'ಕಲ್ಕಿ 2898 AD' ರಿಲೀಸ್ ಮುನ್ನ ಪ್ರಭಾಸ್ ಫ್ಯಾನ್ಸ್ ಕ್ಷಮೆ ಕೇಳಿದ ಬಿಗ್‌ಬಿ, ಕಾರಣವೇನು?
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಕಲ್ಕಿ 2898 AD' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ.
ಪೌರಾಣಿಕ ವಿಚಾರಗಳ ಜೊತೆಗೆ ಕಾಲ್ಪನಿಕ ಅಂಶಗಳನ್ನು ಸೇರಿಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮೇಕಿಂಗ್, ವಿಷ್ಯುವಲ್ಸ್ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಆದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಹೈಪ್ ಕ್ರಿಯೇಟ್ ಮಾಡಿಲ್ಲ. ಇನ್ನು ಚಿತ್ರದಲ್ಲಿ ಪ್ರಭಾಸ್ ಭೈರವ ಆಗಿ ನಟಿಸಿದ್ದರೆ ಮಹಾಭಾರತದ ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ.

ಪುರಾಣಗಳ ಪ್ರಕಾರ ಏಳು ಜನ ಚಿರಂಜೀವಿಗಳಲ್ಲಿ ಅಶ್ವತ್ಥಾಮನೂ ಒಬ್ಬ ಎಂದು ನಂಬಲಾಗುತ್ತದೆ. ಕಲಿಯುಗದಲ್ಲಿ ಕೂಡ ಅಶ್ವತ್ಥಾಮ ಜೀವಂತವಾಗಿದ್ದಾನೆ ಎನ್ನುವ ನಂಬಿಕೆ ಕೆಲವರಲ್ಲಿದೆ. ಅದೇ ಕಾರಣಕ್ಕೆ ಆ ಪಾತ್ರವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ನಾಗ್ ಅಶ್ವಿನ್ 'ಕಲ್ಕಿ 2898 AD' ಕಥೆ ಬರೆದುಕೊಂಡಿದ್ದಾರೆ. ಆ ಪಾತ್ರಕ್ಕೆ ಬಿಗ್‌ಬಿ ಸೂಕ್ತ ಎಂದು ಅವರನ್ನು ಆಯ್ಕೆ ಮಾಡಿಕೊಂಡಿದ್ದರು.
ಇನ್ನು ಭೈರವ ಹಾಗೂ ಅಶ್ವತ್ಥಾಮ ನಡುವೆ ಕಾದಾಟದ ದೃಶ್ಯಗಳು ಚಿತ್ರದಲ್ಲಿವೆ. ಈಗಾಗಲೇ ಟ್ರೈಲರ್‌ನಲ್ಲಿ ಅದರ ಝಲಕ್ ನೋಡಿದ್ದೇವೆ. ಸಿನಿಮಾ ಬಿಡುಗಡೆಗೂ ಮುನ್ನ ಪ್ರಭಾಸ್ ಅಭಿಮಾನಿಗಳಲ್ಲಿ ಅಮಿತಾಬ್ ಬಚ್ಚನ್ ಕ್ಷಮೆ ಕೋರಿದ್ದಾರೆ. ಸಂದರ್ಶನವೊಂದರಲ್ಲಿ ಇಡೀ 'ಕಲ್ಕಿ 2898 AD' ಮಾತನಾಡಿದೆ. ಈ ವೇಳೆ ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದೆ.
