'ಪುಷ್ಪ'- 2 ಸಂಕ್ರಾಂತಿ ಸರ್‌ಪ್ರೈಸ್; ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಚಿತ್ರತಂಡ
ಸುಕುಮಾರ್ ನಿರ್ದೇಶನ 'ಪುಷ್ಪ'- 2 ಸಿನಿಮಾ ಹೊಸ ದಾಖಲೆ ಬರೆದಿದೆ. ಈಗಾಗಲೇ ಬಾಕ್ಸಾಫೀಸ್‌ನಲ್ಲಿ 1831 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಸ್ಟೈಲಿಶ್ ಸ್ಟಾರ್ ಆರ್ಭಟಕ್ಕೆ ಹಳೇ ಸಿನಿಮಾ ದಾಖಲೆಗಳು ಧೂಳಿಪಟವಾಗಿದೆ. ಇನ್ನೇನೂ ಥಿಯೇಟ್ರಿಕಲ್ ರನ್ ಮುಗೀತು ಸಿನಿಮಾ ಓಟಿಟಿಗೆ ಬರುತ್ತದೆ ಎಂದುಕೊಳ್ಳುವ ವೇಳೆಗೆ ಚಿತ್ರತಂಡ ಸರ್‌ಪ್ರೈಸ್ ನೀಡಿದೆ.
ಸಂಕ್ರಾಂತಿ ಸಂಭ್ರಮದಲ್ಲಿ ಮತ್ತೆ ಅಭಿಮಾನಿಗಳು 'ಪುಷ್ಪ'- 2 ಸಿನಿಮಾ ನೋಡಲು ಮುಗಿಬೀಳುವ ಸಾಧ್ಯತೆಯಿದೆ. ಅದಕ್ಕಾಗಿ ಹೊಸ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸುಗ್ಗಿ ಸಂಭ್ರಮದಲ್ಲಿ ಬರುತ್ತಿರುವ ಬೇರೆ ಸಿನಿಮಾಗಳಿಗೆ ಪೆಟ್ಟು ಕೊಡಲು ಹೀಗೆ ಮಾಡ್ತಿದ್ದೀರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಡಿಸೆಂಬರ್ 5ರಂದು ತೆರೆಗೆ ಬಂದಿದ್ದ ಆಕ್ಷನ್ ಥ್ರಿಲ್ಲರ್ 'ಪುಷ್ಪ'- 2 ಈಗಾಗಲೇ 30 ದಿನ ಪೂರೈಸಿದೆ. 50ನೇ ದಿನದತ್ತ ಸಿನಿಮಾ ದಾಪುಗಾಲು ಇಟ್ಟಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್ ಆಗಿದೆ. ಆದರೂ 56 ದಿನಗಳವರೆಗೆ ಸಿನಿಮಾ ಓಟಿಟಿಗೆ ಬರಲ್ಲ ಎಂದು ಚಿತ್ರತಂಡ ಹೇಳಿದೆ. ಇದೀಗ ಮತ್ತೆ 20 ನಿಮಿಷ ದೃಶ್ಯಗಳನ್ನು ಹೊಸದಾಗಿ ಸೇರಿಸಿ ಸಿನಿಮಾ ಪ್ರದರ್ಶನ ಮಾಡುವ ಪ್ರಯತ್ನ ನಡೀತಿದೆ.
