50+ ಕೋಟಿ ಬಜೆಟ್‌ನ ಸಿನಿಮಾಗಳೇ ನಾಚುವಂತಿದೆ 10 ಕೋಟಿ ಬಜೆಟ್‌ನ ಈ ಸಿನಿಮಾದ ಕಲೆಕ್ಷನ್!
2023 ಎಲ್ಲಾ ಚಿತ್ರರಂಗಗಳಿಗೂ ಸಿಹಿ - ಕಹಿ ಎರಡನ್ನೂ ಸಮನಾಗಿ ಹಂಚಿದೆ ಎಂದೇ ಹೇಳಬಹುದು. ವರ್ಷದ ಮೊದಲಾರ್ಧ ಮುಕ್ತಾಯಗೊಂಡಿದ್ದು, ಸದ್ಯ ದ್ವಿತೀಯಾರ್ಧ ಆರಂಭಗೊಂಡಿದೆ. ಈ ಮೊದಲ ಆರು ತಿಂಗಳುಗಳಲ್ಲಿ ವಿವಿಧ ಚಿತ್ರರಂಗಗಳಲ್ಲಿ ಸ್ಟಾರ್ ನಟರ ಚಿತ್ರಗಳು ಸೇರಿದಂತೆ ಹಲವಾರು ಸಿನಿಮಾಗಳು ತೆರೆಗೆ ಬಂದಿವೆ.
ಈ ಪೈಕಿ ಕೆಲ ಚಿತ್ರಗಳು ಗೆದ್ದರೆ, ಇನ್ನೂ ಕೆಲ ಚಿತ್ರಗಳು ಮಕಾಡೆ ಮಲಗಿವೆ. ಇನ್ನು ತೆಲುಗು ಚಿತ್ರರಂಗವೂ ಸಹ ಈ ವರ್ಷ ಒಳ್ಳೆಯ ಗಳಿಕೆ ಮಾಡಿದ ಚಿತ್ರಗಳನ್ನು ಹೊಂದಿದೆ. ವರ್ಷದ ಆರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರವಿತೇಜಾ ನಟನೆಯ ವಾಲ್ತೇರು ವೀರಯ್ಯ ಸಿನಿಮಾ 200 ಕೋಟಿ ಕ್ಲಬ್ ಸೇರುವ ಮೂಲಕ ಶುಭಾರಂಭ ಮಾಡಿತ್ತು. ಆ ಬಳಿಕ ತೆರೆಗೆ ಬಂದ ಚಿತ್ರಗಳು ನಿರೀಕ್ಷೆಗೂ ಮೀರಿದ ಫಲಿತಾಂಶಗಳನ್ನು ಪಡೆದುಕೊಂಡಿವೆ.

ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿರುವ ಹಾಗೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ಕಲಾವಿದರ ಬಹು ನಿರೀಕ್ಷಿತ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡಲಾಗದೇ ಒದ್ದಾಡಿ ಸೋತರೆ, ಸ್ಟಾರ್ ಪಟ್ಟ ಇನ್ನೂ ಸಿಗದ, ಕೆಲವೇ ಚಿತ್ರಗಳಲ್ಲಿ ಅಭಿನಯಿಸಿರುವ ಯುವ ನಟ ಹಾಗೂ ನಟಿಯರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿವೆ. ಈ ಮೂಲಕ ಬಾಕ್ಸ್ ಆಫೀಸ್ ಆಳಲು ಬೇಕಿರುವುದು ಸ್ಟಾರ್‌ಡಂ ಅಲ್ಲ ವೀಕ್ಷಕರು ಇಷ್ಟಪಡುವಂತಹ ಕಂಟೆಂಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದಕ್ಕೆ ತಾಜಾ ಉದಾಹರಣೆಯೆಂದರೆ ತೆಲುಗಿನ ನೂತನ ಚಲನಚಿತ್ರ ಬೇಬಿ. ಹೌದು, ವಿಜಯ್ ದೇವರಕೊಂಡ ಸೋದರ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬೇಬಿ ಮೊನ್ನೆಯಷ್ಟೇ ( ಜುಲೈ 14 ) ಬಿಡುಗಡೆಗೊಂಡಿದೆ.
