'KGF' ನೋಡಿ 'ಪುಷ್ಪ'.. 'ಕಾಂತಾರ' ನೋಡಿ 'ಪುಷ್ಪ'- 2: ಉಗ್ರ ಗಂಗಮ್ಮ ತಲ್ಲಿ ಅವತಾರಕ್ಕೆ ಪಂಜುರ್ಲಿ ಪ್ರೇರಣೆ?
ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಚಿತ್ರದ ಕಾನ್ಸೆಪ್ಟ್ ವಿಡಿಯೋ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸಖತ್ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ಬರ್ತ್‌ಡೇ ಸ್ಪೆಷಲ್ ಆಗಿ ಸುಕುಮಾರ್ ಅಂಡ್ ಟೀಂ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದೆ. ಅಫೀಷಿಯಲ್ ಆಗಿ ಪೋಸ್ಟರ್ ರಿಲೀಸ್‌ಗೂ ಮೊದ್ಲೆ ಲೀಕ್ ಆಗಿತ್ತು. ಕೊನೆಗೆ ಚಿತ್ರತಂಡವೂ ಅದನ್ನೇ ಪ್ರೇಕ್ಷಕರ ಮುಂದಿಟ್ಟಿದೆ.
'ಪುಷ್ಪ'- 2 ಫಸ್ಟ್ ಲುಕ್ ಪೋಸ್ಟರ್ ನೋಡಿದವರಿಗೆ ರಿಷಬ್ ಶೆಟ್ಟಿ ನಿರ್ದೇಶಿಸಿದ ನಟಿಸಿದ 'ಕಾಂತಾರ' ಸಿನಿಮಾ ನೆನಪಾಗುತ್ತಿದೆ. ಚಿತ್ರದಲ್ಲಿ ರಿಷಬ್ ಪಂಜುರ್ಲಿ ದೈವದ ವೇಷದಲ್ಲಿ ಕಾಣಿಸಿಕೊಂಡು ನೋಡುಗರನ್ನ ಮಂತ್ರಮುಗ್ಧರನ್ನಾಗಿಸಿದ್ದರು. ಇದೀಗ 'ಪುಷ್ಪ' ಸೀಕ್ವೆಲ್‌ನಲ್ಲಿ ಅಲ್ಲು ಅರ್ಜುನ್ ಕಾಳಿಯ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಉಗ್ರರೂಪಧಾರಿ ಗಂಗಮ್ಮ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. 'ಕಾಂತಾರ' ಸಿನಿಮಾ ಎಫೆಕ್ಟ್ ಈ ಸಿನಿಮಾ ಮೇಲಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ರೇಷ್ಮೆ ಸೀರೆ ಉಟ್ಟು, ಮೂಗುತಿ, ಓಲೆ ಜುಮುಕಿ, ಕೈಯಲ್ಲಿ ಕೆಂಪು ಬಣ್ಣ, ಉಗುರಿಗೆ ಬಣ್ಣ, ಕೈಯಲ್ಲಿ ಬಳೆ, ಕುತ್ತಿಗೆಯಲ್ಲಿ ಚಿನ್ನದ ಸರ, ನಿಂಬೆ ಹಣ್ಣಿನ ಹಾರ ತೊಟ್ಟು ಕಣ್ಣು ಕೆಂಪಾಗಿ ಗಂಭೀರವಾಗಿ ಗಂಗಮ್ಮನ ರೂಪದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೈಯಲ್ಲಿರೋ ಗನ್ನು ಎಲ್ಲರ ಗಮನ ಸೆಳೀತಿದೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಇಂತಾದೊಂದು ವೇಷ ಹಾಕಿರೋದು ನೋಡಿ ಕೆಲವರು ದಂಗಾಗಿದ್ದಾರೆ. ಸುಕುಮಾರ್ ಈ ಸಲ ಕೂಡ ಜಾದೂ ಮಾಡೋದು ಗ್ಯಾರೆಂಟಿ ಎನ್ನುತ್ತಿದ್ದಾರೆ.
ಪೋಸ್ಟರ್ ನೋಡಿದವರು ಈ ಚಿತ್ರದಲ್ಲೂ 'ಕಾಂತಾರ' ರೀತಿಯಲ್ಲೇ ಐತಿಹಾಸಿಕ ಕಥಾಹಂದರ ಇರುತ್ತಾ? ಶೇಷಾಚಲ ಸುತ್ತಲಿನ ಯಾವುದಾದರೂ ದೇವಿಯ ಕಥೆ ಹೇಳುತ್ತಾರಾ? ಅಥವಾ ಕೇವಲ ಗಮನ ಸೆಳೆಯೋದಕ್ಕೆ ಇಂತಾದೊಂದು ಪೋಸ್ಟರ್ ಮಾಡಿದ್ದಾರಾ? ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾವುದಾದರೂ ಸನ್ನಿವೇಷದಲ್ಲಿ ಪೊಲೀಸರಿಂದ ಅಥವಾ ಎದುರಾಳಿಗಳಿಂದ ತಪ್ಪಿಸಿಕೊಳ್ಳಲು 'ಪುಷ್ಪ'ರಾಜ್ ಈ ವೇಷ ಧರಿಸುತ್ತಾನಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.

