ತಮಿಳುನಾಡು ಕರ್ನಾಟಕದಲ್ಲಿ ನಡೀತಿಲ್ಲ 'ಪುಷ್ಪ'ರಾಜ್ ಆಟ; ಬಾಹು- ರಾಕಿ ರೆಕಾರ್ಡ್ಸ್ ಸೇಫ್!
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿ ಹುಬ್ಬೇರಿಸುತ್ತಿದೆ. ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿರುವುದು ಗಳಿಕೆಗೆ ಪ್ಲಸ್ ಆಗಿದೆ. ಮೊದಲ 3 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 621 ಕೋಟಿ ರೂ. ಬಾಚಿರುವುದಾಗಿ ಚಿತ್ರತಂಡವೇ ಘೋಷಿಸಿದೆ.
ಉತ್ತರ ಭಾರತದಲ್ಲಿ 'ಪುಷ್ಪ'-2 ಕಲೆಕ್ಷನ್ ಜೋರಾಗಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಕೂಡ ಸಿನಿಮಾ ದರ್ಬಾರ್ ನಡೆಸುತ್ತಿದೆ. ಇನ್ನು ಆಂಧ್ರ, ತೆಲಂಗಾಣದಲ್ಲಿ ಕೇಳುವುದೇ ಬೇಡ. ಆದರೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಚಿತ್ರಕ್ಕೆ ಕೊಂಚ ಹಿನ್ನಡೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುತ್ತಿಲ್ಲ.

ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಪೋಸ್ಟರ್ ಸಮೇತ ಅಂಕಿ ಅಂಶ ನೀಡುತ್ತಿದೆ. ಆದರೆ ಕೆಲವರು ಆ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಟಿಕೆಟ್ ದರ ಹೆಚ್ಚಾಗಿರುವುದರಿಂದ ಗಳಿಕೆ ಆಗಿರಬಹುದು. ಆದರೂ ಸಹ ಕೆಲವರು ಕಡೆ 'ಬಾಹುಬಲಿ -2' ಹಾಗೂ 'ಕೆಜಿಎಫ್'-2 ಚಿತ್ರಗಳಿಗೆ ಹೋಲಿಸಿದರೆ 'ಪುಷ್ಪ'-2 ಕಲೆಕ್ಷನ್ ಕಮ್ಮಿ ಇದೆ.
'ಪುಷ್ಪ'-2 ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. 'ಬಾಹುಬಲಿ-2' ಹಾಗೂ 'ಕೆಜಿಎಫ್'-2 ಚಿತ್ರಗಳಿಗೆ ಹೋಲಿಸಿದರೆ ಅಲ್ಲು ಅರ್ಜುನ್ ಸಿನಿಮಾ ಬಹಳ ಹಿಂದೆ ಉಳಿದಿದೆ. ಇನ್ನು ಸಾಕಷ್ಟು ಮಂದಿ ಚಿತ್ರವನ್ನು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿ 'ಪುಷ್ಪ'-2 ಕಲೆಕ್ಷನ್ ವಿಚಾರ ಇಲ್ಲಿ ದೊಡ್ಡದು ಅನ್ನಿಸುತ್ತಿಲ್ಲ. ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಎಲ್ಲಾ ಚಿತ್ರಗಳನ್ನು ಮೀರಿಸಿರಬಹುದು. ಆದರೂ ಕೂಡ ಕೆಲವು ದಾಖಲೆಗಳನ್ನು ಮುರಿಯಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ.
ಬೇರೆ ಭಾಷೆಯ ಚಿತ್ರವೊಂದು ತಮಿಳುನಾಡಿನಲ್ಲಿ ಮೊದಲದಿನ ಅತಿಹೆಚ್ಚು ಗಳಿಕೆ ಕಂಡ ದಾಖಲೆಯನ್ನು 'ಪುಷ್ಪ'-2 ಮುರಿಯಲು ಸಾಧ್ಯವಾಗಿಲ್ಲ. ಬಾಹುಬಲಿ-2 ಸಿನಿಮಾ 17 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 'ಕೆಜಿಎಫ್'-2 ಸಿನಿಮಾ 8 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ 'ಪುಷ್ಪ'-2 ಚಿತ್ರ 7.5 ಕೋಟಿ ರೂ. ಅಷ್ಟೇ ಗಳಿಸಿದೆ.
ಕರ್ನಾಟಕದಲ್ಲಿ ಮೊದಲ ದಿನ ಹೆಚ್ಚು ಗಳಿಕೆ ಕಂಡ ಪರಭಾಷಾ ಸಿನಿಮಾಗಳ ಪಟ್ಟಿಯಲ್ಲಿ ಕೂಡ 'ಪುಷ್ಪ'-2 ಹಿಂದೆ ಉಳಿದಿದೆ. 7 ವರ್ಷಗಳ ಹಿಂದೆ 'ಬಾಹುಬಲಿ- 2' ಸಿನಿಮಾ 17.45 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ 'ಪುಷ್ಪ'-2 ಪ್ರೀಮಿಯರ್ ಶೋಗಳನ್ನು ಸೇರಿ 17.25 ಕೋಟಿ ರೂ. ಗಳಿಸಿದೆ. 'RRR' ಸಿನಿಮಾ 15.3 ಕೋಟಿ ರೂ. ಬಾಚಿತ್ತು.
ದಕ್ಷಿಣ ಅಮೆರಿಕಾ ಹಾಗೂ ಓವರ್‌ಸೀಸ್‌ನಲ್ಲಿ ಕೂಡ 'ಪುಷ್ಪ'-2 ಕಲೆಕ್ಷನ್ ಕಮ್ಮಿನೇ ಇದೆ. 'ಬಾಹುಬಲಿ'-2 ಚಿತ್ರದ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಕೆಲವೆಡೆ 'ಕಲ್ಕಿ 2898 AD' ಹಾಗೂ 'ಕೆಜಿಎಫ್'-2 ಚಿತ್ರಗಳ ದಾಖಲೆ ಮುರಿಯಲು ಪುಷ್ಪರಾಜ್ ತಿಣುಕಾಡುವಂತಾಗಿದೆ.
ಅಂದಾಜು 400 ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ 'ಪುಷ್ಪ'-2 ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಅಲ್ಲು ಅರ್ಜುನ್ ಭಾರೀ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ. ಹಾಗಾಗಿ ಟಿಕೆಟ್ ದರವನ್ನು 5 ಪಟ್ಟು ಹೆಚ್ಚಿಸಲಾಗಿದೆ. ಇನ್ನು ಪ್ರೀಮಿಯರ್ ಶೋಗಳಿಂದಲೇ ಸಿನಿಮಾ 10 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿತ್ತು.
ಇದೀಗ ನಿಧಾನವಾಗಿ 'ಪುಷ್ಪ'-2 ಟಿಕೆಟ್ ದರ ಕಮ್ಮಿ ಆಗ್ತಿದೆ. ಸೋಮವಾರ(ಡಿಸೆಂಬರ್ 9)ದಿಂದ ಅಸಲಿ ಆಟ ಶುರುವಾಗಲಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ. ಸೋಮವಾರದ ಅಗ್ನಿಪರೀಕ್ಷೆಯಲ್ಲಿ 'ಪುಷ್ಪ'ರಾಜ್ ಗೆಲ್ತಾನಾ? ಎಂದು ಕುತೂಹಲ ಮೂಡಿದೆ.


Click it and Unblock the Notifications











