''ಪುಷ್ಪ- 2''ದಲ್ಲಿ ಕನ್ನಡಿಗರದ್ದೇ ಹವಾ...!
ಕನ್ನಡದಿಂದ ಇಲ್ಲಿಯವರೆಗೆ ಲಾಟು ಲಾಟು ಜನ ಹಿಂದಿ-ತಮಿಳು-ತೆಲುಗು ಸೇರಿದಂತೆ ದೇಶದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಮಂದಿ ಉದ್ಯೋಗಕ್ಕೆ ಯಾವುದು ಒಳ್ಳೇ ಜಾಗ ಅನಿಸಿತೋ ಅಲ್ಲಲ್ಲೇ ನೆಲೆ ಕಂಡುಕೊಂಡಿದ್ದಾರೆ. ಉದಾಹರಣೆಗೆ ರಜನಿಕಾಂತ್.
ಇನ್ನೂ ಪ್ರಕಾಶ್ ರೈ, ಕಿಶೋರ್, ಅರ್ಜುನ್ ಸರ್ಜಾ ಸೇರಿ ಇನ್ನೂ ಅನೇಕರು ಭಾಷೆಯ ಹಂಗಿಲ್ಲದೇ ಎಲ್ಲಾ ಕಡೆ ನಟಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ. ಪರಭಾಷೆಗಳಲ್ಲಿ ಕನ್ನಡದ ಕಹಳೆಯನ್ನು ಊದಿದ್ದಾರೆ. ಇನ್ನೂ ತೆಲುಗು ಕಿರುತೆರೆಯಲ್ಲಿ ಸದ್ಯ ಕನ್ನಡಿಗರದ್ದೇ ಪಾರುಪಥ್ಯ ಇದೆ. ನಾಯಕ-ನಾಯಕಿಯಿಂದ ಹಿಡಿದು ಧಾರಾವಾಹಿಯ ಬಹುತೇಕ ಪಾತ್ರಗಳಿಗೆ ಕನ್ನಡಿಗರಿಗೆ ಮೊದಲ ಆಧ್ಯತೆಯನ್ನು ಆಂಧ್ರದಲ್ಲಿ ನೀಡಲಾಗುತ್ತಿದೆ. ಕೇವಲ ಧಾರಾವಾಹಿ ಮಾತ್ರವಲ್ಲ ಚಿತ್ರಗಳಲ್ಲಿ ಕೂಡ ಕನ್ನಡಿಗರಿಗೆ ಮಣೆಯನ್ನು ತೆಲುಗು ಚಿತ್ರರಂಗ ಹಾಕುತ್ತಿದೆ. ಇದಕ್ಕೆ ಪುಷ್ಪ 2 ಅತ್ಯುತ್ತಮ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲ ಭಾಗದಲ್ಲಿ ತಮ್ಮ ಅಭಿನಯದಿಂದ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇನ್ನೂ ಎರಡನೇ ಭಾಗದಲ್ಲಿ ರಶ್ಮಿಕಾ ಜಾದೂ ಹೇಗಿರಲಿದೆಯೋ ಏನೋ ಗೊತ್ತಿಲ್ಲವಾದರೂ ಸದ್ಯಕ್ಕೆ ಬಿಡುಗಡೆಯಾಗಿರುವ ದಿ ಕಪಲ್ ಹಾಡು ಮೋಡಿಯನ್ನಂತೂ ಮಾಡಿದೆ.
ಇನ್ನೂ ರಶ್ಮಿಕಾ ಹೊರತು ಪಡಿಸಿದರೆ ಪುಷ್ಪ 02ದಲ್ಲಿ ಶ್ರೀಲೀಲಾ ಕೂಡ ಇದ್ದಾರೆ. ಮೊದಲ ಭಾಗದಲ್ಲಿ ಸಮಂತಾ ಸೃಷ್ಟಿಸಿದ ಪವಾಡವನ್ನು ಈ ಬಾರಿ ಸೃಷ್ಟಿಸುವ ಜವಾಬ್ಧಾರಿಯನ್ನು ಶ್ರೀಲೀಲಾಗೆ ವಹಿಸಲಾಗಿದೆ. ಶ್ರೀಲೀಲಾ ಕೂಡ ಉತ್ಸಾಹದಿಂದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನನ್ನ ಜೀವಮಾನದಲ್ಲಿಯೇ ನಾನು ಐಟಂ ಹಾಡಿಗೆ ಹೆಜ್ಜೆ ಹಾಕಲ್ಲ ಎಂದು ಹೇಳುತ್ತಾನೇ ಅಲ್ಲು ಅರ್ಜುನ್ ಜೊತೆ ಕುಣಿ ಕುಣಿ ಕುಣಿದಿದ್ದಾರೆ. ಮೊದಲ ಬಾರಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ದೇವಿ ಶ್ರೀಪ್ರಸಾದ್ 'ಕಿಸ್ಸಿಕ್' ಸಾಂಗ್‌ಗೆ ರಾಗ ಸಂಯೋಜಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಹೊರತು ಪಡಿಸಿದರೆ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಇದ್ದಾರೆ. ಪಾತ್ರ ಚಿಕ್ಕದಾಗಿದ್ದರೂ ಅದನ್ನು ಚೊಕ್ಕವಾಗಿ ಮೊದಲ ಭಾಗದಲ್ಲಿ ನಿರ್ವಹಿಸಿದ್ದ ಡಾಲಿ ಧನಂಜಯ್ ಎರಡನೇ ಭಾಗದಲ್ಲಿ ಜಾಲಿ ರೆಡ್ಡಿ ಆಗಿ ಅಬ್ಬರಿಸಲಿದ್ದಾರೆ. ಇನ್ನೂ ಹಿಂದೊಮ್ಮೆ ಚಿತ್ರದ ಡೈರೆಕ್ಟರ್ ಸುಕುಮಾರ್ ಕನ್ನಡದಲ್ಲಿ ಅವರು ಹೀರೋ. ಹೀಗಿದ್ದರೂ ಕೂಡ ಇಲ್ಲಿಗೆ ಬಂದು ನಮ್ಮ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಅವರದ್ದು ಸಣ್ಣ ಪಾತ್ರ ಅಂತ ಹೇಳೋಕೆ ಸಾಧ್ಯವಿಲ್ಲ. 'ಪುಷ್ಪ 2' ಚಿತ್ರದಲ್ಲಿ ಅವರ ಪಾತ್ರ ಇನ್ನೂ ಜಾಸ್ತಿ ಇರಲಿದೆ ಎಂದು ಹೇಳಿದ ಹಿನ್ನೆಲೆ ಡಾಲಿಯ ಜಾಲಿ ಪಾತ್ರದ ಸುತ್ತ ಅನೇಕರಲ್ಲಿ ಕುತೂಹಲ ಮನೆ ಮಾಡಿದೆ.
ಇನ್ನೂ ಈ ಮೂವರು ಕನ್ನಡಿಗರ ಜೊತೆಯಲ್ಲಿ ಅಜನೀಶ್ ಲೋಕನಾಥ್ ಕೂಡ ಪುಷ್ಪ 02 ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಸುಕುಮಾರ್‌ಗೆ ಇಷ್ಟವಾಗದ ಕಾರಣ ಅಜನೀಶ್ ಲೋಕನಾಥ್ ಅವರಿಂದ ಸಂಗೀತ ನೀಡಿಸಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಈಗಾಗಲೇ 'ಮಂಗಳವಾರಂ' ಎನ್ನುವ ಒಂದು ತೆಲುಗು ಹಾರರ್ ಚಿತ್ರಕ್ಕೂ ಅಜನೀಶ್ ಮ್ಯೂಸಿಕ್ ಮಾಡಿದ್ದಾರೆ. ಅದು ಹಿಟ್ ಆಗಿತ್ತು. ಅದೇ ಕಾರಣಕ್ಕೆ 'ಪುಷ್ಪ'-2 ಚಿತ್ರದ ಕೆಲ ದೃಶ್ಯಗಳಿಗೆ ಅವರಿಂದ ರೀ-ರೆಕಾರ್ಡಿಂಗ್ ಮಾಡಿಸಲು ಸುಕ್ಕು ಅಂಡ್ ಟೀಂ ತೀರ್ಮಾನಿಸಿದೆ ಎನ್ನಲಾಗ್ತಿದೆ. ಮುಖ್ಯವಾಗಿ ಜಾತ್ರೆ ಸನ್ನಿವೇಶಕ್ಕೆ ಅಜನೀಶ್ ಮ್ಯೂಸಿಕ್ ಬೇಕು ಎಂದು ನಿರ್ದೇಶಕರು ಕೇಳುತ್ತಿದ್ದಾರೆ ಎನ್ನಲಾಗ್ತಿದೆ.
ಹೀಗೆ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿರುವ ಪುಷ್ಪ-02ದಲ್ಲಿ ಕನ್ನಡದ ಕಂಪು ಹರಡಿದೆ. ಕನ್ನಡದ ಕಲವರದಿಂದ ಪುಷ್ಪರಾಜ್‌ನ ಪ್ರಪಂಚ ತುಂಬಿದೆ. ಇನ್ನೇನು ಕೆಲವೇ ದಿನ ಪುಷ್ಪ 02 ಬೆಳ್ಳಿತೆರೆಯಲ್ಲಿ ಧಗಧಗಿಸಲಿದೆ. ಮೊದಲ ದಿನವೇ ಸಿನಿಮಾ 230 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ರೂಲ್ ಹೇಗಿರುತ್ತೆ ಕಾದು ನೋಡಬೇಕಿದೆ.


Click it and Unblock the Notifications











