ಪ್ರಧಾನಿ ಮೋದಿ ಹಾಗೂ ಪವನ್ ಜೊತೆಗಿರುವ ಈ ಆರೂವರೆ ಅಡಿ ಕಟೌಟ್ ಯಾರು?
ಆಂಧ್ರಪ್ರದೇಶ ವಿಧಾನಸಭಾ ಚುನಾವಣಾಯಲ್ಲಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಕೆಳಗಿಳಿದಿದ್ದು ಶೀಘ್ರದಲ್ಲೇ ಹೊಸ ಸರ್ಕಾರ ಶುರುವಾಗಲಿದೆ. ಸೋತು ಸುಣ್ಣವಾಗಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಇದೀಗ ಎನ್‌ಡಿಎ ಸರ್ಕಾರದ ಆಧಾರಸ್ತಂಭವಾಗಿದ್ದಾರೆ. ಪವನ್ ಕಲ್ಯಾಣ್ ಸಂಚಲನ ಸೃಷ್ಟಿಸಿದ್ದಾರೆ.
ಕಳೆದ ಬಾರಿ ಹೀನಾಯವಾಗಿ ಸೋಲುಂಡಿದ್ದ ಜನಸೇನಾ ಪಕ್ಷ ಈ ಬಾರಿ ದಾಖಲೆ ಬರೆದಿದೆ. 100% ಸಕ್ಸಸ್ ರೇಟ್‌ನೊಂದಿಗೆ ಎಲ್ಲರ ಹುಬ್ಬೇರಿಸಿದೆ. ಜನಸೇನಾ ಅಭ್ಯರ್ಥಿಗಳು ಸ್ಪರ್ಧಿಸಿದ್ದ 21 ವಿಧಾನಸಭೆ ಹಾಗೂ 2 ಲೋಕಸಭೆ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಇನ್ನೈ ಮೈತ್ರಿ ಕೂಡ ಒಟ್ಟು 164 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಯಶಸ್ಸಿನ ಹಿಂದೆ ಪವರ್ ಸ್ಟಾರ್ ಶ್ರಮ ದೊಡ್ಡದಿದೆ. ಈ ಬಾರಿ ಚುನಾವಣೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಒಟ್ಟಿಗೆ ಸೇರಿ ಚುನಾವಣೆ ಎದುರಿಸಲು ಪವನ್ ಮುಖ್ಯ ಕಾರಣ. ಇನ್ನು ಯಶಸ್ಸು ಇದೀಗ ಗೊತ್ತಾಗಿದೆ.

10 ವರ್ಷಗಳ ಹಿಂದೆಯೇ ಜನಸೇನಾ ಪಕ್ಷ ಸ್ಥಾಪಿಸಿದ ಪವನ್ ಕಲ್ಯಾಣ್ ಗೆಲ್ಲಲು ಇಷ್ಟು ದಿನ ಕಾಯಬೇಕಾಯಿತು. ಇಷ್ಟು ದಿನ ಕಾದಿದ್ದಕ್ಕೂ ಭರ್ಜರಿ ಗೆಲುವು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಪವರ್ ಸ್ಟಾರ್ ಕ್ರೇಜ್ ನೋಡಿ ಪ್ರಧಾನಿ ಮೋದಿ ಅಚ್ಚರಿಗೊಂಡಿದ್ದಾರೆ. ಆಂಧ್ರದಲ್ಲಿ ಮೈತ್ರಿಕೂಟದ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ ಜನಸೇನಾನಿ ಬಗ್ಗೆ ವಿಶೇಷ ಅಭಿಮಾನವಿದೆ. ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದ ಶಾಸಕರಾಗಿ ಗೆದ್ದಿದ್ದರೂ ದೆಹಲಿಯಲ್ಲಿ ನಡೆದ ಎನ್‌ಡಿಯ ಮೈತ್ರಿಕೂಟ ಸಭೆಗೆ ಆಹ್ವಾನ ಸಿಕ್ಕಿತ್ತು.
ತಮ್ಮ 3ನೇ ಪತ್ನಿ ಅನ್ನಾ ಲೆಜ್ನೆವಾ ಹಾಗೂ ಪುತ್ರ ಅಕಿರಾ ನಂದನ್(ಮಾಜಿ ಪತ್ನಿ ರೇಣು ದೇಸಾಯಿ ಪುತ್ರ) ಜೊತೆ ಪವನ್ ದೆಹಲಿಗೆ ಹೋಗಿದ್ದರು. ಸಭೆಯ ಬಳಿಕ ಪತ್ನಿ ಹಾಗೂ ಪುತ್ರನನ್ನು ಪ್ರಧಾನಿಗೆ ಪರಿಚಯಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವೊಂದು ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಇಷ್ಟು ದಿನ ಅಕಿರಾ ನಂದನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಮ್ಮಿ. ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಕೂಡ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ.