ಬಿಡುಗಡೆಗೂ ಮುನ್ನ ತನ್ನ ಹಾಡುಗಳಿಂದ ಹಾಗೂ ಟ್ರೈಲರ್‌ನಿಂದ ಸದ್ದು ಮಾಡಿದ್ದ ಈ ಚಿತ್ರ ವಿವಾದಾತ್ಮಕ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಕ್ರಿಯೇಟ್ ಮಾಡಿತಾದರೂ ಇದೆಲ್ಲಾ ಪಬ್ಲಿಸಿಟಿ ಸ್ಟಂಟ್, ಇದರಿಂದ ಜನರು ಥಿಯೇಟರ್‌ಗೆ ಬರಲಾರರು ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಚಿತ್ರ ಬಿಡುಗಡೆಯಾದ ಬಳಿಕ ಕಥೆ ವಿಚಾರವಾಗಿ ಜನರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಲಾ ದಿನಗಳಿಂದ ಓರ್ವನನ್ನು ಪ್ರೀತಿಸುವ ಸ್ಲಂನಲ್ಲಿ ಬೆಳೆದ ಹುಡುಗಿ ಕಾಲೇಜು, ಶ್ರೀಮಂತ ಸ್ನೇಹಿತರು ಸಿಕ್ಕಾಗ ಕಾಲಕ್ಕೆ ತಕ್ಕ ಹಾಗೆ ಹೇಗೆ ಬದಲಾಗ್ತಾಳೆ ಎಂಬ ಒಂದು ಸರಳ ಎಳೆಯ ಮೇಲೆ ರಚಿಸಲಾಗಿರುವ ಈ ಚಿತ್ರವನ್ನು ನೋಡಲು ಸಿನಿ ರಸಿಕರ ದಂಡೇ ಚಿತ್ರಮಂದಿರದತ್ತ ಬರುತ್ತಿದೆ.
ಹೀಗೆ ದೊಡ್ಡ ತಾರಾಗಣವಿಲ್ಲದೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ಬರೋಬ್ಬರಿ 7.1 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಬೇಬಿ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಇನ್ನು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿರುವ ಪ್ರಕಾರ ಬೇಬಿ ಚಿತ್ರ ಎರಡೇ ದಿನಕ್ಕೆ 7 ಕೋಟಿ ಕಲೆಕ್ಷನ್ ಮಾಡಿ ಬ್ರೇಕ್ ಈವನ್ ಟಾರ್ಗೆಟ್ ಮುಟ್ಟಿದ್ದು, ಇಂದಿನಿಂದ ಬರುವ ಕಲೆಕ್ಷನ್ ಎಲ್ಲಾ ಲಾಭ ಎನ್ನಲಾಗ್ತಿದೆ.
ಇನ್ನು ಇದೇ ವರ್ಷ ತೆರೆಗೆ ಬಂದಿದ್ದ ನಾಗಚೈತನ್ಯ ನಟನೆಯ ಕಸ್ಟಡಿ ಸಿನಿಮಾ ಮೊದಲ ದಿನ 5.24 ಕೋಟಿ ಗಳಿಸಿತ್ತು. 40+ ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಕಸ್ಟಡಿ ಚಿತ್ರ ಒಟ್ಟು 15 ಕೋಟಿ ಗಳಿಸುವಲ್ಲಿ ತನ್ನ ಓಟವನ್ನು ಮುಗಿಸಿತ್ತು. ಈ ಮೂಲಕ ಚಿತ್ರ ದೊಡ್ಡ ನಷ್ಟವನ್ನು ಕಂಡಿತ್ತು.
ಅತ್ತ ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಚಿತ್ರದ್ದೂ ಸಹ ಇದೇ ಹಣೆಬರಹ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ರುತ್ ಪ್ರಭು ಫೋಟೊಗೆ ಬರುವಷ್ಟು ಲೈಕ್ಸ್‌ನಲ್ಲಿ ಅರ್ಧದಷ್ಟು ಸಿನಿ ರಸಿಕರೂ ಸಹ ಚಿತ್ರಮಂದಿರಗಳ ಕಡೆ ಬರಲೇ ಇಲ್ಲ. ಬರೋಬ್ಬರಿ 60ರಿಂದ 70 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಮೊದಲ ದಿನ 3 ಕೋಟಿ ಗಳಿಸಿತ್ತು ಹಾಗೂ ಒಟ್ಟಾರೆ 20 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಈ ಚಿತ್ರ ತೆಲುಗು ಚಿತ್ರರಂಗ ಕಂಡ ಅತಿದೊಡ್ಡ ಫ್ಲಾಪ್‌ಗಳಲ್ಲಿ ಒಂದು ಎನಿಸಿಕೊಂಡಿದೆ.
ಇನ್ನು ಗೋಪಿಚಂದ್ ನಟನೆಯ ರಾಮಬಾಣಂ ಸಿನಿಮಾದ ಕಥೆ ಕೂಡ ಸೇಮ್. 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮೊದಲ ದಿನ 2.11 ಕೋಟಿ ಗಳಿಕೆ ಮಾಡಿತ್ತು ಹಾಗೂ ಒಟ್ಟಾರೆ 10 ಕೋಟಿ ಗಳಿಕೆ ಮಾಡುವಷ್ಟರಲ್ಲಿ ದಣಿದಿತ್ತು.
ಹೀಗೆ ದೊಡ್ಡ ದೊಡ್ಡ ಬಜೆಟ್‌ನ ತೆಲುಗು ಸ್ಟಾರ್ ನಟರ ಚಿತ್ರಗಳೇ ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಲಾಭ ಗಳಿಸಲಾಗದೇ ಒದ್ದಾಡುತ್ತಿದ್ದರೆ ಯುವ ತಂಡದ ಬೇಬಿ ಚಿತ್ರ ಎರಡೇ ದಿನಕ್ಕೆ ಲಾಭ ಗಳಿಸಲು ಆರಂಭಿಸಿದೆ.


Click it and Unblock the Notifications











