ಹಲವರ ಬದುಕು ಬೀದಿಗೆ; ಹೊಸ ವಿವಾದದಲ್ಲಿ ಸಿಲುಕಿದ ನಿರೂಪಕಿ ಸುಮಾ ಕನಕಾಲ
ಸಿನಿಮಾ ಮಂದಿಗೆ ವಿವಾದಗಳು ಹೇಗೆಲ್ಲಾ ಸುತ್ತಿಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ ಕೂಡ ಸಂಕಷ್ಟ ಎದುರಿಸುವಂತಾಗುತ್ತದೆ. ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೋ ಏನೋ ಕೆಲವೊಮ್ಮೆ ಸಿನಿಮಾ ತಾರೆಯರು ಎಲ್ಲದಕ್ಕೂ ದಂಡ ತೆರಬೇಕಾಗಿದ್ದಾರೆ.
ತೆಲುಗು ನಿರೂಪಕಿ ಸುಮಾ ಯಾವುದೇ ಸಿನಿಮಾ ನಾಯಕಿಗೆ ಕಮ್ಮಿ ಇಲ್ಲ ಎನ್ನುವಂತೆ ಟಾಲಿವುಡ್‌ನಲ್ಲಿ ಜನಪ್ರಿಯತೆ ಸಾಧಿಸಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹರಳು ಹರಿದಂತೆ ಮಾತನಾಡುವ ಸುಮಾ ನಿರೂಪಣೆಗೆ ಸೆಲೆಬ್ರೆಟಿಗಳು ಫಿದಾ ಆಗಿಬಿಡುತ್ತಾರೆ. ಯಾವುದೇ ಸಿನಿಮಾ ಕಾರ್ಯಕ್ರಮ ಆಗಿದ್ದರೂ ಸುಮಾ ನಿರೂಪಣೆ ಮಾಡುತ್ತಾರೆ ಎಂದರೆ ಲವಲವಿಕೆ ಇರುತ್ತದೆ.

ಇನ್ನು ವಿವಾದಗಳಿಂದ ನಿರೂಪಕಿ ಸುಮಾ ದೂರವೇ ಉಳಿಯುತ್ತಾರೆ. ಆದರೆ ಇತ್ತೀಚೆಗೆ 'ತಂಗಲಾನ್' ಸಿನಿಮಾ ವೇದಿಕೆಯಲ್ಲಿ ನಟನೊಬ್ಬ ಆಕೆಯ ಕೈಗೆ ಮುತ್ತಿಟ್ಟ ಘಟನೆ ನಡೆದಿತ್ತು. ವೇದಿಕೆಯಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಜೊತೆ ಸುಮಾ ಮಾತನಾಡುತ್ತಿದ್ದರು. ಆತನ ಕೈ ಕುಲುಕಿ ಬೀಳ್ಕೊಡಲು ಮುಂದಾಗಿದ್ದರು. ಈ ವೇಳೆ ದಿಢೀರನೆ ಆತ ಸುಮಾ ಕೈಗೆ ಮುತ್ತುಕೊಟ್ಟಿದ್ದ. ಒಂದು ಕ್ಷಣ ಶಾಕ್ ಆಗಿದ್ದ ಆಕೆ ತಮಾಷೆಯಾಗಿ ಮಾತನಾಡಿ ಅದನ್ನು ತಿಳಿಗೊಳಿಸಿದ್ದರು.
ಸದ್ಯ ನಿರೂಪಕಿ ಸುಮಾ ಹೆಸರಿಗೆ ಹೊಸ ವಿವಾದ ಸುತ್ತಿಕೊಂಡಿದೆ. ಆಂಧ್ರದ ರಾಜಮಂಡ್ರಿಯಲ್ಲಿ ರಾಕಿ ಅವೆನ್ಯೂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಾಕಷ್ಟು ಜನರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಮಧ್ಯಮ ವರ್ಗದ ಜನರಿಗೆ ಕಡಿಮೆ ಹಣದಲ್ಲಿ ಅಪಾರ್ಟ್‌ಮೆಂಟ್ ಫ್ಲಾಟ್‌ಗಳನ್ನು ನಿರ್ಮಿಸಿಕೊಡುವುದಾಗಿ ಸಂಸ್ಥೆ ಹೇಳಿತ್ತು. ಇದನ್ನು ನಂಬಿ ಸಾಕಷ್ಟು ಜನ ಹಣ ಕಟ್ಟಿದ್ದರು. ಸಂಸ್ಥೆ ಬರೋಬ್ಬರಿ 88 ಕೋಟಿ ರೂ. ಹಣ ಸಂಗ್ರಹಿಸಿ ಜನರಿಗೆ ಟೋಪಿ ಹಾಕಿದೆ.
