ಪ್ರಭಾಸ್‌ಗಾಗಿ ಭವಿಷ್ಯದ ಕಾರು ನಿರ್ಮಿಸಿಕೊಡಲಿದ್ದಾರೆ ಉದ್ಯಮಿ ಆನಂದ್ ಮಹೀಂದ್ರ
ಆನಂದ್ ಮಹೀಂದ್ರಾ ಭಾರತದ ಆದರ್ಶ ಉದ್ಯಮಿಗಳಲ್ಲಿ ಒಬ್ಬರು. ಮಹೀಂದ್ರಾ ಆಂಡ್ ಮಹೀಂದ್ರಾದ ಒಡೆಯರಾಗಿರುವ ಆನಂದ್ ಮಹೀಂದ್ರಾ ಇದೀಗ ನಟ ಪ್ರಭಾಸ್ ಸಿನಿಮಾದ ಜೊತೆ ಕೈಜೋಡಿಸುತ್ತಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿಯುಳ್ಳವರು ಆದರೆ ಸಿನಿಮಾ ರಂಗದಿಂದ ದೂರವೇ ಉಳಿದವರು. ಆದರೆ ಈಗ ಹಠಾತ್ತನೆ ಪ್ರಭಾಸ್ ಸಿನಿಮಾದ ಜೊತೆ ಕೊಲ್ಯಾಬರೇಟ್ ಆಗಿದ್ದಾರೆ. ಅದಕ್ಕೆ ಮುಖ್ಯ ಕಾರಣವೂ ಇದೆ.
ಆನಂದ್ ಮಹೀಂದ್ರಾ ತಮ್ಮ ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯಿಂದ ಸ್ಕಾರ್ಪಿಯೋ, ಎಕ್ಸ್‌ಯುವಿ, ಜೀಪ್ ಸೇರಿದಂತೆ ಕೆಲವು ಅತ್ಯುತ್ತಮ, ಪವರ್‌ಫುಲ್ ಕಾರುಗಳನ್ನು ಮಾರುಕಟ್ಟೆಗೆ ತಂದಿದೆ. ಇದೀಗ ಪ್ರಭಾಸ್‌ರ ಹೊಸ ಸಿನಿಮಾ ಒಂದಕ್ಕೆ ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಬಳಸಿರದಂಥಹಾ ಅತ್ಯಾಧುನಿಕ ಶೈಲಿಯ ಕಾರುಗಳನ್ನು ಒದಗಿಸಲು ಮಹೀಂದ್ರಾ ಸಂಸ್ಥೆಯೊಂದಿಗೆ ಪ್ರಭಾಸ್‌ರ ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.
ಪ್ರಭಾಸ್ ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾ 'ಪ್ರಾಜೆಕ್ಟ್ ಕೆ' ಭವಿಷ್ಯದ ಕತೆಯನ್ನು ಹೊಂದಿದ್ದು, ಇದಕ್ಕಾಗಿ ಅತ್ಯಾಧುನಿಕ ಶೈಲಿಯ ವಾಹನಗಳ ಅಗತ್ಯವಿದೆ. ಈ ಅತ್ಯಾಧುನಿಕ ಶೈಲಿಯ, ವಿನ್ಯಾಸದ ಕಾರುಗಳನ್ನು ನಿರ್ಮಿಸಿ ಕೊಡುವ ಜವಾಬ್ದಾರಿಯನ್ನು ಆನಂದ್ ಮಹೀಂದ್ರಾರ ಮಹೀದ್ರಾ ಆಂಡ್ ಮಹೀಂದ್ರಾ ವಹಿಸಿಕೊಂಡಿದೆ.

ಆನಂದ್ ಮಹೀಂದ್ರಾ ನೆರವು ಕೇಳಿದ್ದಾರೆ
ತಮಗೆ ಅಡ್ವಾನ್ಸ್ಡ್ ಕಾರುಗಳನ್ನು ತಯಾರು ಮಾಡಲು ಸಹಾಯ ನೀಡಿರೆಂದು, ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ಆನಂದ್ ಮಹೀಂದ್ರಾಗೆ ಟ್ವೀಟ್ ಮಾಡಿದ್ದಾರೆ. ''ಆನಂದ್ ಮಹೀಂದ್ರಾ ಸರ್, ನಾವು ಭಾರತದ ಸೈ-ಫೈ ಸಿನಿಮಾ ಮಾಡುತ್ತಿದ್ದೇವೆ. ಅಮಿತಾಬ್ ಬಚ್ಚನ್, ಪ್ರಭಾಸ್, ದೀಪಿಕಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಮ್ಮ ಸಿನಿಮಾ ಕತೆಯ ಪ್ರಪಂಚಕ್ಕೆ ಇಂದಿನ ತಂತ್ರಜ್ಞಾನಕ್ಕಿಂತಲೂ ಬಹಳ ಮುಂದುವರೆದ ತಂತ್ರಜ್ಞಾನ ಹೊಂದಿರುವ ಹಾಗೂ ವಿನ್ಯಾಸಗಳನ್ನು ಹೊಂದಿರುವ ಕಾರುಗಳ ಅವಶ್ಯಕತೆ ಇದೆ. ನಾವು ಅಂದುಕೊಂಡಂತೆ ಈ ಸಿನಿಮಾ ತಯಾರಾದರೆ ಇದು ಭಾರತದ ಹಿರಿಮೆ ಹೆಚ್ಚಿಸಲಿದೆ'' ಎಂದಿದ್ದಾರೆ ನಾಗ್ ಅಶ್ವಿನ್.

