40 ದಿನ ಜೈಲಿನಲ್ಲಿ ನರಕಯಾತನೆ ಅನುಭವಿಸಿದ ನಟಿ, 03 ಐಪಿಎಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ ಸರ್ಕಾರ..!
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಹತ್ತಿರ ಹೋದಾಗಲೇ ಅಲ್ಲಿ ಅದು ಕಲ್ಲು ಮುಳ್ಳಿನ ಹಾದಿ ಎನ್ನುವುದು ಗೊತ್ತಾಗುತ್ತೆ. ಇದಕ್ಕೆ ಕಾದಂಬರಿ ಜೇತ್ವಾನಿ ಅತ್ಯುತ್ತಮ ಉದಾಹರಣೆ.
ಹೌದು, ಗುಜರಾತ್ ರಾಜ್ಯವನ್ನು ಚೆಸ್‌ನಲ್ಲಿ ಪ್ರತಿನಿಧಿಸುವುದಲ್ಲದೇ, ಈಜು ಮತ್ತು ಭರತನಾಟ್ಯದಲ್ಲಿ ಮುಂದೆ ಇದ್ದ ಕಾದಂಬರಿ ಜೇತ್ವಾನಿ ದ್ವೀತಿಯ ಪಿಯುಸಿಯಲ್ಲಿ ಗುಜರಾತ್ ರಾಜ್ಯಕ್ಕೆ ಟಾಪರ್ ಕೂಡ ಆಗಿದ್ದವರು. ಇಂಥಾ ಕಾದಂಬರಿಗೆ ಅದ್ಯಾವ ಘಳಿಗೆಯಲ್ಲಿ ಈ ಬಣ್ಣದ ಲೋಕ ಸೆಳೆಯಿತೋ ಗೊತ್ತಿಲ್ಲ, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಕಾದಂಬರಿ ರೂಪದರ್ಶಿಯಾದರು. ಚಿತ್ರರಂಗಕ್ಕೆ ಬಂದರು. ರಾಜ್ ಕುಮಾರ್ ರೆಡ್ಡಿ ನಿರ್ದೇಶನದ 'ಯೂಜಾ' ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದರು.

ಆದರೆ, ಇದೇ ಸಮಯದಲ್ಲಿ ಕಾದಂಬರಿಯ ಅದೃಷ್ಟ ಕೈ ಕೊಡ್ತು. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ವಿದ್ಯಾಸಾಗರ್ ಕಣ್ಣು ಕಾದಂಬರಿ ಮೇಲೆ ಬಿತ್ತು. ಅಲ್ಲಿಂದಾಚೆ ಕಾದಂಬರಿ ಅನುಭವಿಸಿದ್ದು ಅಕ್ಷರಶಃ ನರಕಯಾತನೆ. ವಿದ್ಯಾಸಾಗರ್‌ದಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಕಾದಂಬರಿ ಮಾನಸಿಕ ಆಘಾತಕ್ಕೊಳಗಾಗಿದ್ದರು. ಆ ನಂತರ ಕಾರಣ ಇಲ್ಲದೇ ನಲವತ್ತು ದಿನ ಜೈಲಿನಲ್ಲಿ ಇದ್ದು ಬಂದರು. ಕೇವಲ ಕಾದಂಬರಿಯನ್ನಷ್ಟೇ ಜೈಲಿನಲ್ಲಿ ಕೂಡಿ ಹಾಕದೇ ಅವರ ತಂದೆ ಮತ್ತು ತಾಯಿಗೆ ಕೂಡ ಚಿತ್ರಹಿಂಸೆಯನ್ನು ವಿದ್ಯಾಸಾಗರ್ ಮತ್ತು ತಂಡದವರು ನೀಡಿದರು. ಕೆಲ ದಿನಗಳ ಹಿಂದೆಯಷ್ಟೇ ಖುದ್ದು ಕಾದಂಬರಿ ತಮ್ಮ ಈ ಕರುಣಾಜನಕ ಕಥೆಯನ್ನು ಹೇಳಿದ್ದರು.
ನಮ್ಮ ಮನೆಯಿಂದ ಹತ್ತು ಫೋನ್‌ಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ, ನಮಗೆ ಇನ್ನೂ ನಮ್ಮ ವಸ್ತುಗಳನ್ನು ಮರಳಿ ನೀಡಿಲ್ಲ ಎಂದಿದ್ದರು. ನನ್ನ ಬ್ಯಾಂಕ್ ಖಾತೆಗಳನ್ನು ಕೂಡ ಫ್ರೀಜ್ ಮಾಡಿಸಿದ್ದಾರೆ ಎಂಬ ಆರೋಪವನ್ನು ಕೂಡ ಕಾದಂಬರಿ ಮಾಡಿದ್ದರು.

