ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಸಿನಿಮಾ ಚಿತ್ರೀಕರಣ ಸ್ಥಗಿತ
ನಟ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಪುಷ್ಪಾ' ಚಿತ್ರತಂಡದಿಂದ ತುಸು ಆತಂಕಕಾರಿ ಸುದ್ದಿಯೊಂದು ಬಂದಿದೆ.
ಪುಷ್ಪಾ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಆರಂಭವಾಗಿತ್ತು, ಚಿತ್ರೀಕರಣ ಹುರುಪಿನಿಂದ ಸಾಗುತ್ತಿರುವಾಗಲೇ ಸೆಟ್‌ಗೆ ಕೊರೊನಾ ವಕ್ಕರಿಸಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
ನಿಯಮಾನುಸಾರ ಚಿತ್ರೀಕರಣ ಸೆಟ್‌ನಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಸೆಟ್‌ನಲ್ಲಿದ್ದ ಕೆಲವರಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದಿದೆಯಂತೆ. ಅದರಲ್ಲಿಯೂ ಸಿನಿಮಾದ ನಿರ್ದೇಶಕ ಸುಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ನಿರ್ದೇಶಕ ಸುಕುಮಾರ್ ಅವರಿಗೆ ಪ್ರಸ್ತುತ ನೆಗೆಟಿವ್ ವರದಿ ಬಂದಿದೆ ಆದರೂ, ಪಾಸಿಟಿವ್ ಬಂದ ವ್ಯಕ್ತಿಯೊಡನೆ ಹತ್ತಿರದ ಸಂಪರ್ಕದಲ್ಲಿದ್ದ ಕಾರಣ ಅವರು ಸ್ವ-ಕ್ವಾರಂಟೈನ್‌ಗೆ ಒಳಗಾಗಿದ್ದಾರಂತೆ.
ಒಂದು ವಾರದ ಕಾರಣ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದ್ದು, ಒಂದು ವಾರದ ನಂತರ ಸುಕುಮಾರ್ ಅವರಿಗೆ ಹಾಗೂ ಉಳಿಕೆ ಚಿತ್ರತಂಡಕ್ಕೆ ಮತ್ತೆ ಕೊರೊನಾ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರಷ್ಟೆ ಚಿತ್ರೀಕರಣ ಪುನಃ ಪ್ರಾರಂಭ ಮಾಡಲಾಗುತ್ತದೆ.
ಪುಷ್ಪಾ ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಕುರಿತ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಧನಂಜಯ್ ಸಹ ಇದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ, ಪುಷ್ಪಾ ದಲ್ಲಿ ವಿಲನ್ ಆಗಿ ಬಣ್ಣ ಹಚ್ಚಲಿದ್ದಾರೆ. ಜಗಪತಿಬಾಬು ಸಹ ಸಿನಿಮಾದಲ್ಲಿದ್ದಾರೆ.


Click it and Unblock the Notifications











