ತೆಲುಗು ಚಿತ್ರರಂಗಕ್ಕೆ ಮರ್ಮಾಘಾತ ನೀಡಿದ ಆಂಧ್ರ ಸರ್ಕಾರ
ತೆಲುಗು ಚಿತ್ರರಂಗದ ಮೇಲೆ ಆಂಧ್ರ ಸರ್ಕಾರ ಜಿದ್ದಿಗೆ ಬಿದ್ದಂತಿದೆ. ತೆಲುಗು ಚಿತ್ರರಂಗಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ.
ಕೆಲವು ದಿನಗಳ ಹಿಂದೆ ಆದೇಶ ಸಂಖ್ಯೆ 35 ಹೊರಡಿಸಿ ಆಂಧ್ರ ಪ್ರದೇಶ ರಾಜ್ಯದಾದ್ಯಂತ ಇರುವ ಚಿತ್ರಮಂದಿರಗಳ ಟಿಕೆಟ್ ದರವನ್ನು ಗಣನೀಯವಾಗಿ ಇಳಿಸಿದ್ದ ಜಗನ್ ನೇತೃತ್ವದ ಸರ್ಕಾರ ಇದೀಗ ಹೊಸ ಆದೇಶವನ್ನು ಹೊರಡಿಸಿದೆ. ಇದು ಇನ್ನೂ ದೊಡ್ಡ ಪೆಟ್ಟನ್ನು ತೆಲುಗು ಚಿತ್ರರಂಗಕ್ಕೆ ನೀಡಿದೆ.
ಎರಡು ದಿನಗಳ ಹಿಂದೆ ಆದೇಶ ಸಂಖ್ಯೆ 142 ಹೊರಡಿಸಿರುವ ಜಗನ್ ಸರ್ಕಾರ, ಇನ್ನು ಮುಂದೆ ರಾಜ್ಯದಾದ್ಯಂತ ಇರುವ ಎಲ್ಲ ಚಿತ್ರಮಂದಿರಗಳ ಟಿಕೆಟ್‌ಗಳನ್ನು ತಾನೇ ಮಾರಾಟ ಮಾಡುವುದಾಗಿ ಹೇಳಿದೆ. ಲಾಭ ಹಂಚಿಕೆಯನ್ನು ಸಹ ತಾನೇ ಮಾಡುವುದಾಗಿಯೂ ಹೇಳಿದೆ.
ರೈಲ್ವೆ ಟಿಕೆಟ್ ಮಾರಾಟ ಮಾಡುವ ಐಆರ್‌ಸಿಟಿಸಿ ಮಾದರಿಯಲ್ಲಿ ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಮಾರಾಟವನ್ನು ಸರ್ಕಾರವೇ ಮಾಡಲಿದ್ದು, ಈ ಜವಾಬ್ದಾರಿಯನ್ನು ಆಂಧ್ರ ಪ್ರದೇಶ ಫಿಲಂ ಡೆವೆಲೆಪ್‌ಮೆಂಟ್ ಕಾರ್ಪೊರೇಷನ್ (ಎಪಿಎಫ್‌ಡಿಸಿ)ಗೆ ವಹಿಸಿದೆ.

ಜನವರಿಯಿಂದ ಆದೇಶ ಜಾರಿ
ಜನವರಿಯಿಂದ ಈ ಆದೇಶವು ಜಾರಿಗೆ ಬರಲಿದ್ದು, ಆಂಧ್ರದ ಎಲ್ಲ ಚಿತ್ರಮಂದಿರಗಳ ಟಿಕೆಟ್‌ಗಳು ಸರ್ಕಾರದಿಂದ ಬಿಡುಗಡೆ ಮಾಡಲಾಗುವ ಅಪ್ಲಿಕೇಶನ್ ಮೂಲಕ ಮಾರಾಟವಾಗಲಿದೆ. ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸಿದರೂ ಸಹ ಟಿಕೆಟ್ ವಿತರಣೆಗೆ ಮೀಸಲಾಗಿರುವ ವಿಶೇಷ ಯಂತ್ರದ ಮೂಲಕವೇ ಟಿಕೆಟ್ ನೀಡಬೇಕಿದೆ ಚಿತ್ರಮಂದಿರದ ಸಿಬ್ಬಂದಿ, ಆ ಮೂಲಕ ಚಿತ್ರಮಂದಿರದಲ್ಲಿ ಎಷ್ಟು ಟಿಕೆಟ್ ಮಾರಾಟವಾಗಿದೆ ಎಂಬ ಲೆಕ್ಕಾಚಾರ ಸರ್ಕಾರಕ್ಕೆ ಸಿಗಲಿದೆ.

