ಮಧ್ಯಂತರ ಬೇಲ್ ಸಿಕ್ಕರೂ ರಾತ್ರಿ ಜೈಲಿನಲ್ಲೇ ಕಳೆದ ಅಲ್ಲು ಅರ್ಜುನ್; ಬೆಳ್ಳಂ ಬೆಳಗ್ಗೆ ಬಿಡುಗಡೆ
ಆಂಧ್ರ-ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಬಂಧನ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕಾಲ್ತುಳಿತ ಪ್ರಕರಣದಲ್ಲಿ 'ಪುಷ್ಪ'-2 ನಟನಿಗೆ ಸಂಕಷ್ಟ ಎದುರಾಗಿದೆ. ನಿನ್ನೆ(ಡಿಸೆಂಬರ್ 13)ಮಧ್ಯಾಹ್ನ ಚಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದರು. ಮಧ್ಯಂತರ ಜಾಮೀನು ಸಿಕ್ಕರೂ ನಟ ಒಂದು ರಾತ್ರಿ ಜೈಲಿನಲ್ಲಿ ಉಳಿಯಬೇಕಾಯಿತು.
ಇಂದು(ಡಿಸೆಂಬರ್ 14) ಬೆಳ್ಳಂ ಬೆಳಗ್ಗೆ ನಟ ಅಲ್ಲು ಅರ್ಜುನ್ ಚಂಚಲಗೂಡ್ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದಾರೆ. ಸಿನಿಮಾ ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಹೈದರಾಬಾದ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಘಟನೆ ಸಂಬಂಧ ದೂರು ದಾಖಲಾಗಿತ್ತು.

ಮೃತ ಮಹಿಳೆ ರೇವತಿ ಪತಿ ನೀಡಿದ ದೂರಿನ ಅನ್ವಯ ಚಿತ್ರಮಂದಿರದ ಮಾಲೀಕರು, ಅಲ್ಲು ಅರ್ಜುನ್ ಹಾಗೂ ಅವರ ಅಂಗ ರಕ್ಷಕರಿಗೆ ಸಂಕಷ್ಟ ಎದುರಾಗಿದೆ. ತಮ್ಮ ವಿರುದ್ಧದ ಪ್ರಕರಣದ ರದ್ದು ಕೋರಿ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೂ ಶುಕ್ರವಾರ(ಡಿಸೆಂಬರ್ 13) ಮಧ್ಯಾಹ್ನ ಪೊಲೀಸರು ನಟನ ಮನೆಗೆ ಭೇಟಿ ನೀಡಿ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದರು. ನಾಂಪಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು.
ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಆದರೆ ಬಳಿಕ ಮಧ್ಯಂತರ ಜಾಮೀನು ಕೂಡ ಸಿಕ್ಕಿತ್ತು. ಒಂದೇ ದಿನದಲ್ಲಿ ನಡೆದ ಹೈಡ್ರಾಮಾದಲ್ಲಿ ಅಲ್ಲು ಅರ್ಜುನ್ ರಾತ್ರಿಯೇ ಬಿಡುಗಡೆ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಕೋರ್ಟ್ ವಿಧಿಸಿದ ಷರತ್ತುಗಳನ್ನು ಪೂರೈಸಿದರೂ ಅಷ್ಟರಲ್ಲಾಗಲೇ ಸಮಯ ಮೀರಿತ್ತು.
ಭದ್ರತೆ ಕಾರಣದಿಂದ ಜೈಲಿನ ಹಿಂಬದಿ ಗೇಟ್ ಮೂಲಕ ಅಲ್ಲು ಅರ್ಜುನ್ ಕಾರಿನಲ್ಲಿ ತಮ್ಮ ಗೀತಾ ಆರ್ಟ್ಸ್ ಕಛೇರಿಗೆ ಹೊರಟರು. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ತಲುಪಿದರು. ಬಂಧನ ಬಳಿಕ ಅಲ್ಲು ಅರ್ಜುನ್ ಅವರನ್ನು ಗಾಂಧಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ನಂತರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಬಂಧನದ ಬೆನ್ನಲ್ಲೇ ವಕೀಲರ ಮೂಲಕ ಮಧ್ಯಂತರ ಜಾಮೀನು ಕೋರಿ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಮಧ್ಯಂತ ಜಾಮೀನು ಕೊಡಿಸುವಲ್ಲಿ ವಕೀಲರು ಯಶಸ್ವಿ ಆಗಿದ್ದರು. ಆದರೂ ಕೂಡ ಒಂದು ರಾತ್ರಿ ಜೈಲಿನಲ್ಲೇ ಕಳೆಯುವಂತಾಯಿತು. ಕಾನೂನೂ ಎಲ್ಲರಿಗೂ ಒಂದೇ ಎನ್ನುವುದು ಇದರಿಂದ ಸಾಬೀತಾಗಿದೆ.
ನಟ ಅಲ್ಲು ಅರ್ಜುನ್ ಮೇಲಿನ ಆರೋಪ ನಿಜವೋ ಇಲ್ಲವೇ ಎನ್ನುವುದು ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ. ಆದರೆ ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಸಮಾನ ನ್ಯಾಯ. ಬಡವರು, ಶ್ರೀಮಂತರು, ಸೆಲೆಬ್ರೆಟಿ ಎನ್ನುವ ತಾರತಮ್ಯ ಇಲ್ಲ. ಸಾಕಷ್ಟು ಸಂದರ್ಭದಲ್ಲಿ ಶುಕ್ರವಾರ ಪ್ರಭಾವಿ ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ. ಕಾರಣ ಜಾಮೀನು ಸಿಗಲು ತಡವಾಗಬೇಕು ಎಂದೇ ಈ ರೀತಿ ಮಾಡುತ್ತಾರೆ ಎನ್ನುವ ವಾದ ಕೆಲವರದ್ದು.
ಶನಿವಾರ, ಭಾನುವಾರ ರಜೆ ಇರುವುದರಿಂದ ಸೋಮವಾರದವರೆಗೆ ಜಾಮೀನು ಸಿಗಬಾರದು ಎಂದೇ ಈ ರೀತಿ ಮಾಡುತ್ತಾರೆ ಎನ್ನಲಾಗುತ್ತದೆ. ಅಲ್ಲು ಅರ್ಜುನ್ ವಿಚಾರದಲ್ಲೂ ಹೆಚ್ಚು ಕಮ್ಮಿ ಹೀಗೆ ಆಗಿದೆ. ಶುಕ್ರವಾರ ಸಂಜೆ ಮಧ್ಯಂತರ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಸಿಗಲಿಲ್ಲ. ಒಂದು ರಾತ್ರಿ ಜೈಲಿನಲ್ಲಿ ಇರುವಂತಾಯಿತು.
ಮುಂದಿನ ದಿನಗಳಲ್ಲಿ ಅಲ್ಲು ಅರ್ಜುನ್ ಪ್ರಕರಣವನ್ನು ತೋರಿಸಿ ಬೇರೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಾಗ ಶುಕ್ರವಾರ ರಾತ್ರಿಯೇ ಬಿಡುಗಡೆ ಮಾಡಬೇಕು ಎನ್ನುವ ಒತ್ತಾಯ ಶುರುವಾಗಬಹುದು. ಹಾಗಾಗಿ ಕಾನೂನು ಎಲ್ಲರಿಗೂ ಒಂದೇ ಎಂದು ಈ ಪ್ರಕರಣದ ಮೂಲಕ ಸಾರಿ ಹೇಳಿದಂತಿದೆ.


Click it and Unblock the Notifications











