ಜಗನ್ ಸರ್ಕಾರಕ್ಕೆ ಮುಖಭಂಗ: ಗೆದ್ದು ಬೀಗಿದ ತೆಲುಗು ಚಿತ್ರರಂಗ
ಚಿತ್ರಮಂದಿರಗಳ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ನಡೆಯುತ್ತಿದ್ದ ಹೋರಾಟದಲ್ಲಿ ತೆಲುಗು ಚಿತ್ರರಂಗಕ್ಕೆ ಮೇಲುಗೈ ಆಗಿದೆ.
ಚಿತ್ರಮಂದಿರಗಳ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿದ್ದ ಜಗನ್ ಸರ್ಕಾರ, ರಾಜ್ಯದಾದ್ಯಂತ ಪ್ರಾಂತ್ಯವಾರು ವಿಂಗಡಿಸಿ ಚಿತ್ರಮಂದಿರಗಳ ಟಿಕೆಟ್ ದರ ನಿಗದಿಪಡಿಸಿದ್ದರು. ಅಷ್ಟೇ ಅಲ್ಲದೆ ಇನ್ನು ಮುಂದೆ ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ರಾಜ್ಯ ಸರ್ಕಾರವೇ ಮಾರಾಟ ಮಾಡಲಿದೆ ಎಂದು ಸಹ ಘೋಷಿಸಿದ್ದರು.
ಚಿತ್ರಮಂದಿರಗಳ ಟಿಕೆಟ್ ದರವನ್ನು ತೀವ್ರವಾಗಿ ತಗ್ಗಿಸಿದ್ದರಿಂದ ತೆಲುಗು ಚಿತ್ರರಂಗ ತೀವ್ರ ಆತಂಕಕ್ಕೆ ಒಳಗಾಗಿತ್ತು, ಜಗನ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿತ್ತು. ಪವನ್ ಕಲ್ಯಾಣ್ ಹಾಗೂ ಇತರ ಕೆಲವರು ಜಗನ್ ಸರ್ಕಾರದ ವಿರುದ್ಧ ಏಕ ವಚನದ ವಾಗ್ದಾಳಿ ಸಹ ಮಾಡಿದ್ದರು. ಕೊನೆಗೆ ಚಿತ್ರರಂಗದ ಬೆಂಬಲದೊಂದಿಗೆ ಆಂಧ್ರ ಚಿತ್ರಮಂದಿರ ಮಾಲೀಕರ ಸಂಘವು ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ, ಅಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ಚಿತ್ರಮಂದಿರ ಮಾಲೀಕರ ಸಂಘ
ರಾಜ್ಯ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರ ನಿಯಂತ್ರಣ ಮಾಡಿರುವ ಆದೇಶವನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ಚಿತ್ರಮಂದಿರ ಮಾಲೀಕರ ಸಂಘವು ಹೈಕೋರ್ಟ್ ಮೆಟ್ಟಿಲೇರಿತ್ತು. ಇವರಿಗೆ ತೆಲುಗು ಚಿತ್ರರಂಗ ಬೆಂಬಲ ಸೂಚಿಸಿತ್ತು. ಟಿಕೆಟ್ ದರ ಇಳಿಸಿ ಆಂಧ್ರ ಸರ್ಕಾರ ಹೊರಡಿಸಿದ್ದ ಸರ್ಕಾರಿ ಆದೇಶ 35ಕ್ಕೆ ಆಂಧ್ರ ಹೈಕೋರ್ಟ್ ತಡೆ ನೀಡಿದೆ. ರಾಜ್ಯ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರವನ್ನು ತಗ್ಗಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಟಿಕೆಟ್ ದರ ಹೆಚ್ಚಿಸುವ ಅಧಿಕಾರ ಚಿತ್ರಮಂದಿರ ಮಾಲೀಕರದ್ದು
ಚಿತ್ರಮಂದಿರ ಮಾಲೀಕರ ಪರವಾಗಿ ವಾದ ಮಂಡಿಸಿದ ವಕೀಲರು, ಚಿತ್ರಮಂದಿರಗಳ ಟಿಕೆಟ್ ದರದ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅದು ಮಾತ್ರವೇ ಅಲ್ಲದೆ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರವನ್ನು ಹೆಚ್ಚಳ ಮಾಡುವ ಅಧಿಕಾರ ಚಿತ್ರಮಂದಿರ ಮಾಲೀಕರಿಗೆ ಇದೆ ಎಂದು ವಾದಿಸಿದರು. ಚಿತ್ರಮಂದಿರಗಳ ಪರವಾಗಿ ವಾದ ಮಂಡಿಸಿದ ವಕೀಲರ ವಾದವನ್ನು ಹೈಕೋರ್ಟ್ ಮಣ್ಣಿಸಿದೆ. ಟಿಕೆಟ್ ದರವನ್ನು ಹೆಚ್ಚಿಸುವ ಅಧಿಕಾರವನ್ನು ಚಿತ್ರಮಂದಿರ ಮಾಲೀಕರಿಗೆ ನೀಡಿದೆ.