ಪವನ್ ಕಲ್ಯಾಣ್‌ಗೆ ರೇಣು ದೇಸಾಯಿ ಡಿವೋರ್ಸ್ ನೀಡಿದ ಬಳಿಕ ಮಕ್ಕಳ ಜೊತೆ ತವರಿಗೆ ಮರಳಿದ್ದರು. ಪುಣೆಯಲ್ಲಿ ಕೆಲ ವರ್ಷಗಳು ಇದ್ದಾರೆ. ಜನಸೇನಾ ಪಕ್ಷ ಚುನಾವಣೆಯಲ್ಲಿ ಅಭೂತ ಪೂರ್ವ ಯಶಸ್ಸು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪವನ್ ನಿವಾಸದ ಬಳಿ ಜಮಾಯಿಸಿ ಜೈಕಾರ ಹಾಕಿದ್ದರು. ಆಗ ಅನ್ನಾ ಲೆಜ್ನೆವಾ ಹೊರಗೆ ಬಂದು ಧನ್ಯವಾದ ತಿಳಿಸಿದ್ದರು. ಹಿಂದೆಯೇ ಬಂದಿದ್ದ ಅಕಿರಾ ಸಹ ಎಲ್ಲರಿಗೂ ಕೈ ಮುಗಿದು ನಮಸ್ಕರಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಪವನ್ ಕಲ್ಯಾಣ್ ಸರಿಯಾದ ಸಮಯದಲ್ಲಿ ಪುತ್ರನನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಇಷ್ಟು ದಿನ ಅಕಿರಾ ಬಗ್ಗೆ ಪವನ್ ಅಭಿಮಾನಿಗಳಿಗೆ ಮಾತ್ರ ಗೊತ್ತಿತ್ತು. ಮೋದಿ ಭೇಟಿಯ ಬಳಿಕ ದೇಶ್ಯಾದ್ಯಂತ ಆತನ ಬಗ್ಗೆ ಗೊತ್ತಾಗಿದೆ. ಆತ ಯಾರು? ಎಂದು ಕೆಲವರು ತಿಳಿದುಕೊಳ್ಳಲು ಮುಂದಾಗಿದ್ದಾರೆ. ಇನ್ನು ಅಕಿರಾ ನಂದನ್ ಎತ್ತರ ಎಲ್ಲರ ಹುಬ್ಬೇರಿಸಿದೆ. 6. 4 ಅಡಿ ಎತ್ತರ ಇರುವ ಅಕಿರಾನನ್ನು ನೋಡಿ ಪ್ರಧಾನಿ ಮೋದಿ ಕೂಡ ಕಣ್ಣರಳಿಸಿದ್ದಾರೆ ಎಂದು ಪವನ್ ಕಲ್ಯಾಣ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಕೂಡ 6.5 ಅಡಿ ಎತ್ತರ ಇದ್ದಾರೆ. ಅದೇ ರೀತಿ ಅಕಿರಾ ನಂದನ್ ಹೈಟ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಿಂದೆ ಪವನ್ ಪುತ್ರನ ಬಗ್ಗೆ ಚಿರಂಜೀವಿ, ವರುಣ್ ತೇಜ್ ಮಾಡಿದ್ದ ಟ್ವೀಟ್‌ಗಳು ಈಗ ವೈರಲ್ ಆಗುತ್ತಿವೆ. ಉತ್ತರ ಭಾರತದವರಂತೂ ಈ ಫೋಟೊಗಳನ್ನು ನೋಡಿ ಯಾರಪ್ಪಾ ಈ ಆರೂವರೆ ಅಡಿ ಕಟೌಟ್ ಎಂದು ಹುಬ್ಬೇರಿಸಿದ್ದಾರೆ. ಅಕಿರಾ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಪವರ್ ಸ್ಟಾರ್ ಅಭಿಮಾನಿಗಳ ಆಸೆ. ಇತ್ತೀಚೆಗೆ ಆತ ತಂದೆ ಸ್ಪೆಷಲ್ ವಿಡಿಯೋ ಎಡಿಟ್ ಮಾಡಿದ್ದ. ಅದು ಸಖತ್ ವೈರಲ್ ಆಗ್ತಿದೆ.


Click it and Unblock the Notifications