ಹೌದು. 'ಪುಷ್ಪ'- 2 ಚಿತ್ರದ ಕಾಲಾವಧಿ 3 ಗಂಟೆ 21 ನಿಮಿಷ ಇದೆ. ಎಷ್ಟೇ ಪ್ರಯತ್ನಪಟ್ಟರೂ ಅದಕ್ಕಿಂತ ಚಿತ್ರದ ರನ್‌ಟೈಮ್ ಕಮ್ಮಿ ಮಾಡಲು ಚಿತ್ರತಂಡಕ್ಕೆ ಸಾಧ್ಯವಾಗಿರಲಿಲ್ಲ. ನಿಜ ಹೇಳಬೇಕು ಅಂದರೆ ಇನ್ನು ಅರ್ಧ ಗಂಟೆ ಹೆಚ್ಚು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ಇದೀಗ 20 ನಿಮಿಷ ದೃಶ್ಯಗಳನ್ನು ಸೇರಿಸಿ ಜನವರಿ 11ರಿಂದ ಸಿನಿಮಾ ಪ್ರದರ್ಶನ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಸಾಮಾನ್ಯವಾಗಿ ಕಾಲಾವಧಿ ಜಾಸ್ತಿ ಆಯಿತು ಎನಿಸಿದರೆ ಸಿನಿಮಾ ತೆರೆಕಂಡ ಬಳಿಕ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವುದನ್ನು ಕೇಳಿದ್ದೇವೆ. ಆದರೆ 'ಪುಷ್ಪ'- 2 ಚಿತ್ರದ ವಿಚಾರದಲ್ಲಿ ಇದು ಉಲ್ಟಾ ಆಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ ದೊಡ್ಡ ಹಬ್ಬ. 3 ದಿನಗಳ ಕಾಲ ಹಬ್ಬ ಮಾಡಿ ಜನ ಸಂಭ್ರಮಿಸುತ್ತಾರೆ. ಬಳಿಕ ಕುಟುಂಬ ಸಮೇತರಾಗಿ ಸಿನಿಮಾ ನೋಡುವ ಅಭ್ಯಾಸವೂ ಇದೆ. ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೆಯುವ 'ಪುಷ್ಪ'- 2 ಟೀಂ ಈ ಪ್ರಯತ್ನ ಮಾಡುತ್ತಿದೆ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ತೆಲುಗಿನ 'ಗೇಮ್ ಚೇಂಜರ್', 'ಡಾಕು ಮಹಾರಾಜ್', 'ಸಂಕ್ರಾಂತಿಗೆ ವಸ್ತುನ್ನಾಂ' ಚಿತ್ರಗಳು ತೆರೆಗೆ ಬರ್ತಿವೆ. ಇದರ ನಡುವೆ ಹೊಸ ರೂಪದಲ್ಲಿ 'ಪುಷ್ಪ'- 2 ಪೈಪೋಟಿಗೆ ಇಳಿಯಲಿದೆ. ಈಗಾಗಲೇ ಸಿನಿಮಾ ನೋಡಿ ಎಂಜಾಯ್ ಮಾಡಿರುವವರು ಇನ್ನು 20 ನಿಮಿಷ ಹೆಚ್ಚು ದೃಶ್ಯಗಳು ಅಂದರೆ ಏನೆಲ್ಲಾ ಇರಬಹುದು ಎಂದು ಊಹಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು 30 ಗಂಟೆ 40 ನಿಮಿಷ ಸಿನಿಮಾ ಅಂದರೆ ಬೋರ್ ಎನಿಸಲ್ವಾ? ಎಂದು ಕೇಳುತ್ತಿದ್ದಾರೆ.
ಮೈತ್ರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ 'ಪುಷ್ಪ'- 2 ಸಿನಿಮಾ ನಿರ್ಮಾಣವಾಗಿತ್ತು. ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಘಟನೆ ನಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ನಟ ಅಲ್ಲು ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಚಿತ್ರದ ಸಕ್ಸಸ್ ಸೆಲೆಬ್ರೇಷನ್ ಅಷ್ಟಾಗಿ ನಡೀತಿಲ್ಲ.
ಮೃತ ಮಹಿಳೆ ಕುಟುಂಬಕ್ಕೆ ಚಿತ್ರತಂಡ 2 ಕೋಟಿ ರೂ. ಪರಿಹಾರ ನೀಡಿದೆ. ಅಲ್ಲು ಅರ್ಜುನ್ 1 ಕೋಟಿ ರೂ. ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಹಾಗೂ ಮೈತ್ರಿ ಸಂಸ್ಥೆ 50 ಲಕ್ಷ ರೂ. ಹಣ ನೀಡುತ್ತಿದೆ.


Click it and Unblock the Notifications