ಎಂಜಿನಿಯರ್‌ಗಳು, ಡಿಸೈನರ್‌ಗಳು ಇದ್ದಾರೆ
ಮತ್ತೊಂದು ಟ್ವೀಟ್‌ನಲ್ಲಿ, ''ನಿಮ್ಮನ್ನು ನಾನು ಬಹಳ ಮೆಚ್ಚುತ್ತೇನೆ. ನಮ್ಮ ಬಳಿ ಪ್ರತಿಭಾನ್ವಿತ, ಭಾರತೀಯ ಎಂಜಿನಿಯರ್‌ಗಳು ಹಾಗೂ ಡಿಸೈನರ್‌ಗಳು ಇದ್ದಾರೆ. ಆದರೆ ಈ ಪ್ರಾಜೆಕ್ಟ್‌ನ ವ್ಯಾಪ್ತಿ ಬಹಳ ದೊಡ್ಡದು ಹಾಗಾಗಿ ನಮಗೆ ಸಹಾಯದ ಅವಶ್ಯಕತೆ ಇದೆ. ಈ ರೀತಿಯ ಸಿನಿಮಾ ಈ ಹಿಂದೆ ಭಾರತದಲ್ಲಿ ಯಾರೂ ಮಾಡಿಲ್ಲ. ಭವಿಷ್ಯದ ವಾಹನಗಳನ್ನು ತಯಾರು ಮಾಡಲು ನೀವು ನಮಗೆ ಸಹಾಯ ಮಾಡಿದರೆ ಅದು ನಮಗೆ ಗೌರವದ ವಿಷಯ'' ಎಂದು ನಾಗ್ ಅಶ್ವಿನ್, ಆನಂದ್ ಮಹೀಂದ್ರಾ ಬಳಿ ಮನವಿ ಮಾಡಿದ್ದಾರೆ.

ನಾಗ್ ಅಶ್ವಿನ್ ಮನವಿಗೆ ಸ್ಪಂದಿಸಿದ ಆನಂದ್
ನಾಗ್ ಅಶ್ವಿನ್ ಮನವಿಗೆ ಸ್ಪಂದಿಸಿರುವ ಆನಂದ್ ಮಹೀಂದ್ರಾ, ''ಭವಿಷ್ಯದ ವಾಹನಗಳ ತಯಾರಿಕೆಗೆ ನಾವು ಸಹಾಯ ಮಾಡದಿರಲು ಆಗುತ್ತದೆಯೇ? ನಮ್ಮ ಸಂಸ್ಥೆಯ ಗ್ಲೋಬಲ್ ಪ್ರಾಡೆಕ್ಟ್ ಡೆವೆಲಪರ್ ವೇಲು ಮಹೀಂದ್ರಾ ನಿಮಗೆ ಸಹಾಯ ಮಾಡುತ್ತಾರೆ. ನಿಮಗೆ ಸಹಾಯ ಮಾಡಲು ಅವರು ಉತ್ಸುಕರಾಗಿರುತ್ತಾರೆ. ವೇಲು ಮಹೀಂದ್ರಾ ನಮ್ಮ ಸಂಸ್ಥೆಯ ಎಕ್ಸ್‌ಯುವಿ 700 ನಿರ್ಮಾಣ ಮಾಡಿದ್ದಾರೆ ಅಲ್ಲದೆ ಇನ್ನಿತರೆ ಭವಿಷ್ಯದ ಕಾರುಗಳ ನಿರ್ಮಾಣದಲ್ಲಿ ಅವರು ತೊಡಗಿಕೊಂಡಿದ್ದಾರೆ'' ಎಂದಿದ್ದಾರೆ ಆನಂದ್ ಮಹೀಂದ್ರಾ.

ಸಿನಿಮಾ ನಿರ್ದೇಶಕ ಆಗಬೇಕೆಂದುಕೊಂಡಿದ್ದ ಆನಂದ್
ಇಂದು ಆನಂದ್ ಮಹೀಂದ್ರಾ ಭಾರತದ ಯಶಸ್ವಿ ಉದ್ಯಮಿ. ಆದರೆ ಅವರು ಆಗಲು ಬಯಸಿದ್ದಿದ್ದು ಉದ್ಯಮಿ ಅಲ್ಲ ಬದಲಿಗೆ ಸಿನಿಮಾ ನಿರ್ದೇಶಕ. ಇದಕ್ಕಾಗಿ ಕಾಲೇಜಿನಲ್ಲಿ ಸಿನಿಮಾವನ್ನು ಅಭ್ಯಾಸ ಮಾಡಿದರು. ಓದಿನ ಸಮಯದಲ್ಲಿ 'ಕುಂಭ ಮೇಳ'ದ ಬಗ್ಗೆ ಸಿನಿಮಾ ತೆಗೆದು ಅದನ್ನು ಪ್ರಾಜೆಕ್ಟ್ ರೀತಿ ಸಬ್‌ಮಿಟ್ ಮಾಡಿದ್ದರು. ಇಂಧೋರ್ ಸೇರಿ ಕೆಲವು ಕಡೆಗಳಲ್ಲಿ ಹಳ್ಳಿಗಳಿಗೆ ತೆರಳಿ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಿದ್ದರು. ಆದರೆ ಸಿನಿಮಾ ನಿರ್ದೇಶಕ ಆಗಬೇಕು ಎಂದುಕೊಂಡಿದ್ದ ಆನಂದ್ ಮಹೀಂದ್ರಾ ಆಗಿದ್ದು ಮಾತ್ರ ಉದ್ಯಮಿ. ಈಗವರು ಮಹೀಂದ್ರಾ ಗ್ರೂಪ್ಸ್‌ನ ಚೇರ್‌ಮನ್.


Click it and Unblock the Notifications











