₹500 ಕೋಟಿ ಸಿನಿಮಾ ಮಾಡಿ ಕಿತ್ತೋದ ಚಪ್ಪಲಿ ತೋರಿಸಿದ್ಯಾಕೆ ನಿರ್ದೇಶಕ ನಾಗ್ ಅಶ್ವಿನ್?
ಪ್ರಭಾಸ್- ಅಮಿತಾಬ್ ಬಚ್ಚನ್ ನಟನೆಯ 'ಕಲ್ಕಿ 2898 AD' ಚಿತ್ರ ಬಿಡುಗಡೆಯಾಗಿದೆ. ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಕ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾ ಬಿಡುಗಡೆ ಸಮಯದಲ್ಲಿ ನಿರ್ದೇಶಕ ಇನ್‌ಸ್ಟಾ ಪೋಸ್ಟ್ ವೈರಲ್ ಆಗುತ್ತಿದೆ.
ಈ ಹಿಂದೆ 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟಿದ್ದ ನಾಗ್ ಅಶ್ವಿನ್ ಮೇಲೆ ಭಾರೀ ನಿರೀಕ್ಷೆಯಿದೆ. ಸದ್ಯ ಸಿನಿಮಾ ಬಿಡುಗಡೆಯಾಗಿದ್ದು ತಮ್ಮ ಪ್ರಯತ್ನದಲ್ಲಿ ನಿರ್ದೇಶಕರು ಭಾಗಶಃ ಗೆದ್ದಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಹಣವನ್ನು ನೀರಿನಂತೆ ಚೆಲ್ಲಿ ಕಥೆ ಕಟ್ಟಿಕೊಡಲಾಗಿದೆ. ನೂರಾರು ಜನ ತಂತ್ರಜ್ಞರು, ಕಲಾವಿದರು ಹಗಳಿರುಳು ಚಿತ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಪೌರಾಣಿಕ, ಸೈನ್ಸ್ ಫಿಕ್ಷನ್ ಹೀಗೆ ಎರಡನ್ನೂ ಸೇರಿಸಿ ಬಹಳ ಅದ್ಭುತವಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಕುರುಕ್ಷೇತ್ರದಿಂದ ಹಿಡಿದು ಯಂತ್ರದ ಯುಗದವರೆಗೆ ಸಾಕಷ್ಟು ಸಂಗತಿಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಅಶ್ವತ್ಥಾಮನ ಜೊತೆಗೆ ಅರ್ಜುನ, ಕರ್ಣನ ಪಾತ್ರಗಳು ಚಿತ್ರದಲ್ಲಿವೆ. ನಾಗ್ ಅಶ್ವಿನ್ ಕಲ್ಪನೆಗೆ ಕೆಲವರು ಫಿದಾ ಆಗಿದ್ದಾರೆ. ಈ ರೀತಿಯೂ ಊಹಿಸಿಕೊಂಡು ಕಥೆ ಮಾಡಿ ಸಿನಿಮಾ ಮಾಡಬಹುದಾ? ಎಂದು ಅಚ್ಚರಿಗೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ತುಂಬೆಲ್ಲಾ ಕಲ್ಕಿ ಟ್ರೆಂಡ್ ಆಗುತ್ತಿದೆ. ಇದೆಲ್ಲದರ ನಡುವೆ ನಿರ್ದೇಶಕ ನಾಗ್ ಅಶ್ವಿನ್ ಹಾಕಿರುವ ಚಪ್ಪಲಿ ಪೋಸ್ಟ್ ವೈರಲ್ ಆಗ್ತಿದೆ. ತಮ್ಮ ಅದ್ಧೂರಿ ಸಿನಿಮಾ ಬಿಡುಗಡೆ ದಿನ ಯಾಕೆ ಕಿತ್ತೋದ ಚಪ್ಪಲಿ ಫೋಟೊ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಹುಬ್ಬೇರಿಸಿದ್ದಾರೆ. ಬಹುತೇಕ ಸವೆದು ಹೋಗಿರುವ ಅಲ್ಲಲ್ಲಿ ಕಿತ್ತು ಹೋಗಿರುವ ತಮ್ಮ ಚಪ್ಪಲಿ ಫೋಟೊ ಹಾಕಿ ತಮ್ಮ ಶ್ರಮದ ಹಾದಿಯನ್ನು ನಿರ್ದೇಶಕರು ನೆನೆದಿದ್ದಾರೆ. 'ಬಹಳ ಸುದೀರ್ಘ ಹಾದಿ' ಎಂದು ಬರೆದುಕೊಂಡಿದ್ದಾರೆ.

