"ಆ ಹೀರೊಯಿನ್ ಕೆಣಕಿದ್ಲು, ಅದಕ್ಕೆ ನಾನು ಸಾಬೀತು ಮಾಡಿ ತೋರಿಸಿದ್ದೆ"; ಅಲ್ಲು ಅರ್ಜುನ್
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ'-2 ಸಕ್ಸಸ್ ಅಲೆಯಲ್ಲೇ ಇನ್ನು ತೇಲುತ್ತಿದ್ದಾರೆ. ಇತ್ತೀಚೆಗೆ ಅಟ್ಲಿ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಘೋಷಣೆ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ಮೂಡಿ ಬರಲಿದೆ. ವೇವ್ಸ್ ಸಮ್ಮಿಟ್(Waves summit 2025)ನಲ್ಲಿ ಭಾಗಿ ಆಗಿದ್ದ ಅಲ್ಲು ಅರ್ಜುನ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ಕಾಲಿವುಡ್‌ನಲ್ಲಿ ಮೊದಲು ಸಿಕ್ಸ್‌ಪ್ಯಾಕ್ ಆಬ್ಸ್ ಪ್ರದರ್ಶಿಸಿದ ಹೀರೊ ಯಾರು ಎಂಬ ಚರ್ಚೆ ಇತ್ತೀಚೆಗೆ ಸದ್ದು ಮಾಡಿತ್ತು. ಅದಕ್ಕೆ ಕಾರಣ ನಟ ಸೂರ್ಯ ಅವರ ತಂದೆ ಶಿವಕುಮಾರ್ ನೀಡಿದ್ದ ಹೇಳಿಕೆ. ತಮಿಳು ಚಿತ್ರರಂಗದಲ್ಲಿ ನನ್ನ ಮಗ ಸೂರ್ಯ ಮೊದಲ ಬಾರಿ ಸಿಕ್ಸ್‌ಪ್ಯಾಕ್ ಮಾಡಿ ತೋರಿಸಿದ್ದ ಎಂದು ಅವರು ಹೇಳಿದ್ದರು. ಈ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಚರ್ಚೆ ನಡೆದಿತ್ತು. ಬಳಿಕ ಸೂರ್ಯ ಅಲ್ಲ ಧನುಷ್ ಎಂದು ನಟ ವಿಶಾಲ್ ಹೇಳಿ ಎಲ್ಲದ್ದಕ್ಕೂ ತೆರೆ ಎಳೆದಿದ್ದರು.

ಇದೀಗ ದಕ್ಷಿಣದಲ್ಲಿ ಮೊದಲು ಸಿಕ್ಸ್‌ಪ್ಯಾಕ್ ಮಾಡಿ ತೆರೆಮೇಲೆ ತೋರಿಸಿದ್ದು ನಾನೇ ಎಂದು ತೆಲುಗು ನಟ ಅಲ್ಲು ಅರ್ಜುನ್ ಹೇಳಿದ್ದಾರೆ. ನಿರಂತರವಾಗಿ ಫಿಟ್ ಆಗಿರಲು ಎಂತಹ ಪರಿಶ್ರಮ ಬೇಕು ಎಂದು ವೇವ್ಸ್ ಸಮ್ಮಿಟ್‌ನಲ್ಲಿ ಎದುರಾದ ಪ್ರಶ್ನೆಗೆ ಸ್ಟೈಲಿಶ್ ಸ್ಟಾರ್ ಉತ್ತರಿಸಿದ್ದಾರೆ. "ನಿಜ ಹೇಳಬೇಕು ಅಂದ್ರೆ, ಇದು ಕೇವಲ ಮನಸ್ಥಿತಿಗೆ ಸಂಬಂಧಿಸಿದ್ದು. ನಿಮಗೆ ಗೊತ್ತಾ, ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣದ ಯಾವುದೇ ನಟರು ಮಾಡಿರದ್ದನ್ನು ನಾನು ಮಾಡಿ ತೋರಿಸಿದ್ದೆ" ಎಂದು ಅವರು ಹೇಳಿದ್ದಾರೆ.
"ಯಾರೋ ಒಬ್ಬರು, ದಕ್ಷಿಣದ ಯಾವುದೇ ನಟರು ಸಿಕ್ಸ್ ಪ್ಯಾಕ್ ಮಾಡಿ ತೋರಿಸೋಕೆ ಸಾಧ್ಯವಿಲ್ಲ ಎಂದು ಹೇಳಿ ನನ್ನನ್ನು ಪ್ರೇರೇಪಿಸಿದ್ದು. ನಾನು ಒಟ್ಟಿಗೆ ಕೆಲಸ ಮಾಡಿದ್ದ ನಟಿಯರಲ್ಲಿ ಒಬ್ಬರು ಆ ರೀತಿ ಹೇಳಿದರು. ಬಳಿಕ ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ. ನಾನು ಅದನ್ನು ನನ್ನ ಅಭಿಮಾನಿಗಳಿಗಾಗಿ ಮಾಡಿದ್ದೇನೆ." ಎಂದು ಅಲ್ಲು ಅರ್ಜುನ್ ವಿವರಿಸಿದ್ದಾರೆ.
'ಗಂಗೋತ್ರಿ' ಚಿತ್ರದ ಮೂಲಕ ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಆರ್ಯ', 'ಬನ್ನಿ', 'ಹ್ಯಾಪಿ' ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದರು. ಬಳಿಕ ದೇಶಮುದುರು ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಅಬ್ಬರಿಸಿದ್ದರು. ಪೂರಿ ಜಗನ್ನಾಥ್ ಆ ಚಿತ್ರವನ್ನು ನಿರ್ದೇಶಿಸಿದ್ದರು. ಅದೇ ಚಿತ್ರದಲ್ಲಿ ಬನ್ನಿ ಶರ್ಟ್‌ಲೆಸ್ ಆಗಿ ಸಿಕ್ಸ್‌ಪ್ಯಾಕ್ ಆಬ್ಸ್ ಮಾಡಿ ತೋರಿಸಿದ್ದರು.

