ಎಪಿ-ತೆಲಂಗಾಣ ಪ್ರವಾಹ; ಕೋಟಿ ಕೋಟಿ ದೇಣಿಗೆ ಘೋಷಿಸಿದ ತೆಲುಗು ಸ್ಟಾರ್ಸ್
ಆಂಧ್ರ, ತೆಲಂಗಾಣದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಸಾವಿರ ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. 40 ಜನ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಪ್ರವಾಹ ಪರಿಸ್ಥಿತಿಯಿಂದ ಜನ ಸಂಕಷ್ಟ ಎದುರಿಸುವಂತಾಗಿದೆ. ಇದೀಗ ತೆಲುಗು ಸಿನಿಮಾ ತಾರೆಯರು ಸಹಾಯಕ್ಕೆ ಧಾವಿಸಿದ್ದು ಕೈಲಾದ ನೆರವು ನೀಡುತ್ತಿದ್ದಾರೆ. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು, ಚಿರಂಜೀವಿ ಸೇರಿದಂತೆ ಕೆಲವರು ದೇಣಿಗೆ ಘೋಷಿಸಿದ್ದಾರೆ.
ಭಾರೀ ಮಳೆಯಿಂದ ಆಂಧ್ರ, ತೆಲಂಗಾಣದಲ್ಲಿ ಜನ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ಪ್ರವಾಹದ ರೀತಿ ನೀರು. ಜನರು ಆಹಾರ ಮತ್ತು ನೀರಿಗಾಗಿ ಪರಿತಪಿಸುತ್ತಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಖಮ್ಮಂ ಹಾಗೂ ವಿಜಯವಾಡ ಜಿಲ್ಲೆಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಎರಡೂ ರಾಜ್ಯ ಸರ್ಕಾರಗಳು ರಕ್ಷಣಾ ಕ್ರಮಗಳನ್ನು ಕೈಗೊಂಡಿವೆ.

ಸಾಮಾನ್ಯವಾಗಿ ಆಂಧ್ರ ಅಥವಾ ತೆಲಂಗಾಣದಲ್ಲಿ ಕೆಲವೊಮ್ಮೆ ಅತಿವೃಷ್ಠಿ ಉಂಟಾಗುತ್ತದೆ. ಆದರೆ ಈ ಬಾರಿ ಒಟ್ಟೊಟ್ಟಿಗೆ ಎರಡೂ ತೆಲುಗು ರಾಜ್ಯಗಳು ಪ್ರವಾಹದಿಂದ ಸಂಕಷ್ಟ ಎದುರಿಸುವಂತಾಗಿದೆ. ತೆಲುಗು ಚಿತ್ರರಂಗ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಲು ಮುಂದಾಗಿದೆ.
ನಟ ಜ್ಯೂ. ಎನ್‌ಟಿಆರ್ ಆಂಧ್ರ ಹಾಗೂ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ. ಇದಕ್ಕೂ ಮುನ್ನ ನಟ ಚಿರಂಜೀವಿ ಕೂಡ ಎರಡೂ ರಾಜ್ಯಗಳಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಚಿರಂಜೀವಿ ಬಳಿಕ ಒಬ್ಬೊಬ್ಬರಾಗಿ ಸಹಾಯಕ್ಕೆ ಮುಂದಾಗಿದ್ದಾರೆ. ಪುತ್ರ ರಾಮ್‌ಚರಣ್ ಒಂದು ಕೋಟಿ ಘೋಷಿಸಿದ್ದಾರೆ.

ಮಹೇಶ್ ಬಾಬು ಕೂಡ ಎರಡೂ ರಾಜ್ಯಗಳಿಗೆ ತಲಾ 50 ಲಕ್ಷ ರೂ. ಪರಿಹಾರ ಘೋಷಿಸಿದ್ದು ಪ್ರಭಾಸ್ ತಲಾ ಒಂದೊಂದು ಕೋಟಿ ರೂಪಾಯಿ ನೀಡಿದ್ದಾರೆ. ಯಾವುದೇ ಸಂಕಷ್ಟದ ಸಮಯದಲ್ಲಿ ಪ್ರಭಾಸ್ ಹೆಚ್ಚು ಹೆಚ್ಚು ದೇಣಿಗೆ ಕೊಡುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಅದನ್ನು ಮುಂದುವರೆಸಿದ್ದಾರೆ. ಅಲ್ಲು ಅರ್ಜುನ್ ಕೂಡ ತಲಾ 50 ಲಕ್ಷದಂತೆ ಟ1 ಕೋಟಿ ರೂಪಾಯಿ ನೀಡಿದ್ದಾರೆ.
ಇನ್ನು ಡಿಜೆ ಟಿಲ್ಲು ಖ್ಯಾತಿಯ ಸಿದ್ದು ಜೊನ್ನಲಗಡ್ಡ 30 ಲಕ್ಷ, ವಿಶ್ವಕ್ ಸೇನ್ ರೂ. 10 ಲಕ್ಷ, ವೆಂಕಿ ಅಟ್ಲೂರಿ 10 ಲಕ್ಷ, ಅನನ್ಯ ನಾಗೆಲ್ಲ 2.5 ಲಕ್ಷ ರೂ. ರೂಪಾಯಿ ಆಂಧ್ರ, ತೆಲಂಗಾಣ ಪ್ರವಾಹ ಪರಿಹಾರಕ್ಕಾಗಿ ದೇಣಿಗೆ ನೀಡಿದ್ದಾರೆ. 'ಕಲ್ಕಿ 2898AD' ಚಿತ್ರದ ನಿರ್ಮಾಪಕ 25 ಲಕ್ಷ ದೇಣಿಗೆ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಪರಿಹಾರವಾಗಿ ದೇಣಿಗೆ ನೀಡುವ ನಿರೀಕ್ಷೆಯಿದೆ.
ತಾವು ದೇಣಿಗೆ ನೀಡುವುದು ಮಾತ್ರವಲ್ಲ ಅಭಿಮಾನಿಗಳಿಗೂ ಕೈಲಾದ ಸಹಾಯ ಮಾಡುವಂತೆ ಸ್ಟಾರ್ ನಟರು ಮನವಿ ಮಾಡಿದ್ದಾರೆ. ನಟ ಚಿರಂಜೀವಿ ಟ್ವೀಟ್ ಮಾಡಿ "ತೆಲುಗು ರಾಜ್ಯಗಳಲ್ಲಿ ಪ್ರವಾಹದಿಂದ ಜನರಿಗೆ ಎದುರಾಗಿರುವ ಸಂಕಷ್ಟ ನನಗೆ ದುಃಖ ತಂದಿದೆ. ಕೆಲ ಅಮಾಯಕರು ಬಲಿಯಾಗಿರುವುದು ಅತ್ಯಂತ ದುಃಖಕರ. ತೆಲುಗು ರಾಜ್ಯಗಳ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಎರಡೂ ಸರ್ಕಾರಗಳು ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಸುಧಾರಿಸಲು ಶ್ರಮಿಸುತ್ತಿವೆ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು" ಎಂದಿದ್ದಾರೆ.


Click it and Unblock the Notifications










