"ಅಲ್ಲರಿ ನರೇಶ್ ತಂದೆ ಅವಕಾಶ ಕೊಡುವುದಾಗಿ ನನ್ನ ಮಂಚಕ್ಕೆ ಕರೆದಿದ್ರು.. ನಾನು ಧೈರ್ಯವಾಗಿ ಹೇಳ್ತೀನಿ": ಶಕೀಲಾ
ಒಂದ್ಕಾಲದಲ್ಲಿ ಬಿ-ಗ್ರೇಡ್ ನಟಿಯಾಗಿ ಶಕೀಲಾ ಬಹಳ ಜನಪ್ರಿಯತೆ ಗಳಿಸಿದ್ದರು. ಮಾಲಿವುಡ್‌ನಲ್ಲಿ ಆಕೆಯ ಸಿನಿಮಾಗಳಿಗೆ ಭಾರೀ ಕ್ರೇಜ್ ಇತ್ತು. ಬೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿತ್ತು. ಹಸಿಬಿಸಿ ದೃಶ್ಯಗಳಿಂದಲೇ ಶಕೀಲಾ ಸಂಚಲನ ಸೃಷ್ಟಿಸಿದ್ದರು. ಇದೀಗ ಆಕೆ ಕಾಸ್ಟಿಂಗ್ ಕೌಚ್ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಟಿಯರನ್ನು ಮಂಚಕ್ಕೆ ಕರೆಯುವ ಕಾಮುಕರು ಇದ್ದಾರೆ ಎನ್ನುವ ಚರ್ಚೆ ಪದೇ ಪದೆ ನಡೀತಿರುತ್ತದೆ. ಮೀಟು ಅಭಿಯಾನದ ಅಡಿಯಲ್ಲಿ ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. ಕೆಲ ನಟಿಯರು ತಮ್ಮನ್ನು ಮಂಚಕ್ಕೆ ಕರೆದವರ ಹೆಸರು ಹೇಳಿದರೆ ಮತ್ತೆ ಕೆಲವರು ಹೆಸರು ಹೇಳಲು ಹಿಂದೇಟು ಹಾಕಿದ್ದಾರೆ. ಇತ್ತೀಚೆಗೆ ತಮಿಳು ನಟಿ ವಿಚಿತ್ರ ತಾವು ಎದುರಿಸಿದ ಕಹಿ ಘಟನೆ ಬಗ್ಗೆ ಮಾತನಾಡಿದ್ದರು.

ನಟಿ ವಿಚಿತ್ರಾ ತಮಿಳು ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಸ್ಪರ್ಧಿಯಾಗಿ ಆಕೆ ಮನೆಯೊಳಗೆ ಇದ್ದು ಇತ್ತೀಚೆಗೆ ತಾವು ಚಿತ್ರರಂಗದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆ ಮೌನ ಮುರಿದಿದ್ದರು. ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ನಾನು ನಟಿಸುತ್ತಿದ್ದೆ. ಒಮ್ಮೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ನಟ ನನ್ನನ್ನು ನೋಡಿ ರೂಮಿಗೆ ಬಾ ಎಂದು ಕರೆದ. ನಾನು ಹೋಗದಿದ್ದಾಗ ನನಗೆ ಪರೋಕ್ಷವಾಗಿ ತೊಂದರೆ ಕೊಟ್ಟಿದ್ದ ಎಂದು ಹೇಳಿದ್ದರು. ಆದರೆ ಆ ನಟ ಯಾರು ಎನ್ನುವುದನ್ನು ಮಾತ್ರ ಮುಚ್ಚಿಟ್ಟಿದ್ದರು.
