ಶ್ರೀಲೀಲಾ ಬಂದ್ಲು ಅಂತ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ ನಿರೂಪಕಿ; ಮುಂದೇನಾಯ್ತು?
ಸಿನಿಮಾ ತಾರೆಯರ ಕ್ರೇಜ್ ಹೇಗಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ನಟ-ನಟಿಯರನ್ನು ದೇವಲೋಕದಿಂದ ಇಳಿದುಬಂದವರು ಎನ್ನುವಂತೆ ಭಾವಿಸುವವರು ಇದ್ದಾರೆ. ಇನ್ನು ಸ್ಟಾರ್ ಸ್ಟೇಟಸ್ ಸಿಕ್ಕ ಕಲಾವಿದರ ಹವಾ ಜೋರಾಗಿಯೇ ಇರುತ್ತದೆ. ತಾರೆಯರು ಸುಮ್ಮನಿದ್ದರೂ ಸುತ್ತಾಮುತ್ತಾ ಇರುವವರ ದರ್ಬಾರ್ ಹೆಚ್ಚಾಗುತ್ತದೆ.
ಕನ್ನಡ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಕೂಡ ಮಿಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳಕ್ಕೆ ಜಿಗಿಯಲು ಸಜ್ಜಾಗಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸೋಕೆ ಸಹಿ ಮಾಡಿದ್ದಾರೆ. ಕನ್ನಡದಲ್ಲಿ 'ಜ್ಯೂನಿಯರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿಲ್ಲ. ಇದೆಲ್ಲದರ ನಡುವೆ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಶ್ರೀಲೀಲಾ ಹಾಜರಾಗಿದ್ದರು. ಈ ವೇಳೆ ಸಚಿವರ ಭಾಷಣಕ್ಕೆ ನಿರೂಪಕಿ ಬ್ರೇಕ್ ಹಾಕಿ ಶ್ರೀಲೀಲಾಳನ್ನು ಸ್ವಾಗತಿಸಿದ ಪ್ರಸಂಗ ನಡೆದಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ 'ಸೀತಾ' (She Is The Hero Always) ಎಂಬ ಹೊಸ ಆ್ಯಪ್ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ತೆಲಂಗಾಣ ಸಚಿವರಾದ ಶ್ರೀಧರ್ ಬಾಬು ಹಾಗೂ ನಟಿ ಶ್ರೀಲೀಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಲೀಲಾ ಬರುವುದು ಕೊಂಡ ತಡವಾಗಿತ್ತು. ಅದಾಗಲೇ ಶ್ರೀಧರ್ ಬಾಬು ವೇದಿಕೆಯಲ್ಲಿ ಭಾಷಣ ಆರಂಭಿಸಿದ್ದರು.
ಸಚಿವರ ಭಾಷಣದ ನಡುವೆ ಶ್ರೀಲೀಲಾ ಸಭಾಂಗಣಕ್ಕೆ ಬಂದಿದ್ದರು. ಆಕೆಯನ್ನು ನೋಡಿದ ಕೂಡಲೇ ನಿರೂಪಕಿ ಝಾನ್ಸಿ ಸೀದಾ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿ, ಮೈಕ್ ತಮ್ಮತ್ತ ತಿರುಗಿಸಿಕೊಂಡು "ಕಾರ್ಯಕ್ರಮಕ್ಕೆ ಶ್ರೀಲೀಲಾ ಬಂದಿದ್ದಾರೆ ಅವರಿಗೂ ಸ್ವಾಗತ" ಎಂದು ಹೇಳಿದ್ದಾರೆ. ಇದರಿಂದ ಒಂದು ಕ್ಷಣ ಸಚಿವರು ಅವಕ್ಕಾಗಿದ್ದರು. ಆ ವೀಡಿಯೋ ವೈರಲ್ ಆಗುತ್ತಿದೆ.