ಅಮಿತಾಬ್ ಮಾತನಾಡಿ "ಈ ಪ್ರಾಜೆಕ್ಟ್ ಬಗ್ಗೆ ಮಾತನಾಡಲು ನಾಗ್ ಅಶ್ವಿನ್ ನನ್ನ ಬಳಿ ಬಂದಾಗ, ನನ್ನ ಪಾತ್ರ ಹೇಗಿರುತ್ತದೆ ಹಾಗೂ ಪ್ರಭಾಸ್ ಪಾತ್ರ ಹೇಗಿರುತ್ತದೆ ಎಂಬುದನ್ನು ತೋರಿಸಲು ಅವರು ನನಗೆ ಕೆಲವು ಫೋಟೋಗಳನ್ನು ತೋರಿಸಿದರು. ಚಿತ್ರದಲ್ಲಿ ಪ್ರಭಾಸ್‌ನ ಹೊಡೆಯುವ ಪಾತ್ರ ನನ್ನದು. ಹಾಗಾಗಿ ಪ್ರಭಾಸ್ ಅಭಿಮಾನಿಗಳೆಲ್ಲರೂ ನನ್ನನ್ನು ಕ್ಷಮಿಸಿ. ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ. ಚಿತ್ರದಲ್ಲಿ ನಾನು ಮಾಡುವುದನ್ನು ನೋಡಿದ ನಂತರ ನನ್ನನ್ನು ಶಪಿಸಬೇಡಿ ಅಥವಾ ಟ್ರೋಲ್ ಮಾಡಬೇಡಿ" ಎಂದಿದ್ದಾರೆ.

ಬಿಗ್‌ಬಿ ಮಾತು ಕೇಳಿ ಪ್ರಭಾಸ್ "ಅಯ್ಯೋ ಸರ್, ಅವರೆಲ್ಲಾ ನಿಮ್ಮ ಫ್ಯಾನ್ಸ್ ಕೂಡ ಹೌದು ಬಿಡಿ" ಎಂದು ನಕ್ಕಿದ್ದಾರೆ. ಅಮಿತಾಬ್ ಮಾತು ಕೇಳಿದ ಮೇಲೆ ಚಿತ್ರದಲ್ಲಿ ಅಶ್ವತ್ಥಾಮ ಪಾತ್ರ ಎಷ್ಟು ಪವರ್‌ಫುಲ್ ಎನ್ನುವುದು ಗೊತ್ತಾಗುತ್ತಿದೆ. ಸರಣಿ ರೀತಿಯಲ್ಲಿ ಸಿನಿಮಾ ತೆರೆಗೆ ಬರಲಿದ್ದು ಮೊದಲ ಭಾಗದಲ್ಲಿ ಭೈರವ, ಅಶ್ವತ್ಥಾಮ ಪಾತ್ರಗಳ ನಡುವಿನ ಸಂಘರ್ಷವೇ ಹೈಲೆಟ್ ಎನ್ನುವುದು ಗೊತ್ತಾಗುತ್ತಿದೆ.
ಈಗಾಗಲೇ 'ಕಲ್ಕಿ 2898 AD' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಕೂಡ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಲವಡೆ ಮೊದಲ ಪ್ರದರ್ಶನ ಶುರುವಾಗುತ್ತಿದೆ. ಟಿಕೆಟ್ ದರವನ್ನು 500 ರೂ, 700 ರೂ,ಗಳಿಗೆ ಹೆಚ್ಚಿಸಲಾಗಿದೆ. ಈಗಾಗಲೇ ಕೆಲ ಶೋಗಳು ಟಿಕೆಟ್ಸ್ ಸೋಲ್ಡ್‌ಔಟ್ ಆಗೋಗಿದೆ.
ಭಾರೀ ನಿರೀಕ್ಷೆ ಹುಟ್ಟಾಕ್ಕಿರುವ ಸಿನಿಮಾ ಇದು. 'ಬಾಹುಬಲಿ' ಸರಣಿ ಬಳಿಕ ಬರುತ್ತಿರುವ ಬಹಳ ಅದ್ಧೂರಿ ಸಿನಿಮಾ. ಹಾಗಾಗಿ ಪ್ರಭಾಸ್ ಫ್ಯಾನ್ಸ್ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ದುಲ್ಕರ್ ಸಲ್ಮಾನ್, ರಾಣಾ, ವಿಜಯ್ ದೇವರಕೊಂಡ ಕೂಡ ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಗುರುವಾರ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











