ದಿಢೀರ್ ಖಾದಿ ಬಿಟ್ಟು ಕಾವಿ ತೊಟ್ಟ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ರಂಗೀನ್ ಲೋಕದಲ್ಲಿದ್ದ ಪವನ್ ಕಲ್ಯಾಣ್ ಇದೀಗ ಖಾದಿ ತೊಟ್ಟು ಜನಸೇವೆಗೆ ಮುಂದಾಗಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು ಉಪಮುಖ್ಯಮಂತ್ರಿಯಾಗಿ ಜನಸೇನಾನಿ ಅಧಿಕಾರ ಸ್ವೀಕರಿಸಿದ್ದಾರೆ. ಸದ್ಯ ದಿಢೀರ್ ಕಾವಿಧಾರಿಯಾಗಿ ಪವನ್ ದರ್ಶನ ಕೊಟ್ಟಿದ್ದಾರೆ.
ಸಹೋದರ ಚಿರಂಜೀವಿ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ಸ್ಟಾರ್ ಆಗಿ ಬೆಳೆದರು. ತಮ್ಮದೇ ವಿಭಿನ್ನ ಮ್ಯಾನರಿಸಂ, ನಟನೆಯಿಂದ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡರು. ಚಿರು ಪ್ರಜಾರಾಜ್ಯಂ ಪಕ್ಷ ಕಟ್ಟಿದಾಗಿ ಬೆನ್ನೆಲುಬಾಗಿ ನಿಂತರು. ಆದರೆ ಪ್ರಜಾರಾಜ್ಯಂ ಪಕ್ಷವನ್ನು ಮೆಗಾಸ್ಟಾರ್ ಕಾಂಗ್ರೆಸ್ ಜೊತೆ ವಿಲೀನ ಮಾಡಿದರು. ಬಳಿಕ ರಾಜಕೀಯ ಬಿಟ್ಟು ಚಿತ್ರರಂಗಕ್ಕೆ ವಾಪಸ್ ಬಂದರು.

ಪವನ್ ಕಲ್ಯಾಣ್ ಮಾತ್ರ ರಾಜಕೀಯರಂಗದಲ್ಲೇ ಏನಾದರೂ ಸಾಧಿಸಬೇಕು. ಜನಸೇವೆ ಮಾಡಬೇಕು ಎಂದು ಪಟ್ಟು ಹಿಡಿದು ಜನಸೇನಾ ಪಕ್ಷ ಸ್ಥಾಪಿಸಿದರು. 10 ವರ್ಷಗಳ ಬಳಿಕ ರಾಜಕೀಯರಂಗದಲ್ಲಿ ಯಶಸ್ಸು ಸಾಧಿಸಿದರು. 2019ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಪವರ್ ಸ್ಟಾರ್ ಕುಗ್ಗಲಿಲ್ಲ. ಮತ್ತೆ ಪಕ್ಷ ಸಂಘಟಿಸಿದರು. ವಾರಾಹಿ ವಾಹನ ಏರಿ ರಾಜ್ಯಾದ್ಯಂತ ಪ್ರರ್ಯಟನೆ ಮಾಡಿ ಪಕ್ಷವನ್ನು ಬಲಪಡಿಸಿದರು.
ಈ ಬಾರಿ ಆಂಧ್ರ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರು. ಅವರ ಲೆಕ್ಕಾಚಾರ ಸುಳ್ಳಾಗಲಿಲ್ಲ. ಸ್ಪರ್ಧಿಸಿದ 11 ವಿಧಾನಸಭೆ ಹಾಗೂ 2 ಲೋಕಸಭೆ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷ ಗೆದ್ದಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಪವನ್ ಬೆಂಬಲ ಸೂಚಿಸಿದ್ದಾರೆ. ಆಂಧ್ರ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಂತ್ರಿಯಾಗಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ವಿಶ್ವಾಸ ಗಳಿಸಿದ್ದಾರೆ. ಪವನ್ ಕಲ್ಯಾಣ್ ಬಿರುಗಾಳಿ ಎಂದು ಮೋದಿ ಕೊಂಡಾಡಿದ್ದರು.

ಸದ್ಯ ಪವನ್ ಕಲ್ಯಾಣ್ ಕಾವಿಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಜನಸೇನಾ ಪಕ್ಷದ ಶಾಸನಸಭೆಗೂ ಇದೇ ವೇಷದಲ್ಲಿ ಬಂದಿದ್ದಾರೆ. ಸದ್ಯ ಆ ಫೋಟೊಗಳು ವೈರಲ್ ಆಗುತ್ತಿದೆ. ಪವನ್ ಕಲ್ಯಾಣ್ 11 ದಿನಗಳ ಕಾಲ ವಾರಾಹಿ ತಾಯಿ ದೀಕ್ಷೆ ತೆಗೆದುಕೊಂಡಿದ್ದಾರೆ. ಹಾಗಾಗಿ ಕಾವಿ ಧರಿಸಿದ್ದಾರೆ ಎಂದು ಪಕ್ಷದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿ ಹಣ್ಣುಹಂಪಲು, ದ್ರವಾಹಾರವನ್ನು ಮಾತ್ರ ಸ್ವೀಕರಿಸುತ್ತಾರೆ. ವರ್ಷದ ಹಿಂದೆ ವಾರಾಹಿ ವಿಜಯಯಾತ್ರೆ ಹೆಸರಿನಲ್ಲಿ ಜನಸೇನಾನಿ ವಾರಾಹಿ ವಾಹನ ಏರಿ ಜನರ ಬಳಿಗೆ ಹೋಗಿದ್ದರು. ಆಗ ಕೂಡ ವಾರಾಹಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಪುರಾಣಗಳ ಪ್ರಕಾರ, ದುರ್ಗಾ ದೇವಿಯ ಏಳು ಪ್ರತಿರೂಪಗಳಾಗಿ ಸಪ್ತ ಮಾತೃಕೆಯರು ಇರುತ್ತಾರೆ . ಏಳು ಮಾತೃಕೆಯರಲ್ಲಿ ಒಬ್ಬರು ವಾರಾಹಿ. ಅಂಧಕಾಸುರ, ರಕ್ತಬೀಜಾಸುರ, ಶಂಭುನಿಶಂಭು ಸೇರಿದಂತೆ ಹಲವು ರಾಕ್ಷಸರನ್ನು ಕೊಂದಿದ್ದರಲ್ಲಿ ವಾರಾಹಿ ದೇವಿಯ ಉಲ್ಲೇಖವಿದೆ. ತಾಯಿ ರೂಪವು ಎಂಟು ತೋಳುಗಳಿಂದ ವರಾಹ ಮುಖವನ್ನು ಹೊಂದಿದೆ. ಆಕೆಯ ಕೈಯಲ್ಲಿ ಪಾಶ, ನೇಗಿಲು ಮತ್ತು ಶಂಖ, ಚಕ್ರಗಳಂತಹ ಆಯುಧಗಳನ್ನು ಹಿಡಿದಿದ್ದಾಳೆ. ಕುದುರೆ, ಹಾವು, ನೇಗಿಲು ಮತ್ತು ಸಿಂಹ ಇವುಗಳನ್ನು ಪುರಾಣಗಳಲ್ಲಿ ದೇವಿಯ ವಾಹನಗಳೆಂದು ಹೇಳಲಾಗುತ್ತದೆ.


Click it and Unblock the Notifications