ತೆಲಂಗಾಣ ಐಟಿ ಸಚಿವರು ಮಾತನಾಡುತ್ತಿದ್ದಾಗಲೇ ಮೈಕ್ ಕಸಿದುಕೊಂಡು ನಟಿ ಶ್ರೀಲೀಲಾ ಅವರನ್ನು ನಿರೂಪಕಿ ವೇದಿಕೆಗೆ ಆಹ್ವಾನಿಸಿದರು. ದಿಢೀರನೆ ಹೀಗೆ ನಡೆದಿದ್ದು ನೋಡಿ ಸಚಿವರು ಅಚ್ಚರಿಯಿಂದ ಹಿಂದೆ ನಿಂತರು. ಬಳಿಕ ಮುಗುಳ್ನಗೆ ಬೀರಿ ಸುಮ್ಮನಾದರು. ಶ್ರೀಲೀಲಾ ವೇದಿಕೆಗೆ ಬಂದು ಸಚಿವರ ಕ್ಷಮೆ ಕೇಳಿದರು. ಬಳಿಕ ಅವರು ಭಾಷಣ ಮುಂದುವರೆಸಿದರು. "ಮತ್ತೊಬ್ಬ ಹೀರೊ ನಮ್ಮ ವೇದಿಕೆಗೆ ಬಂದರು" ಎಂದು ಹೇಳಿದರು.
ಸದ್ಯ ಈ ವೀಡಿಯೋ ವೈರಲ್ ಆಗಿ ನಿರೂಪಕಿ ಝಾನ್ಸಿ ನಡೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಯಾವ ನಟಿ ಬಂದರೆ ಏನು ಒಬ್ಬರು ಭಾಷಣ ಮಾಡುವಾಗ ಅಡ್ಡಿಪಡಿಸಬಾರದು ಎನ್ನುವ ಕಾಮನ್‌ಸೆನ್ಸ್ ಬೇಡವೇ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಮಾರಂಭಕ್ಕೆ ಶ್ರೀಲೀಲಾ ತಡವಾಗಿ ಬಂದಿದ್ದು ಆಕೆಯ ತಪ್ಪು. ಬಂದ ಮೇಲೆ ವೇದಿಕೆ ಮುಂಭಾಗದಲ್ಲಿ ಕೂರುತ್ತಿದ್ದರು. ಸಚಿವರು ಭಾಷಣ ಮುಗಿಸಿದ ಬಳಿಕ ಆಕೆಯನ್ನು ಸ್ವಾಗತಿಸಬಹುದಿತ್ತು. ಸಚಿವರ ಭಾಷಣಕ್ಕೆ ಬ್ರೇಕ್ ಹಾಕಿ ಮೈಕ್ ಕಸಿದುಕೊಂಡು ಕರೆಯುವುದು ಏನಿತ್ತು? ಅಷ್ಟು ಗೊತ್ತಾಗದಿದ್ದರೆ ಹೇಗೆ? ಎಂದು ಟ್ರೋಲ್ ಮಾಡುತ್ತಿದ್ದಾರೆ.
ಝಾನ್ಸಿ ಏನು ಹೊಸದಾಗಿ ನಿರೂಪಣೆ ಮಾಡುತ್ತಿಲ್ಲ. ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆ ಜವಾಬ್ದಾರಿ ಹೊತ್ತಿದ್ದರು. ಇಂತಹವರಿಗೆ ವೇದಿಕೆಯ ಬಗ್ಗೆ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಕೆಲವರು ಕಿಡಿಕಾರುತ್ತಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗೆ ಶ್ರೀಲೀಲಾ ನಟಿಸಿದ ತೆಲುಗಿನ 'ರಾಬಿನ್‌ಹುಡ್' ಸಿನಿಮಾ ಹೀನಾಯವಾಗಿ ಸೋತಿತ್ತು. ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್' ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅದರಲ್ಲಿ ಕಿಸ್ ಬೆಡಗಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ 'ಆಶಿಕಿ- 3' ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಮತ್ತೆರಡು ಹಿಂದಿ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುವ ಬಗ್ಗೆ ಮಾತುಕತೆ ನಡೀತಿದೆ. ಅತ್ತ ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ 'ಪರಾಶಕ್ತಿ' ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿದ್ದಾರೆ. 'ಮಾಸ್ ಜಾತರ' ಹಾಗೂ 'ಲೆನಿನ್' ಎಂಬ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











