ಫ್ಯಾನ್.. ಫ್ಯಾನ್ ಅಂತ ಬಟ್ಟೆ ಹರಿದುಕೊಳ್ತಿಯಾ.. ಆದ್ರೆ ನೀನು ಯಾರಂತ ಆ ಹೀರೊಗೆ ಗೊತ್ತಿಲ್ಲ..
ಅಭಿಮಾನ ಎನ್ನುವುದೇ ಹಾಗೆ. ಒಮ್ಮೆ ಹುಟ್ಟಿಕೊಂಡರೆ ಅಷ್ಟು ಸುಲಭವಾಗಿ ಹೋಗಲ್ಲ. ಹೆತ್ತ ತಂದೆ-ತಾಯಿಗಿಂತ ನೆಚ್ಚಿನ ನಟ- ನಟಿ ಇಷ್ಟ ಎನ್ನುವ ಅಭಿಮಾನಿಗಳು ಇರ್ತಾರೆ. ತಮ್ಮ ಪೋಷಕರ ಹುಟ್ಟುಹಬ್ಬ ನೆನಪಿರುತ್ತೋ ಇಲ್ಲವೋ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.
ಅಭಿಮಾನಿಗಳ ಈ ಹುಚ್ಚು ಅಭಿಮಾನದ ಬಗ್ಗೆಯೇ ತೆಲುಗಿನಲ್ಲಿ ಒಂದು ಸಿನಿಮಾ ಬರ್ತಿದೆ. ಚಿತ್ರದ ಹೆಸರು 'ಆಂಧ್ರಕಿಂಗ್ ತಾಲೂಕಾ'. ರಾಮ್ ಪೊತಿನೇನಿ ಹೀರೊ ಆಗಿ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ಜೊತೆ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ರಾಮ್ ಚಿತ್ರದಲ್ಲಿ ಸಿನಿಮಾ ನಟನ ಅಭಿಮಾನಿಯಾಗಿ ನಟಿಸಿದ್ದಾರೆ. ವಿಶೇಷ ಅಂದ್ರೆ ಆತನ ಆರಾಧ್ಯ ದೈವ ಸಿನಿಮಾ ನಟ 'ಆಂಧ್ರಕಿಂಗ್' ಸೂರ್ಯಕುಮಾರ್ ಆಗಿ ಕನ್ನಡ ನಟ ಉಪೇಂದ್ರ ಬಣ್ಣ ಹಚ್ಚಿದ್ದಾರೆ.

ಟಾಲಿವುಡ್, ಕಾಲಿವುಡ್ ಉಪೇಂದ್ರಗೆ ಹೊಸದೇನು ಅಲ್ಲ. ಆಂಧ್ರ, ತೆಲಂಗಾಣದಲ್ಲಿ ಅವರ ಕ್ರೇಜ್ ಜೋರಾಗಿದೆ. ದಶಕಗಳ ಹಿಂದೆಯೇ 'ಎ' ಹಾಗೂ 'ಉಪೇಂದ್ರ' ಸಿನಿಮಾಗಳು ತೆಲುಗಿಗೆ ಡಬ್ ಆಗಿ ಸೂಪರ್ ಹಿಟ್ ಆಗಿತ್ತು. ಈ ವಾರ 'ಉಪೇಂದ್ರ' ಹೊಸ ರೂಪದಲ್ಲಿ ಮತ್ತೆ ತೆಲುಗು ಪ್ರೇಕ್ಷಕರ ಮುಂದೆ ಬಂದಿದೆ. ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೆಲ್ಲದರ ನಡುವೆ 'ಆಂಧ್ರಕಿಂಗ್ ತಾಲೂಕಾ' ಚಿತ್ರದ ಹೊಸ ಟೀಸರ್ ಬಂದಿದೆ.
