ಪುಷ್ಪ ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಮೂರನೇ ಬಾರಿ "ಪುಷ್ಪ" ಚಿತ್ರದ ಮೂಲಕ ಒಂದಾಗಿದ್ದಾರೆ. ಆರ್ಯ ಮತ್ತು ಆರ್ಯ2 ಸಿನಿಮಾದ ಹಿಟ್ ಬಳಿಕ ಈ ಜೋಡಿ ಪುಷ್ಪ ಸಿನಿಮಾಗಾಗಿ ಕೈ ಜೋಡಿಸಿದೆ. ಸಿನಿಮಾ ಪ್ರಕಟವಾದಾಗಲೇ ಸಿನಿರಸಿಕರಲ್ಲಿ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿತ್ತು. ಈಗ ರಿಲೀಸ್ ದಿನಾಂಕ ಹತ್ತಿರ ಆಗುತ್ತಲೇ ಪುಷ್ಪ ಚಿತ್ರತಂಡದಿಂದ ಹೊಸ ಸುದ್ದಿ ಬಂದಿದೆ. ಸಿನಿಮಾದ ರಿಲೀಸ್ ದಿನಾಂಕ ಬದಲಾಗಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಪುಷ್ಪ ಸಿನಿಮಾ ಈಗಾಗಲೇ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದೆ. ಇದೆ ವರ್ಷದ ಅಂತ್ಯಕ್ಕೆ ಡಿಸೆಂಬರ್ 17ಕ್ಕೆ ಪುಷ್ಪ ತಂಡ ಅಧಿಕೃತವಾಗಿ ಚಿತ್ರದ ರಿಲೀಸ್ ಡೇಟ್ ಪ್ರಕಟ ಮಾಡಿದೆ. ಹಾಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಇದೇ ದಿನಾಂಕಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ಇದೀಗ ಪುಷ್ಪಾ ಚಿತ್ರದ ರಿಲೀಸ್ ಮುಂದೂಡುವ ಸಾಧ್ಯತೆ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿ ಬರುತ್ತಿದೆ. ಪುಷ್ಪ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ಮುಗಿದಿಲ್ಲ ಪುಷ್ಪ ಶೂಟಿಂಗ್!
ಅಂದಹಾಗೆ ಪುಷ್ಪಾ ಸಿನಿಮಾದ ಶೂಟಿಂಗ್ ಇನ್ನು ಸಂಪೂರ್ಣವಾಗಿಲ್ಲ. ಚಿತ್ರದ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದೇ ತಿಂಗಳ 28 ರಿಂದ ಮುಂದಿನ ಹಂತದ ಚಿತ್ರೀಕರಣವನ್ನು ಪುಷ್ಪ ಚಿತ್ರತಂಡ ಶುರು ಮಾಡಲಿದೆ. ಈ ಕೊನೆಯ ಹಂತದ ಚಿತ್ರೀಕರಣ 15 ದಿನಗಳ ಕಾಲ ನಡೆಯಲಿದೆಯಂತೆ. ನಂತರ ಸಿನಿಮಾದ ಕೆಲವು ಪ್ಯಾಚ್ ವರ್ಕ್ ಬಾಕಿ ಉಳಿಯಲಿದೆಯಂತೆ. ಹಾಗಾಗಿ ಸಂಪೂರ್ಣ ಸಿನಿಮಾ ಮುಗಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನೂ ಅಂದು ಕೊಂಡ ಸಮಯಕ್ಕೆ ಶೂಟಿಂಗ್ ಮುಗಿಯಲು ಸಾಧ್ಯ ಆಗದಿದ್ದರೆ ಚಿತ್ರದ ರಿಲೀಸ್‌ನಲ್ಲಿ ವ್ಯತ್ಯಾಸ ಆಗುವುದು ಖಚಿತ. ಇದೇ ವಿಚಾರಕ್ಕೆ ಸಿನಿಮಾ ತಂಡದಲ್ಲಿ ರಿಲೀಸ್ ಡೇಟ್ ಮೂಂದೂಡುವ ಬಗ್ಗೆ ಚರ್ಚೆ ಶುರುವಾಗಿದೆ. ಸದ್ಯದಲ್ಲಿಯೇ ಸಿನಿಮಾದ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡುವ ಬಗ್ಗೆ ಚಿತ್ರತಂಡವೇ ಸ್ಪಷ್ಟ ಪಡಿಸಲಿದೆ.