ಹೀಗೆ ತಮ್ಮ ನೋವನ್ನು ಕಾದಂಬರಿ ಹಂಚಿಕೊಂಡು, ಈ ಎಲ್ಲ ಕುಕೃತ್ಯದಲ್ಲಿ ಆಂಧ್ರ ಪ್ರದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಕೈವಾಡ ಕೂಡ ಇದೆ ಎಂದು ಆರೋಪವನ್ನು ಮಾಡಿದ್ದರು. ಆಂಧ್ರಪ್ರದೇಶ ಪೊಲೀಸರಿಗೆ ಆನ್‌ಲೈನ್ ಮೂಲಕ ಕಾದಂಬರಿ ಅವರು ದೂರನ್ನು ಸಲ್ಲಿಸಿದ್ದರು. ಕಾದಂಬರಿ ಸಲ್ಲಿಸಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಸರ್ಕಾರ ಈಗ ಡೈರೆಕ್ಟರ್ ಜನರಲ್ (ಡಿಜಿ) ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಮಾಜಿ ಗುಪ್ತಚರ ಮುಖ್ಯಸ್ಥ ಪಿ ಸೀತಾರಾಮ ಆಂಜನೇಯುಲು (ಡಿಜಿ ಶ್ರೇಣಿ), ವಿಜಯವಾಡ ಮಾಜಿ ಪೊಲೀಸ್ ಕಮಿಷನರ್ ಕ್ರಾಂತಿ ರಾಣಾ ಟಾಟಾ (ಐಜಿ ಶ್ರೇಣಿ), ಮತ್ತು ವಿಶಾಲ್ ಗುನ್ನಿ (ಎಸ್ಪಿ ಶ್ರೇಣಿ), ಅಂದಿನ ಉಪ ಪೊಲೀಸ್ ಆಯುಕ್ತ (ವಿಜಯವಾಡ) ಅವರನ್ನು ಅಮಾನತ್ತುಗೊಳಿಸಿರುವ ಆಂಧ್ರ ಸರ್ಕಾರ, ಅಮಾನತುಗೊಂಡ ಐಪಿಎಸ್ ಅಧಿಕಾರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಪರಾಧವನ್ನು ದಾಖಲಿಸುವ ಮೊದಲೇ ನಟಿಯನ್ನು ಬಂಧಿಸಲು ಆದೇಶ ನೀಡಿದ್ದರು. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸದೆ ಈ ಮೌಖಿಕ ಸೂಚನೆಗಳನ್ನು ಪಾಲಿಸಿದ್ದಕ್ಕಾಗಿ ಮತ್ತೋರ್ವ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಮತ್ತೋರ್ವ ಅಧಿಕಾರಿಯಿಂದಲೂ ಅಧಿಕಾರದ ದುರುಪಯೋಗ ಆಗಿರೋದು ಕಂಡು ಬಂದಿದೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದೆ.

ಸದ್ಯಕ್ಕೆ ಕಾದಂಬರಿ ಅವರ ಆರೋಪದ ಮೇಲೆ ಮೂವರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವಜಾಗೊಳಿಸಿದ ಬೆನ್ನಲ್ಲಿಯೇ, ಜಗನ್ ಮೋಹನ್ ರೆಡ್ಡಿ ವಿರುದ್ಧ ಸೇಡು ತೀರಿಸಿಕೊಳ್ಳಲು ಚಂದ್ರಬಾಬು ನಾಯ್ಡು ಹೀಗೆಲ್ಲ ಮಾಡುತ್ತಿದ್ದಾರೆ. ಕಾದಂಬರಿ ಪ್ರಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎನ್ನುವ ಮಾತು ಆಂಧ್ರದಲ್ಲಿ ಕೇಳಿ ಬರುತ್ತಿದೆ. ಈ ಪ್ರಕರಣದ ಕುರಿತು ತೆಲುಗು ಚಿತ್ರರಂಗದಲ್ಲಿ ಕೂಡ ವ್ಯಾಪಕವಾಧ ಚರ್ಚೆ ನಡೆಯುತ್ತಿದೆ.


Click it and Unblock the Notifications