'ಪುಷ್ಪ' ಸಿನಿಮಾ ಬಂದಾಗ ಸಾಕಷ್ಟು ಜನ ಇದು ಕನ್ನಡದ 'KGF' ಸಿನಿಮಾ ಕಾಪಿ, ಅಥವಾ ಇನ್ಸ್ಪಿರೇಷನ್ ಎಂದಿದ್ದರು. ರಾಕಿ ಚಿನ್ನ ನರಾಚಿ ಕೋಟೆಗೆ ನುಗ್ಗಿ ಅಧಿಪತ್ಯ ಸಾಧಿಸಿದಂತೆ 'ಪುಷ್ಪ'ರಾಜ್ ರಕ್ತ ಚಂದನ ಸ್ಮಗ್ಲರ್ ಆಗಿ ದೊಡ್ಡ ಡಾನ್ ಆಗ್ತಾನೆ? ಅನ್ನುವ ವಾದ ಮುಂದಿಟ್ಟಿದ್ದರು. ಆದತೆ ಸುಕುಮಾರ್ ಟ್ರೀಟ್‌ಮೆಂಟ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ 'ಪುಷ್ಪ'- 2 ಕಾನ್ಸೆಪ್ಟ್ ವಿಡಿಯೋ ಕೂಡ 'KGF- 2' ಕಥೆಯನ್ನು ನೆನಪಿಸುತ್ತಿದೆ. 'ಪುಷ್ಪ' ಕೂಡ ಜನರಿಗೆ ಸಹಾಯ ಮಾಡುತ್ತಾನೆ.
ತೆಲುಗಿನ ಕೆಲವರು 'KGF' ನೋಡಿ 'ಪುಷ್ಪ' ಸಿನಿಮಾ ಬಂತು. ಈಗ 'ಕಾಂತಾರ' ನೋಡಿ 'ಪುಷ್ಪ'- 2 ಮಾಡಿರುವಂತೆ ಕಾಣ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ತೂರು, ತಿರುಪತಿ ಸುತ್ತಾಮುತ್ತಾ ನಡೆಯುವ ಗಂಗಮ್ಮ ಜಾತ್ರೆಯಲ್ಲಿ ಭಕ್ತರು ನಾನಾ ಬಗೆಯ ವೇಷಗಳನ್ನು ಧರಿಸಿ ದೇವರಿಗೆ ಸೇವೆ ಸಲ್ಲಿಸುತ್ತಾರೆ. ಇದರಿಂದ ಪ್ರೇರಣೆಗೊಂಡು ಸುಕುಮಾರ್ ಚಿತ್ರದಲ್ಲಿ ಅಲ್ಲುಅರ್ಜುನ್‌ಗೆ ಈ ವೇಷ ಹಾಕಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್‌ನಲ್ಲೂ ಗಂಗಮ್ಮ ಜಾತ್ರೆಯ ಝಲಕ್ ನೋಡಬಹುದು. ಒಟ್ನಲ್ಲಿ ಮೊದಲ ನೋಟದಲ್ಲೇ ಪೋಸ್ಟರ್ ಸೂಪರ್ ಹಿಟ್ ಆಗಿದೆ.

'ಪುಷ್ಪ'- 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರೀಕ್ವೆಲ್‌ನಲ್ಲಿದ್ದ ಬಹುತೇಕರು ಸೀಕ್ವೆಲ್‌ನಲ್ಲಿ ಇರಲಿದ್ದಾರೆ. ರಶ್ಮಿಕಾ 'ಪುಷ್ಪ'ರಾಜ್ ಮಡದಿ ಶ್ರೀವಲ್ಲಿ ಪಾತ್ರದಲ್ಲಿ ಮುಂದುವರೆಯಲಿದ್ದಾರೆ. ಜಾಲಿ ರೆಡ್ಡಿಯಾಗಿ ಮತ್ತೆ ಧನಂಜಯ ಅಬ್ಬರಿಸಲಿದ್ದಾರೆ. ಮೊದಲ ಭಾಗಕ್ಕೆ ಕೆಲಸ ಮಾಡಿದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಚಿತ್ರವನ್ನು ತಿದ್ದಿ ತೀಡಲಾಗುತ್ತಿದೆ. ಈ ಬಾರಿ ಎಸ್‌ಪಿ ಬನ್ವರ್ ಸಿಂಗ್ ಶೇಖಾವತ್ ಹಾಗೂ 'ಪುಷ್ಪ'ರಾಜ್ ನಡುವಿನ ಕಾದಾಟ ನೋಡಲು ಸಿನಿರಸಿಕರು ಕಾತರರಾಗಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











