ಹಣ ಪಡೆದು ಕೈಕೊಟ್ಟ ನಿರ್ದೆಶಕನ ಮೇಲೆ ಉರಿದು ಬಿದ್ದ ನಿರ್ಮಾಪಕ ಅಲ್ಲು ಅರವಿಂದ್!
ತೆಲುಗಿನ ಜನಪ್ರಿಯ ನಿರ್ಮಾಪಕ, ಸ್ಟಾರ್ ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಇಂದು (ಫೆಬ್ರವರಿ 06) ಹಠಾತ್ತನೆ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು.
ಸಾಮಾನ್ಯವಾಗಿ ಸುದ್ದಿಗೋಷ್ಠಿ ಮಾಡದ ಅಲ್ಲು ಅರವಿಂದ್ ಇಂದು ಹಠಾತ್ತನೆ ಸುದ್ದಿಗೋಷ್ಠಿ ಕರೆದ ಕಾರಣ ಎಲ್ಲರಿಗೂ ಕುತೂಹಲ ಇತ್ತು. ಆದರೆ ನಿಗದಿತ ಸಮಯಕ್ಕಿಂತಲೂ ತುಸು ಮುಂದಷ್ಟೆ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಯ್ತು! ಇದು ಇನ್ನಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
'ಆಹಾ' ಒಟಿಟಿಯ ಮಾಲೀಕರೂ ಆಗಿರುವ ಅಲ್ಲು ಅರವಿಂದ್, ತಮ್ಮ ಒಟಿಟಿ ಯಲ್ಲಿ ಪ್ರಸಾರವಾಗುವ 'ಅನ್‌ಸ್ಟಾಪೆಬಲ್' ಶೋನಲ್ಲಿ ನಟ ಬಾಲಕೃಷ್ಣ, ನರ್ಸ್‌ಗಳ ಬಗ್ಗೆ ಆಡಿರುವ ಕೀಳು ಅಭಿರುಚಿಯ ಮಾತಿಗೆ ಸ್ಪಷ್ಟನೆ ನೀಡಲೆಂದು ಅಲ್ಲು ಅರವಿಂದ್ ಈ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿತ್ತು. ಆದರೆ ಬಳಿಕ ತಿಳಿದುಬಂದಿದ್ದೆಂದರೆ ನಿರ್ದೇಶಕನೊಬ್ಬ ತಮ್ಮಿಂದ ಹಣ ಪಡೆದು ಈಗ ಬೇರೆಯವರಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಲ್ಲು ಅರವಿಂದ್ ಅಸಮಾಧಾನಗೊಂಡು ಸುದ್ದಿಗೋಷ್ಠಿ ಕರೆದಿದ್ದರು ಎಂಬುದು!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಗೀತಾ ಗೋವಿಂದಮ್' ಸಿನಿಮಾ ಮಾಡಿದ್ದ ನಿರ್ದೇಶಕ ಪರಶುರಾಮ್ ಪೆಟ್ಲ, 'ಗೀತಾ ಗೋವಿಂದಂ' ಸಿನಿಮಾದ ಮುಂದಿನ ಭಾಗ ಮಾಡುವುದಾಗಿ ಹೇಳಿ ನಿರ್ಮಾಪಕ ಅಲ್ಲು ಅರವಿಂದ್ ಅವರಿಂದ ದೊಡ್ಡ ಮೊತ್ತದ ಅಡ್ವಾನ್ಸ್ ಅನ್ನು ಪಡೆದಿದ್ದರಂತೆ. ಆದರೆ ಈಗ ಅದೇ ಕತೆಯನ್ನು ಬೇರೊಬ್ಬ ನಿರ್ಮಾಪಕರಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ಮಾಪಕ ದಿಲ್ ರಾಜು, ನಿರ್ದೇಶಕ ಪರಶುರಾಮ್ ಪೆಟ್ಲಗೆ ಭಾರಿ ಮೊತ್ತದ ಸಂಭಾವನೆ ಆಫರ್ ಮಾಡಿದ ಕಾರಣ ಈಗ ದಿಲ್ ರಾಜು ಪ್ರೊಡಕ್ಷನ್‌ನಲ್ಲಿ 'ಗೀತಾ-ಗೋವಿಂದಂ' ಸಿನಿಮಾದ ಸೀಕ್ವೆಲ್ ಘೋಷಣೆ ಮಾಡಿದ್ದಾರೆ ಪರಶುರಾಮ್ ಪೆಟ್ಲ. ಇದು ಅಲ್ಲು ಅರವಿಂದ್ ಅವರಿಗೆ ತೀವ್ರ ಸಿಟ್ಟು ತರಿಸಿದೆ.
ದಿಲ್ ರಾಜು ಜೊತೆಗೂ ಅಲ್ಲು ಅರವಿಂದ್ ಜಗಳವಾಡಿದ್ದಾರೆ ಎನ್ನಲಾಗಿದ್ದು, ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಲೆಂದೇ ಸುದ್ದಿಗೋಷ್ಠಿ ಕರೆದಿದ್ದರು ಎನ್ನಲಾಗುತ್ತಿದೆ. ಆದರೆ ತೆಲುಗು ಸಿನಿಮಾ ನಿರ್ಮಾಪಕರ ಸಂಘದ ಸದಸ್ಯರು ಮಧ್ಯ ಪ್ರವೇಶಿಸಿ ಈ ವಿವಾದವನ್ನು ಸಂಘದಲ್ಲಿ ಚರ್ಚಿಸಿ ಇತ್ಯರ್ಥ ಮಾಡಿಕೊಳ್ಳಲು ಸೂಚಿಸಿದ ಕಾರಣ ಕೊನೆಯ ಕ್ಷಣದಲ್ಲಿ ಸುದ್ದಿಗೋಷ್ಠಿ ರದ್ದಾಗಿದೆ ಎನ್ನಲಾಗುತ್ತಿದೆ.
ಅಲ್ಲು ಅರವಿಂದ್, ನಟ ಅಲ್ಲು ಅರ್ಜುನ್ ಅವರ ತಂದೆ ಹಾಗೂ ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕ. ತೆಲುಗು ಚಿತ್ರರಂಗಕ್ಕೆ ಹಲವಾರು ಹಿಟ್, ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ಕನ್ನಡ, ಹಿಂದಿ, ತಮಿಳು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ನಟ ಚಿರಂಜೀವಿ ನಟನೆಯ ಹಲವಾರು ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ಅವರೇ ನಿರ್ಮಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ನಟನೆಯ 'ಮಾಂಗಲ್ಯಂ ತಂತುನಾನೇನಾ', ಗಣೇಶ್ ನಟನೆಯ 'ಸುಂದರಾಂಗ ಜಾಣ' ಸಿನಿಮಾಗಳ ನಿರ್ಮಾಪಕ ಇವರೇ.


Click it and Unblock the Notifications