ಸಿಕ್ಸ್‌ಪ್ಯಾಕ್ ಬಗ್ಗೆ ತಮ್ಮ ಬಳಿಕ ಚಾಲೆಂಜ್ ಮಾಡಿ ಮಾತನಾಡಿದ್ದು ಯಾರು ಎನ್ನುವುದನ್ನು ಮಾತ್ರ ಅಲ್ಲು ಅರ್ಜುನ್ ಹೇಳಿಲ್ಲ. ಅದಕ್ಕೂ ಮುನ್ ಜೆನಿಲಿಯಾ ಹಾಗೂ ಗೌರಿ ಮುಂಜಾಲ್ ಜೊತೆ ಅಲ್ಲು ಅರ್ಜುನ್ ತೆರೆ ಹಂಚಿಕೊಂಡಿದ್ದರು. ಅವರಿಬ್ಬರಲ್ಲಿ ಯಾರಾದರೂ ಒಬ್ಬರೂ ಹೀಗೆ ಹೇಳಿರಬಹುದಾ? ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. 'ವರಡು' ಚಿತ್ರದಲ್ಲಿ ಕೂಡ ಸ್ಟೈಲಿಶ್ ಸ್ಟಾರ್ ಸಿಕ್ಸ್ ಪ್ಯಾಕ್ ಮಾಡಿ ಹುಬ್ಬೇರಿಸಿದ್ದರು. ಆದರೆ ಆ ಚಿತ್ರ ಹೀನಾಯವಾಗಿ ಸೋತಿತ್ತು.
ನಾಯಕ ನಟರು ಸಿಕ್ಸ್‌ಪ್ಯಾಕ್ ಪ್ರದರ್ಶಿಸುವುದು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ಆದರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಟ್ರೆಂಡ್ ಸೃಷ್ಟಿಸಿದರು. 90 ದಶಕದಲ್ಲೇ ಶರ್ಟ್‌ಲೆಸ್ ಆಗಿ ತೆರೆಮೇಲೆ ಸಿಕ್ಸ್‌ಪ್ಯಾಕ್ ಆಬ್ಸ್ ಪ್ರದರ್ಶಿಸಿ ಹುಬ್ಬೇರಿಸಿದ್ದರು. ಬಳಿಕ ಬಾಲಿವುಡ್ ಹೀರೊಗಳು ಒಬ್ಬೊಬ್ಬರಾಗಿ ಅದನ್ನು ಅನುಸರಿಸಿದರು. ಮುಂದೆ ಸೌತ್ ಸಿನಿದುನಿಯಾದಲ್ಲಿ ಕೂಡ ಇದು ಟ್ರೆಂಡ್ ಆಗಿತ್ತು.
ಹಿಂದಿ ಬಳಿಕ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸ್ಟಾರ್ ನಟರು ಸಿಕ್ಸ್‌ಪ್ಯಾಕ್ ಹುಚ್ಚಿಗೆ ಬಿದ್ದರು. ಕನ್ನಡದಲ್ಲಿ ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಲವ್ಲಿಸ್ಟಾರ್ ಪ್ರೇಮ್, ಶಿವಣ್ಣ, ದುನಿಯಾ ವಿಜಯ್, ವಿನೋದ್ ಪ್ರಭಾಕರ್ ಹೀಗೆ ಹಲವರು ದೇಹ ಹುರಿಗೊಳಿಸಿ ಸಿಕ್ಸ್‌ಪ್ಯಾಕ್ ಮಾಡಿದ್ದರು.


Click it and Unblock the Notifications











