷಿಸಿಯೊ' ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸಿದ್ದದರು. ಕಾರ್ಯಕ್ರಮದಲ್ಲಿ ತಮ್ಮ ಸಹೋದರ, ತಮ್ಮ ಕುಟುಂಬ, ತೆಲುಗು ಸಿನಿಮೋದ್ಯಮ, ಅಭಿಮಾನಿಗಳು ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್, ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳ ಬಳಿ, 'ಪುಷ್ಪ 2' ಸಿನಿಮಾದ ಬಗ್ಗೆ ಮಾತನಾಡಿ, 'ಪುಷ್ಪ' 'ತಗ್ಗೇದೆ ಲೇ' ಎಂದರೆ, 'ಪುಷ್ಪ 2' 'ಅಸ್ಸಲು ತಗ್ಗೇದೆ ಲೇ' ಎಂದಿದ್ದಾರೆ.

ಮುಂದಿನ ಸಂಕ್ರಾಂತಿಗೆ 'ಪುಷ್ಪ 2' ಬಿಡುಗಡೆ
'ಪುಷ್ಪ' ಸಿನಿಮಾ ಚೆನ್ನಾಗಿತ್ತು, 'ಪುಷ್ಪ 2' ಅದಕ್ಕಿಂತಲೂ ಸೂಪರ್ ಆಗಿರಲಿದೆ. ಇದನ್ನು ನಾನು ಗ್ಯಾರೆಂಟಿ ನೀಡುತ್ತೇನೆ ಎಂದಿದ್ದಾರೆ. 'ಅಸ್ಸಲು, ತಗ್ಗೇದೆ ಲೇ' ತೆಲುಗು ಸಂಭಾಷಣೆಯನ್ನು ಕನ್ನಡಕ್ಕೆ ತರ್ಜುಮೆಗೊಳಿಸಿದರೆ, 'ಖಂಡಿತ ತಗ್ಗೋದೆ ಇಲ್ಲ' ಎಂದಾಗುತ್ತದೆ. 'ಪುಷ್ಪ 2' ಸಿನಿಮಾವು ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. 'ಪುಷ್ಪ' ಸಿನಿಮಾದ ಮೊದಲ ಭಾಗದಲ್ಲಿದ್ದ ಬಹುತೇಕರು 'ಪುಷ್ಪ 2' ನಲ್ಲಿ ಇರಲಿದ್ದಾರೆ. ಫಹಾದ್ ಫಾಸಿಲ್ ಜೊತೆಗೆ ಇನ್ನೊಬ್ಬ ಪವರ್‌ಫುಲ್ ವಿಲನ್ ಸಹ ಈ ಸಿನಿಮಾದಲ್ಲಿರುವ ಸಾಧ್ಯತೆ ಇದೆ. ಕನ್ನಡದ ಡಾಲಿ ಧನಂಜಯ್ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರಲಿದೆ.


Click it and Unblock the Notifications











