ರಾಮ್ ಗೋಪಾಲ್ ವರ್ಮಾ ಮನೆ ಮುಂದೆ ಪೊಲೀಸರು; ಯಾವುದೇ ಕ್ಷಣದಲ್ಲಿ ಆರ್‌ಜಿವಿ ಬಂಧನ!
ವಿವಾದಾತ್ಮಕ ಹೇಳಿಕೆಗಳಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಪದೇ ಪದೆ ಸುದ್ದಿ ಆಗುತ್ತಾರೆ. ಇತ್ತೀಚೆಗೆ ಆರ್‌ಜಿವಿ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಬದಲಿಗೆ ಮಾಧ್ಯಮಗಳ ಮುಂದೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಕೆಣಕಿ ವರ್ಮಾ ವಿವಾದ ಸೃಷ್ಟಿಸುತ್ತಾರೆ. ಇದೀಗ ಪೊಲೀಸರು ಆರ್‌ಜಿವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹೌದು ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ನಿರ್ದೇಶನ ರಾಮ್‌ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲಾಗಿದೆ. ವಿಚಾರಣೆಗೆ ಪೊಲೀಸ್ ಠಾಣೆಗೆ ಬರುವಂತೆ ನೋಟಿಸ್ ಜಾರಿ ಆಗಿದೆ. ಎರಡು ಬಾರಿ ವಿಚಾರಣೆಗೆ ಬಾರದ ಕಾರಣಕ್ಕೆ ಈ ಬಾರಿ ಪೊಲೀಸರು ಆರ್‌ಜಿವಿ ಮನೆ ಮುಂದೆ ಹಾಜರಾಗಿದ್ದಾರೆ. ಸದ್ಯಕ್ಕೆ ಮನೆಯಲ್ಲಿ ವರ್ಮಾ ಇಲ್ಲ ಎನ್ನಲಾಗ್ತಿದೆ. ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಈ ಹಿಂದೆ ರಾಮ್‌ಗೋಪಾಲ್ ವರ್ಮಾ 'ವ್ಯೂಹಂ' ಎಂಬ ಸಿನಿಮಾ ಮಾಡಿದ್ದರು. ಆ ಚಿತ್ರದ ಪ್ರಚಾರದ ವೇಳೆ ಟಿಡಿಪಿ ಮುಖ್ಯಸ್ಥ ಸಿಎಂ ಚಂದ್ರಬಾಬು ನಾಯ್ಡು, ಅವರ ಪುತ್ರ ಲೋಕೇಶ್ ಹಾಗೂ ಜನಸೇನಾ ಪಕ್ಷಸ ಸ್ಥಾಪಕ ಪವನ್ ಕಲ್ಯಾಣ್ ಕುರಿತು ಆರ್‌ಜಿವಿ ಟೀಕಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಮಾರ್ಪಿಂಗ್ ಫೋಟೊಗಳನ್ನು ಹಾಕಿದ್ದರು. ಈ ಬಗ್ಗೆ ಒಂಗೋಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾದ ಬಳಿಕ ವಿಚಾರಣೆ ಬರುವಂತೆ ನೋಟಿಸ್ ನೀಡಲಾಗಿತ್ತು. ಪ್ರಕರಣ ರದ್ದು ಕೋರ ಆರ್‌ಜಿವಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಇದಕ್ಕೆ ನಿರಾಕರಿಸಿತ್ತು. ನಿಮ್ಮ ಬಂಧನವನ್ನು ತಡೆಯಲು ಸಾಧ್ಯವಿಲ್ಲ ಎಂದಿತ್ತು. ಇದೀಗ ಒಂಗೋಲು ಪೊಲೀಸರು ಹೈದರಾಬಾದ್‌ನಲ್ಲಿರುವ ಆರ್‌ಜಿವಿ ಕಛೇರಿ ಬಳಿ ಹಾಜರಾಗಿದ್ದರು. ಸದ್ಯಕ್ಕೆ ವರ್ಮಾ ಅಲ್ಲಿ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ರಾಮ್‌ಗೋಪಾಲ್ ವರ್ಮಾರನ್ನು ಬಂಧಿಸಿ ಒಂಗೋಲುಗೆ ಕರೆದೊಯ್ಯಲು ಆಂಧ್ರ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ತೆಲಂಗಾಣ ಪೊಲೀಸರ ಸಹಾಯವನ್ನು ಕೋರಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ವರ್ಮಾ ಬಂಧನವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಮತ್ತೊಂದು ಕಡೆ ತಮ್ಮ ವಿರುದ್ಧ ಕೇಸ್ ಅನ್ನು ವಜಾಗೊಳಿಸುವಂತೆ ವರ್ಮಾ ಸಲ್ಲಿಸಿರುವ ಅರ್ಜಿಯ ಬಗ್ಗೆ ಆಂಧ್ರ ಸರ್ಕಾರ ತನ್ನ ನಿಲುವನ್ನು ತಿಳಿಸಬೇಕು ಎಂದು ಹೈಕೋರ್ಟ್ ಕೇಳಿದೆ.
ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ವಿಚಾರಣೆಗೆ ಹಾಜರಾಗಲು ಗಡುವು ನೀಡುವಂತೆ ಹೈಕೋರ್ಟ್ ಕಳೆದ ವಾರ ಪೊಲೀಸರಿಗೆ ಸೂಚಿಸಿತ್ತು. ಕಾಲಾವಕಾಶ ಕೋರಿ ವರ್ಮಾ ಪರ ವಕೀಲರು ಪತ್ರ ಬರೆದಿದ್ದರು. ಬಳಿಕ ಮತ್ತೊಮ್ಮೆ ಪೊಲೀಸರು ನೋಟಿಸ್ ನೀಡಿದ್ದರು. ಆಗ ಕೂಡ ಆರ್‌ಜಿವಿ ಸ್ಪಂದಿಸಿರಲಿಲ್ಲ. ಅದೇ ಕಾರಣಕ್ಕೆ ಈಗ ಪೊಲೀಸರು ನಿರ್ದೇಶಕನ ಮನೆ ಮುಂದೆ ಜಮಾಯಿಸಿದ್ದಾರೆ ಎಂದು ವರದಿಯಾಗಿದೆ.
ತೆಲುಗಿನ ಖ್ಯಾತ ನಟನ ಫಾರ್ಮ್‌ಹೌಸ್‌ನಲ್ಲಿ ಸದ್ಯ ರಾಮ್‌ಗೋಪಾಲ್ ವರ್ಮಾ ತಲೆ ಮರೆಸಿಕೊಂಡಿದ್ದಾರೆ ಎಂದು ಗುಲ್ಲಾಗಿದೆ. ತಮ್ಮ ಮೊಬೈಲ್ ಫೋನ್ ಸ್ಚಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಮಾಡಿದ ಅವಹೇಳನಕಾರಿ ಪೋಸ್ಟರ್ ಭಾರೀ ಚರ್ಚೆಗೆ ಕಾರಣವಾಗಿದೆ. ವಿವಾದ ಸೃಷ್ಟಿಸಿ ಈ ಗ ಬಂಧನದ ಮಟ್ಟಕ್ಕೆ ಬಂದು ತಲುಪಿದೆ.


Click it and Unblock the Notifications