ಆಕೆ ನೀಡಿದ ಸುಳಿವಿನ ಆಧಾರದಲ್ಲಿ ಅದು ಬಾಲಕೃಷ್ಣ ನಟನೆಯ 'ಭಲೇ ವಾಡಿವಿ ಬಾಸು' ಸಿನಿಮಾ ಎಂದು ಕೆಲವರು ಗುರ್ತಿಸಿದ್ದಾರೆ. ಅಂದ್ರೆ ನಟಿ ವಿಚಿತ್ರಾ ಜೊತೆ ಖ್ಯಾತ ನಟ ಬಾಲಕೃಷ್ಣ ಕೆಟ್ಟದಾಗಿ ನಡೆದುಕೊಂಡಿದ್ರಾ? ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ. ಇದೆಲ್ಲದರ ನಡುವೆ ನಟಿ ಶಕೀಲಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. 'ಗಲಾಟ ತಮಿಳು' ಯೂಟ್ಯೂಬ್ ಚಾನಲ್‌ನಲ್ಲಿ ಆಕೆ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ವಿಚಿತ್ರಾ ಧೈರ್ಯವಾಗಿ ತನಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದು ಸರಿಯಾಗಿದೆ. ಆದರೆ ಆಕೆ, ಆ ನಟ ಯಾರು ಎನ್ನುವುದನ್ನು ಕೂಡ ಹೇಳಬೇಕಿತ್ತು. ಅಷ್ಟೆಲ್ಲ ಹೇಳಿ ಅದನ್ನು ಮಾತ್ರ ಯಾಕೆ ಹೇಳಲಿಲ್ಲ. ನಾನು ಕೂಡ ಹೇಳುತ್ತೇನೆ. ನನಗೂ ಚಿತ್ರರಂಗದಲ್ಲಿ ಇಂತಹ ಕೆಟ್ಟ ಪ್ರಸಂಗ ಎದುರಾಗಿತ್ತು. ನನ್ನನ್ನು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವಂತೆ ಖ್ಯಾತ ನಿರ್ದೇಶಕರು ಹೇಳಿದ್ದರು ಎಂದಿದ್ದಾರೆ.
"ತೆಲುಗಿನ ಖ್ಯಾತ ನಿರ್ದೇಶಕ ಇವಿವಿ ಸತ್ಯ ನಾರಾಯಣ ರಾವ್ ನನ್ನನ್ನು ಕೆಟ್ಟ ಅರ್ಥದಲ್ಲೇ ರೂಮಿಗೆ ಕರೆದರು. ತನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಅವರು ಮತ್ಯಾರು ಅಲ್ಲ ನಟ ಅಲ್ಲರಿ ನರೇಶ್ ತಂದೆ ಇವಿವಿ ಸತ್ಯ ನಾರಾಯಣ. ಅವರು ಆ ರೀತಿ ಕರೆದಾಗ ನಾನು ಹೇಳಿದೆ. ಬೇಡ ಸರ್, ಈ ಚಿತ್ರಕ್ಕೆ ನಾನು ಸಂಭಾವನೆ ಪಡೆದಿದ್ದು ಆಯ್ತು. ಮುಂದಿನ ಸಿನಿಮಾದಲ್ಲಿ ನಟಿಸುವುದಿಲ್ಲ. ಅಂತಹ ಆಲೋಚನೆ ಕೂಡ ನನಗೆ ಇಲ್ಲ ಸರ್ ಎಂದು ಹೇಳಿದ್ದೆ"
"ನಾನು ಎಂದೂ ಆ ರೀತಿ ಮಾಡಲಿಲ್ಲ. ನನ್ನ ಕರಿಯರ್‌ನಲ್ಲಿ ನನಗೆ ಎಂದೂ ಅಂತಹ ಪರಿಸ್ಥಿತಿ ಬರಲಿಲ್ಲ. ನಾನು ಈಗ ಹೇಳುತ್ತಿದ್ದೇನೆ. ಆ ನಿರ್ದೇಶಕನ ಹೆಸರು ಇವಿವಿ ಸತ್ಯ ನಾರಾಯಣ. ಅವ್ರು ಈಗ ನಿಧನರಾಗಿದ್ದಾರೆ. ನಾನು ಇನ್ನು ತೆಲುಗಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಡೀ ಚಿತ್ರರಂಗ ನನ್ನನ್ನು ಕರೆದು ಕೇಳಬಹುದು. ನನಗೆ ಭಯವಿಲ್ಲ. ನಾನು ಹೇಳಿದ್ದೇನೆ. ವಿಚಿತ್ರಾ ನೀವು ಹೇಳಿ ಅದು ಯಾರು ಅಂತ"
"ಮತ್ತೆ ಆ ಚಿತ್ರರಂಗಕ್ಕೆ ಹೋದರೆ ಒದೆಯುತ್ತಾರೆ ಎಂದು ಭಯಾನಾ? ಧೈರ್ಯ ಇದ್ದರೆ ನೀವು ಹೇಳಿ ಆ ನಟ ಯಾರು ಅಂತ. ನಾನು ಹೇಳಿದ್ದಂತೆ" ಎಂದು ನಟಿ ವಿಚಿತ್ರಾಗೆ ಶಕೀಲಾ ಹೇಳಿದ್ದಾರೆ.


Click it and Unblock the Notifications