ಪಾರದರ್ಶಕತೆ ಕೊರತೆ ಎಂದಿದ್ದ ಜಗನ್ ಸರ್ಕಾರ
ದೊಡ್ಡ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಚಿತ್ರಮಂದಿರಗಳ ಮಾಲೀಕರು ಟಿಕೆಟ್ ದರ ಏರಿಕೆ ಮಾಡುತ್ತಾರೆ. ಹೆಚ್ಚುವರಿ ಶೋಗಳನ್ನು ಪ್ರದರ್ಶನ ಮಾಡುತ್ತಾರೆ. ಹೆಚ್ಚುವರಿ ದರಕ್ಕೆ ಅನುಗುಣವಾಗಿ ತೆರಿಗೆ ಪಾವತಿಸುವುದಿಲ್ಲ. ಹೆಚ್ಚುವರಿ ಶೋನಲ್ಲಿ ಗಳಿಸಿದ ಹಣಕ್ಕೆ ಲೆಕ್ಕ ಇರುವುದಿಲ್ಲ. ಒಟ್ಟಾರೆ ಸಿನಿಮಾ ಬಿಡುಗಡೆ ಹಾಗೂ ಕಲೆಕ್ಷನ್ ವಿಷಯದಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದ ಜಗನ್ ಸರ್ಕಾರ, ಟಿಕೆಟ್ ದರವನ್ನು ನಿಯಂತ್ರಿಸಿತ್ತು. ಅಲ್ಲದೆ ರಾಜ್ಯದಾದ್ಯಂತ ಟಿಕೆಟ್ ಅನ್ನು ತಾವೇ ಮಾರಾಟ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಹೈಕೋರ್ಟ್ ಆದೇಶದಿಂದ ಜಗನ್ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ. ಹೈಕೋರ್ಟ್‌ನ ಈ ಆದೇಶಕ್ಕೆ ಜಗನ್ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಸಹ ಕಾದು ನೋಡಬೇಕಿದೆ.

ತೆಲಂಗಾಣ ಹೈಕೋರ್ಟ್‌ನಿಂದಲೂ ಆದೇಶ
ತೆಲಂಗಾಣ ಸರ್ಕಾರದಲ್ಲಿಯೂ ಟಿಕೆಟ್ ದರಗಳ ಬಗ್ಗೆ ಸರ್ಕಾರ ಗೊಂದಲದ ನಿರ್ಣಯ ಕೈಗೊಂಡಿತ್ತು. ಅಲ್ಲಿಯೂ ಸಹ ಚಿತ್ರಮಂದಿರ ಮಾಲೀಕರ ಸಂಘವು ಹೈಕೋರ್ಟ್‌ಗೆ ಹೋಗಿ ಅಲ್ಲಿ ನ್ಯಾಯ ಪಡೆದುಕೊಂಡಿತು. ಆದರೆ ತೆಲಂಗಾಣ ಹೈಕೋರ್ಟ್, ಚಿತ್ರಮಂದಿರ ಮಾಲೀಕರು 50 ರುಪಾಯಿಗೆ ಮೀರದಂತೆ ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು ಎಂದು ಆದೇಶ ನೀಡಿದೆ. ಆದರೆ ಆಂಧ್ರ ಹೈಕೋರ್ಟ್, ಟಿಕೆಟ್ ದರವನ್ನು ಹೆಚ್ಚಿಸುವ ಅಧಿಕಾರವನ್ನು ಪೂರ್ಣವಾಗಿ ಚಿತ್ರಮಂದಿರ ಮಾಲೀಕರಿಗೆ ನೀಡಿದೆ. ಇಷ್ಟೇ ದರ ಹೆಚ್ಚಿಸಬೇಕು ಎಂಬ ನಿಯಮವನ್ನು ಆಂಧ್ರ ಹೈಕೋರ್ಟ್ ವಿಧಿಸಿಲ್ಲ.


Click it and Unblock the Notifications