ರಾಕಿ ಅವೆನ್ಯೂ ಪ್ರೈವೇಟ್ ಲಿಮಿಟೆಡ್ ಮೋಸದಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಉಳಿತಾಯದ ಹಣವನ್ನೆಲ್ಲಾ ಜನ ತೆಗೆದುಕೊಂಡಿ ಕಟ್ಟಿದ್ದರು. ಇದೀಗ ಹಣವೂ ಇಲ್ಲ ಮನೆಯೂ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮಯ್ಯ ವೇಣು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಹಣ ಕಟ್ಟಿದ ಜನರಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವರದಿ ಆಗುತ್ತಿದೆ. ರಾಮಯ್ಯ ವೇಣು ವಿಜಯವಾಡ, ರಾಜಮಂಡ್ರಿ, ಅಮಲಾಪುರದಲ್ಲಿ ಗೆಟೆಡ್ ಕಮ್ಯುನಿಟಿ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಜಾಹೀರಾತು ನಂಬಿ ಮೋಸ ಹೋಗಿರುವ ಕೆಲವರು ನಿರೂಪಕಿ ಸುಮಾ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ರಾಕಿ ಅವೆನ್ಯೂ ಸಂಸ್ಥೆ ನಿರ್ಮಿಸಿದ ಪೇಸ್-1 ಬಿಲ್ಡಿಂಗ್ ನಾನು ನೋಡಿದ್ದೀನಿ. ಪೇಸ್-2 ಕೂಡ ಶೀಘ್ರದಲ್ಲೇ ನಿರ್ಮಾಣವಾಗುತ್ತದೆ ಎಂದು ಸುಮಾ ಪ್ರಚಾರ ಮಾಡಿದ್ದರು. ಅದನ್ನು ನೋಡಿ ನಾವು ಹಣ ಕಟ್ಟಿದ್ದೆವು. ನಾನು ತಲಾ 25 ಲಕ್ಷ ರೂಪಾಯಿಯಂತೆ 4 ತ್ರಿಬಲ್ ಬೆಡ್‌ರೂಂ ಮನೆಗಳಿಗೆ 1 ಕೋಟಿ ರೂ. ಕೊಟ್ಟಿರುವುದಾಗಿ ಅವರು ಹೇಳಿದ್ದಾರೆ.
ಸುಮಾ ಮಾತ್ರವಲ್ಲದೇ ಅವರ ಪತಿ ನಟ ರಾಜು ಕನಕಾಲ ಸಹ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಪೇಸ್ -1ರ ಫ್ಲಾಟ್‌ಗಳು ಮಾರಾಟವಾಗಿವೆ. ಕೇವಲ 18 ಲಕ್ಷಕ್ಕೆ ಪೇಸ್-2ನಲ್ಲಿ ಫ್ಲಾಟ್‌ಗಳು ಸಿದ್ಧವಾಗುತ್ತಿದೆ. ಯುಗಾದಿ ವಿಶೇಷಾಗಿ ಕಂಪನಿಯೇ ರಿಜಿಸ್ಟ್ರೇಷನ್ ಹಣ ಭರಿಸುತ್ತದೆ. ಜಿಎಸ್‌ಟಿ ಕೂಡ ಕಟ್ಟುವಂತಿಲ್ಲ ಎಂದು ನಿರೂಪಕಿ ಸುಮಾ ಜಾಹೀರಾತಿನಲ್ಲಿ ಹೇಳಿದ್ದರು. ಇದೇ ಮಾತುಗಳನ್ನು ನಾವು ನಂಬಿ ಹಣ ಕಟ್ಟಿದೆವು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸುಮಾ ಮಾತು ಹೇಳಿ ನಮಗೆ ಆಸೆಯಾಯಿತು. ಇದು ದೊಡ್ಡ ಕಂಪೆನಿ ಬೇರೆ. ಹಾಗಂತ ಸುಮಾ ಅವರನ್ನು ನಾವು ಆರೋಪಿಸುತ್ತಿಲ್ಲ. ಆಕೆ ನಮಗೆ ಏನಾದರೂ ಸಹಾಯ ಮಾಡುತ್ತಾರಾ ಎಂದು ಮನವಿ ಮಾಡುತ್ತಿದ್ದೇವೆ ಎಂದು ಮೋಸ ಹೋಗಿರುವ ಮತ್ತೊಬ್ಬರು ತಿಳಿಸಿದ್ದಾರೆ. ತಾರೆಯರು ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಇಂತಹ ಸಮಸ್ಯೆಗಳು ಎದುರಾಗುತ್ತವೆ.


Click it and Unblock the Notifications











