Pushpa-2 Release Date: ಹೊಸ ಪೋಸ್ಟರ್‌ನಲ್ಲಿ ಎಲ್ಲರ ಕಣ್ಣು 'ಪುಷ್ಪ'ರಾಜ್ ಕಿರುಬೆರಳಿನ ಮೇಲೆ ಬಿದ್ದಿರೋದ್ಯಾಕೆ?
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಚಿತ್ರದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಅಂತೂ ಇಂತೂ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. 'ಪುಷ್ಪ'ರಾಜ್ ಆಗಿ ರಾಷ್ಟ್ರಪ್ರಶಸ್ತಿ ಪಡೆದ ಅಲ್ಲು ಅರ್ಜುನ್ ಮತ್ತೊಮ್ಮೆ ಪವರ್‌ಫುಲ್ ಪರ್ಫಾರ್ಮನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸೋಕೆ ಸಿದ್ಧವಾಗ್ತಿದೆ.
2 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸುಕುಮಾರ್ ನಿರ್ದೇಶನ, ಅಲ್ಲು ಅರ್ಜುನ್ ಅಭಿನಯಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕರ್ನಾಟಕದಲ್ಲೂ ಸಿನಿಮಾ ಭರ್ಜರಿ ಗಳಿಕೆ ಕಂಡಿತ್ತು. ದೇವಿ ಶ್ರೀ ಪ್ರಸಾದ್ ಸಂಗೀತದ 'ಪುಷ್ಪ' ಆಲ್ಬಮ್ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಚಿತ್ರದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದೆ.

'ಪುಷ್ಪ' ಸೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಾಮಾನ್ಯ ರಕ್ತಚಂದನ ಸ್ಲಗ್ಮರ್ ಪುಷ್ಪರಾಜ್ ತನ್ನ ತಾಕತ್ತು, ಚಾಣಾಕ್ಷತನದಿಂದ ಇಡೀ ಸಿಂಡಿಕೇಟ್‌ನ ತನ್ನ ಹತೋಟಿಗೆ ತೆಗೆದುಕೊಂಡಿದ್ದಾನೆ. ಇನ್ನು ಮುಂದೆ ಆತನ ದರ್ಬಾರ್ ಹೇಗಿರುತ್ತದೆ? ಅವನ ಆರ್ಭಟ ತಡೆಯಲು ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ಪ್ರಯತ್ನ ಹೇಗಿರುತ್ತದೆ? ಅದನ್ನು 'ಪುಷ್ಪ' ಹೇಗೆ ಮೆಟ್ಟಿನಿಂತು ತಮ್ಮ ಸಾಮ್ರಾಜ್ಯವನ್ನು ದೇಶ ವಿದೇಶದಗಳಿಗೆ ವಿಸ್ತಿರಿಸುತ್ತಾನೆ? ಕೊನೆಗೆ ಏನಾಗುತ್ತದೆ? ಅನ್ನುವ ಕತೆಯನ್ನು ಸೀಕ್ವೆಲ್‌ನಲ್ಲಿ ಕಟ್ಟಿಕೊಡಲು ಪ್ರಯತ್ನ ನಡೀತಿದೆ. ಸುಕುಮಾರ್ - ಬನ್ನಿ ಕಾಂಬಿನೇಷನ್ ಮತ್ತೆ ತೆರೆಮೇಲೆ ಮ್ಯಾಜಿಕ್ ಮಾಡುವ ನಿರೀಕ್ಷೆಯಿದೆ.