ಆದರೆ ಈ ಬಗ್ಗೆ ಇಲ್ಲಿ ತನಕ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕೆಲವು ದಿನಗಳ ಶೂಟಿಂಗ್ ಬಳಿಕ ಈ ವಿಚಾರದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲು ನಿರ್ಧರಿಸಿದೆ. ಅದೇನೆ ಇದ್ದರು ಪುಷ್ಪ ಸಿನಿಮಾಗಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ವರ್ಷ ಸಿನಿಮಾ ಬರುವುದಿಲ್ಲ ಅಂತ ಹೇಳಿದ್ರೆ, ಅಲ್ಲು ಅಭಿಮಾನಿಗಳಿಗೆ ನಿರಾಸೆ ಆಗುವುದಂತೂ ಖಚಿತ. ಆದರೆ ಶೂಟಿಂಗ್ ಬೇಗ ಮುಗಿದರೆ ಸಿನಿಮಾ ಅಂದುಕೊಂಡ ಹಾಗೆ ಡಿಸೆಂಬರ್ 17ಕ್ಕೆ ತೆರೆಗೆ ಅಪ್ಪಳಿಸಲಿದೆ. ಒಂದು ಪಕ್ಷ ತಡವಾದಲ್ಲಿ ಪುಷ್ಪ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಹೋಗುವುದಂತೂ ಪಕ್ಕ.

ಪುಷ್ಪ ಸಿನಿಮಾಕ್ಕೆ ಮೈತ್ರಿ ಮೂವೀಸ್ ಬಂಡವಾಳ ಹೂಡಿದೆ. ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಅಲ್ಲು ಅರ್ಜುನ್ ಜೊತೆಗೆ ರಶ್ಮಿಕ ಮಂದಣ್ಣ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೇಲರ್, ಟೀಸರ್ ಮತ್ತು ಹಾಡುಗಳು ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆಯನ್ನು ಹುಟ್ಟು ಹಾಕಿದೆ. "ಅಲಾ ವೈಕುಂಠ ಪುರಮುಲೊ" ಸಿನಿಮಾದ ಬಳಿಕ ಅಲ್ಲು ಅರ್ಜುನ್ ಕೈಗೆತ್ತಿಕೊಂಡಿರುವ ಸಿನಿಮಾ "ಪುಷ್ಪ". ಹಾಗಾಗೆ "ಅಲಾ ವೈಕುಂಠ ಪುರಮುಲೊ" ಚಿತ್ರದ ಯಶಸ್ಸನ್ನು ಮೀರಿಸುವಂತಹ ಸಕ್ಸಸ್ ಪಡೆದುಕೊಳ್ಳುವ ಸವಾಲು ಕೂಡ ಅಲ್ಲುಅರ್ಜುನ್ ಮುಂದೆ ಇದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಕಾಡಿನಲ್ಲಿ ರಕ್ತಚಂದನ ಕಳ್ಳ ಸಾಗಣೆ ಮಾಡುವ ವ್ಯಕ್ತಿಯ ರೀತಿಯಲ್ಲಿ ಅಲ್ಲುಅರ್ಜುನ್ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ಹೇಗಿರುತ್ತೆ. ರಶ್ಮಿಕಾ ಅಲ್ಲುಅರ್ಜುನ್ ಕಾಂಬಿನೇಷನ್ ಹೇಗೆ ಸಾಗುತ್ತದೆ, ಅಲ್ಲು ಸುಕುಮಾರ್ ಜೋಡಿ ಮತ್ತೊಂದು ಅದ್ಧೂರಿ ಯಶಸ್ಸಿಗೆ ಕಾರಣ ಆಗುತ್ತಾ ಎಂಬುದು ಸಿನಿಮಾ ರಿಲೀಸ್ ಬಳಿಕ ಗೊತ್ತಾಗಲಿದೆ.


Click it and Unblock the Notifications