'ಕಲ್ಕಿ' ಚಿತ್ರದ 4 ವರ್ಷಗಳ ಪ್ರಯಾಣವನ್ನು ನೆನಪಿಸಿಕೊಂಡು ನಾಗ್ ಅಶ್ವಿನ್ ಈ ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ 4000 ಸಾವಿರ ರೂಪಾಯಿ ಸಂಬಳದಿಂದ ಶುರುವಾಗಿ ಇಂದು 500 ಕೋಟಿ ರೂ. ಬಜೆಟ್ ಸಿನಿಮಾ ನಿರ್ದೇಶನದವರೆಗೆ ಸಾಗಿ ಬಂದ ಹಾದಿಯನ್ನು ನೆನೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲ್ಕಿ ಸಿನಿಮಾ ಪಯಣ ಶುರುವಾಗಿ ಇವತ್ತು ಸಿನಿಮಾ ರಿಲೀಸ್ ಆಗುವವರೆಗೂ ಇದೊಂದು ಚಪ್ಪಲಿ ಹಾಕಿಕೊಂಡಿದ್ದರು. ಇದು ಅವರ ಡೆಡಿಕೇಶನ್ ಅನ್ನು ತೋರಿಸುತ್ತದೆ. ದುಡ್ಡಿರುವ ನಿರ್ಮಾಪಕರು ಸಿಕ್ಕರೆ ಒಂದಷ್ಟು ಬಾಚಿಕೊಂಡುಬಿಡೋಣ ಎನ್ನುವ ನಿರ್ದೇಶಕರ ನಡುವೆ ನಾಗ್ ಅಶ್ವಿನ್ ಸರಳತೆ, ಸಿನಿಮಾ ಮೇಲಿನ ಪ್ರೀತಿ ಅರ್ಥವಾಗುತ್ತದೆ. ಇಷ್ಟು ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದರೂ ಯಾವುದೇ ಆಡಂಬರಕ್ಕೆ ಹೋಗದೇ ತುಂಬಾ ಸಿಂಪಲ್ ಆಗಿದ್ದಾರೆ. ನಿಜಕ್ಕೂ ನಾಗ್ ಅಶ್ವಿನ್ ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಈಗ ಅವರ ಸಮರ್ಪಣೆಗೆ ಸಿಕ್ಕಳ ಫಲ ಇದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ 'ಕಲ್ಕಿ 2898 AD' ಚಿತ್ರದ ಮೊದಲ ಭಾಗ ಮಾತ್ರ ಬಿಡುಗಡೆಯಾಗಿದೆ. ಇನ್ನು ಕಲ್ಕಿಯ ಜನನವೇ ಆಗಲಿಲ್ಲ. ಹಾಗಾಗಿ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆ ಮೂಡುವಂತಾಗಿದೆ. ಸದ್ಯ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಯಾವಾಗ ಕಲ್ಕಿ ಕಥೆ ಆರಂಭಿಸುತ್ತಾರೆ ಎನ್ನುವುದು ಗೊತ್ತಿಲ್ಲ. ಪ್ರೀಕ್ವೆಲ್‌ಗಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಬರುತ್ತದೆ ಎನ್ನುವುದು ಮಾತ್ರ ಗೊತ್ತಾಗುತ್ತಿದೆ.


Click it and Unblock the Notifications