ಮಹೇಶ್ ಬಾಬು ಪೊಚ್ಚಿಗೊಲ ಎಂಬುವವರು ನಿರ್ದೇಶನದ ಚಿತ್ರದಲ್ಲಿ ಭಾಗ್ಯಶ್ರೀ ನಾಯಕಿಯಾಗಿ ನಟಿಸಿದ್ದಾರೆ. ನಾಯಕ ಸಾಗರ್(ರಾಮ್) ತಂದೆ ಪಾತ್ರದಲ್ಲಿ ರಾವ್ ರಮೇಶ್ ಮಿಂಚಿದ್ದಾರೆ. ಚಿಕ್ಕಂದಿನಿಂದ ಮಗನನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುವ ತಂದೆ. ಸಿನಿಮಾ ನೋಡ್ತಾ ಸೂರ್ಯಕುಮಾರ್ ಅಭಿಮಾನಿ ಆಗಿಬಿಡ್ತಾನೆ. ಆದರೆ ತನ್ನ ಅಭಿಮಾನ ನಟನ ಕಾರಣಕ್ಕೆ ಸಾಗರ್ ಜೀವನದಲ್ಲಿ ಸಾಕಷ್ಟು ಏಳುಬೀಳು ಕಾಣುವಂತಾಗುತ್ತದೆ.
ಟೀಸರ್ ಕೊನೆಯಲ್ಲಿ ಬರುವ ಡೈಲಾಗ್ ವೈರಲ್ ಆಗ್ತಿದೆ. "ಫ್ಯಾನ್.. ಫ್ಯಾನ್ ಅಂತ ನೀನು ಬಟ್ಟೆ ಹರ್ಕೋತ್ತಿಯಾ. ಆದರೆ ನೀನೊಬ್ಬ ಇದ್ದೀಯಾ ಅನ್ನೋದು ಆ ನಿನ್ನ ಹೀರೊಗೆ ಗೊತ್ತಿಲ್ಲ. ಏನು ಜೀವನ ಕಣೊ ನಿಮ್ಮದೆಲ್ಲ.. ಛೀ.. ಛೀ" ಎನ್ನುವ ಡೈಲಾಗ್ ಸದ್ದು ಮಾಡ್ತಿದೆ. ಸ್ಟಾರ್ ನಟರನ್ನು ನೋಡಲು, ಅವರ ಸಿನಿಮಾಗಳು ಬಿಡುಗಡೆಯಾದಾಗ ಸಂಭ್ರಮಾಚರಣೆ ಮಾಡಲು ಹೋಗಿ ಪ್ರಾಣವನ್ನೇ ಪಣಕ್ಕಿಡುವ ಅಭಿಮಾನಿಗಳಿಗೆ ಈ ಡೈಲಾಗ್ ಒಪ್ಪುವಂತಿದೆ.
ನವೆಂಬರ್ 28ಕ್ಕೆ 'ಆಂಧ್ರಕಿಂಗ್ ತಾಲೂಕಾ' ಸಿನಿಮಾ ಬಿಡುಗಡೆ ಆಗಲಿದೆ. ಇಂತಾದೊಂದು ವಿಶೇಷವಾದ ಪಾತ್ರ ಉಪೇಂದ್ರ ಅವರಿಗೆ ಸಿಕ್ಕಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಕಳೆದ ವರ್ಷದ ಕೊನೆಗೆ 'ಯುಐ' ಸಿನಿಮಾ ಮೂಲಕ ಉಪ್ಪಿ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ವರ್ಷ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. '45' ಸಿನಿಮಾ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಈ ಸಿನಿಮಾ ತೆರೆಗಪ್ಪಳಿಸಲಿದೆ.
ಮೈತ್ರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿವೇಕ್- ಮೆರ್ವಿನ್ ಸಂಗೀತ ಚಿತ್ರಕ್ಕಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರುವ ಸಾಧ್ಯತೆಯಿದೆ. ಸತತ ಸೋಲುಗಳಿಂದ ಕಂಗೆಟ್ಟ ನಟ ರಾಮ್ ಪೊತಿನೇನಿ ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