ಪಾರದರ್ಶಕತೆ ಕೊರತೆ ಇದೆ ಎಂದಿದ್ದ ಜಗನ್
ಚಿತ್ರಮಂದಿರ ಟಿಕೆಟ್ ಮಾರಾಟ ಮಾಡುವುದರಿಂದ ಚಿತ್ರಮಂದಿರಕ್ಕೆ ಎಷ್ಟು ಲಾಭವಾಗುತ್ತಿದೆ, ಸಿನಿಮಾ ನಿರ್ಮಾಪಕರಿಗೆ ಎಷ್ಟು ಲಾಭವಾಗುತ್ತಿದೆ ಎಂಬುದರ ಮೇಲೆ ಸರ್ಕಾರ ನಿಗಾ ಇಡಬಹುದಾಗಿದ್ದು, ಅದಕ್ಕೆ ತಕ್ಕಂತೆ ತೆರಿಗೆ ಪಾವತಿ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ನೋಡಬಹುದಾಗಿದೆ ಹಾಗಾಗಿ ಈ ವ್ಯವಸ್ಥೆಯನ್ನು ಜಗನ್ ಸರ್ಕಾರ ತಂದಿದೆ. ಈ ಹಿಂದೆ ಮಾತನಾಡಿದ್ದ ಸಿಎಂ ಜಗನ್, ಚಿತ್ರರಂಗದ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ ಹಾಗಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದಿದ್ದರು.

ಟಿಕೆಟ್ ದರ ಇಳಿಸಿದ್ದ ಆಂಧ್ರ ಸರ್ಕಾರ
ಟಿಕೆಟ್ ದರಗಳನ್ನು ಗಣನೀಯವಾಗಿ ಇಳಿಸಿ ರಾಜ್ಯ ಸರ್ಕಾರ ನೀಡಿದ್ದ ಆದೇಶದ ವಿರುದ್ಧವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಚಿತ್ರಮಂದಿರ ಮಾಲೀಕರಿಗೆ ಜಯವಾಗಿದೆ. ರಾಜ್ಯ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರವನ್ನು ನಿರ್ಧಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆದರೆ ಇದನ್ನು ಏಕಪಕ್ಷೀಯವಾದ ಆದೇಶ ಎಂದು ಕರೆದಿರುವ ರಾಜ್ಯ ಸರ್ಕಾರವು, ಹೈಕೋರ್ಟ್ ಆದೇಶದ ವಿರುದ್ಧ ಅಪೀಲು ಹೋಗಿದೆ. ರಾಜ್ಯ ಸರ್ಕಾರಕ್ಕೆ ಚಿತ್ರಮಂದಿರಗಳ ಟಿಕೆಟ್ ದರ ನಿರ್ಧರಿಸುವ ಹಕ್ಕಿದೆ ಎಂದು ವಾದಿಸುತ್ತಿದೆ. ಚಿತ್ರಮಂದಿರಗಳು ಅತಿಯಾದ ಟಿಕೆಟ್ ದರ ಏರುತ್ತಿದ್ದು, ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದೆ.

ಜಗನ್ ವಿರುದ್ಧ ಚಿತ್ರರಂಗದ ವಾಗ್ದಾಳಿ
ತೆಲುಗು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ಆರ್ಆರ್ಆರ್', 'ರಾಧೆ-ಶ್ಯಾಮ್', 'ಭೀಮ್ಲ ನಾಯಕ್', 'ಆಚಾರ್ಯ', 'ಸಲಾರ್', 'ಸರ್ಕಾರು ವಾರಿ ಪಾಟ' ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ತಯಾರಾಗಿದೆ. ಈಗ ಆಂಧ್ರ ಸರ್ಕಾರವು ನೀಡಿರುವ ಆದೇಶದಿಂದ ಸಿನಿಮಾಗಳ ಕಲೆಕ್ಷನ್ ಆಂಧ್ರದಲ್ಲಿ ಗಣನೀಯವಾಗಿ ತಗ್ಗಲಿದೆ ಹಾಗಾಗಿ ತೆಲುಗು ಚಿತ್ರರಂಗವು ಆಂಧ್ರ ಸರ್ಕಾರದ ಆದೇಶದ ವಿರುದ್ಧ ಅಸಮಾಧಾನ ಹೊರಹಾಕಿದೆ. ಪವನ್ ಕಲ್ಯಾಣ್ ಅಂತೂ 'ಕಷ್ಟಪಟ್ಟು ನಾವು ನಿರ್ಮಿಸಿದ ಸಿನಿಮಾಗಳನ್ನು ನೀವು ಹೇಗೆ ಮಾರಾಟ ಮಾಡುತ್ತೀರಿ'' ಎಂದು ಪ್ರಶ್ನೆ ಮಾಡಿದ್ದಾರೆ. ಜಗನ್ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದಾರೆ.


Click it and Unblock the Notifications