1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಪುಷ್ಪ'-2 ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಭರದಿಂದ ಸಿನಿಮಾ ಚಿತ್ರೀಕರಣ ಸಾಗುತ್ತಿದ್ದು ಪ್ರೀಕ್ವೆಲ್‌ನಲ್ಲಿದ್ದ ಬಹುತೇಕ ಕಲಾವಿದರು ಸೀಕ್ವೆಲ್‌ನಲ್ಲಿ ಇರಲಿದ್ದಾರೆ. ಹೊಸ ಕಲಾವಿದರು ಕೂಡ ತಂಡ ಸೇರಿಕೊಳ್ಳಲಿದ್ದಾರೆ. ಬಜೆಟ್, ಕಲಾವಿದರ ಸಂಭಾವನೆ, ಪ್ರಮೋಷನ್, ರಿಲೀಸ್ ಎಲ್ಲವೂ ಸೀಕ್ವೆಲ್ ವಿಚಾರದಲ್ಲಿ ಡಬಲ್ ಆಗ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ರಿಲೀಸ್ ಪ್ಲ್ಯಾನ್ ನಡೀತಿದೆ.
ಮುಂದಿನ ವರ್ಷ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ 'ಪುಷ್ಪ'-2 ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಗುರುವಾರವೇ(ಆಗಸ್ಟ್ 15) ಸಿನಿಮಾ ರಿಲೀಸ್ ಆಗುತ್ತಿದ್ದು ಶುಕ್ರವಾರ, ಶನಿವಾರ, ಭಾನುವಾರ ಹೀಗೆ ಲಾಂಗ್ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ.
ಫ್ಯಾನ್ಸ್ 'ಪುಷ್ಪ' ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ- 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಪೋಸ್ಟರ್ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ಉಂಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ 'ಪುಷ್ಪ' ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಕೂಡ ಥಂಡಾ ಹೊಡೆದಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ರೈಟ್ಸ್ ಮಾರಾಟವಾಗಿದೆಯಂತೆ.
200 ಕೋಟಿ ರೂ.ಗೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ರಶ್ಮಿಕಾ ಮಂದಣ್ಣ, ಧನಂಜಯ್, ಫಹಾದ್ ಫಾಸಿಲ್, ಅನಸೂಯ ಭಾರಧ್ವಜ್ 'ಪುಷ್ಪ'-2 ತಾರಾಗಣದಲ್ಲಿದ್ದಾರೆ. ಹೊಸದಾಗಿ ಯಾರೆಲ್ಲಾ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಕುತೂಹಲವಿದೆ. 5 ಭಾಷೆಗಳಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರಲಿದೆ.
ಸದ್ಯ ಹೊಸದಾಗಿ ರಿಲೀಸ್ ಮಾಡಿರುವ ಪೋಸ್ಟರ್‌ನಲ್ಲಿ 'ಪುಷ್ಪ'ರಾಜ್ ಕುರ್ಚಿಯಲ್ಲಿ ಕೂತಿರುವುದನ್ನು ನೋಡಬಹುದು. ಬಲಗೈಲಿ ಸಿಗರೇಟ್ ಹಿಡಿದು ಸನ್‌ಗ್ಲಾಸ್ ತೊಟ್ಟಿದ್ದು ಕೈಬೆರಳುಗಳಲ್ಲಿ ಉಂಗುರಗಳನ್ನು ಕಣ್ಣು ಕುಕ್ಕುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ 'ಪುಷ್ಪ'ರಾಜ್ ಎಡಗೈ ಕಿರುಬೆರಳಿನ ಉಗುರಿಗೆ ಕೆಂಪು ಬಣ್ಣ(ನೇಲ್ ಪಾಲೀಶ್) ಹಚ್ಚಿರುವುದನ್ನು ಹೈಲೆಟ್ ಮಾಡಲಾಗಿದೆ. ಈ ಹಿಂದೆ ಬಂದಿದ್ದ ಟೀಸರ್‌ನಲ್ಲೂ ಇದು ಗಮನ ಸೆಳೆದಿತ್ತು. ಕತೆಗೂ ಇದಕ್ಕೂ ಏನಾದರೂ ಸಂಬಂಧ ಇದ್ಯಾ? ಎನ್ನುವ ಚರ್ಚೆ ಶುರುವಾಗಿದೆ. ಸುಕುಮಾರ್ ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ.


Click it and Unblock the Notifications











