ಮತ್ತೆ ಮಲ್ಟಿಸ್ಟಾರರ್; 'ಮನ ಶಂಕರವರಪ್ರಸಾದ್‌ಗಾರು' ಬಳಿಕ ಹೊಸ ಸಿನಿಮಾ ಘೋಷಿಸಿದ ಅನಿಲ್ ರಾವಿಪುಡಿ
ತೆಲುಗಿನಲ್ಲಿ ರಾಜಮೌಳಿ ಬಿಟ್ಟರೆ 100% ಸಕ್ಸಸ್ ರೇಟ್ ಹೊಂದಿರುವ ನಿರ್ದೇಶಕ ಅನಿಲ್ ರಾವಿಪುಡಿ. 'ಮನ ಶಂಕರವರಪ್ರಸಾದ್‌ಗಾರು' ಮೂಲಕ ಈ ವರ್ಷ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟು ಗಮನ ಸೆಳೆದಿದ್ದಾರೆ. ಮೂರ್ನಾಲ್ಕು ವರ್ಷಗಳಿದ ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾಗಳು ಗೆದ್ದಿದ್ದವು. ಮುಂದಿನ ಸುಗ್ಗಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ವೆಂಕಟೇಶ್, ಬಾಲಕೃಷ್ಣ, ಚಿರಂಜೀವಿ ಹೀಗೆ ತೆಲುಗಿನ ಟಾಪ್ ಸೀನಿಯರ್ ನಟರಿಗೆ ಅನಿಲ್ ರಾವಿಪುಡಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಈ ಲಿಸ್ಟ್‌ನಲ್ಲಿ ಮಿಸ್ ಆಗಿದ್ದು ನಾಗಾರ್ಜುನ ಮಾತ್ರ. ಹಾಗಾಗಿ ಈ ಬಾರಿ ನಾಗ್ ಜೊತೆ ಅನಿಲ್ ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಅದು ಈಗ ಸುಳ್ಳಾಗಿದೆ. ಹೊಸ ಸಿನಿಮಾ ಘೋಷಣೆಯಾಗಿದೆ.

ಮೊದಲು 100 ಕೋಟಿ ರೂ. ಕಲೆಕ್ಷನ್ ಕೊಟ್ಟ ಹೀರೊ ವೆಂಕಟೇಶ್ ಹಾಗೂ ಮೊದಲ ಸಿನಿಮಾ ಮಾಡಲು ಅವಕಾಶ ಕೊಟ್ಟ ನಂದಮೂರಿ ಕಲ್ಯಾಣ್ ರಾಮ್ ಜೊತೆ 2027ರ ಮೊದಲ ಹಬ್ಬಕ್ಕೆ ನಿಮ್ಮ ಮಂದೆ ಬರ್ತಿದ್ದಿನಿ ಎಂದು ಅನಿಲ್ ರಾವಿಪುಡಿ ಟ್ವೀಟ್ ಮಾಡಿದ್ದಾರೆ. ಸಿಂಪಲ್ ಫ್ಯಾಮಿಲಿ ಕಥೆಗಳನ್ನು ಕಟ್ಟಿಕೊಟ್ಟು ಅನಿಲ್ ಗೆಲ್ಲುತ್ತಾ ಬರ್ತಿದ್ದಾರೆ. ಅದೇ ರೀತಿ ಈ ಬಾರಿ ಕೂಡ ಮತ್ತೊಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ.
'ಮನ ಶಂಕರವರಪ್ರಸಾದ್‌ಗಾರು' ಹಿಟ್ ಬಳಿಕ ಚಿರಂಜೀವಿ ಕಾಂಬಿನೇಷನ್‌ನಲ್ಲೇ ಅನಿಲ್ ಮತ್ತೊಂದು ಸಿನಿಮಾ ಮಾಡುತ್ತಾರೆ ಎಂದು ಗುಲ್ಲಾಗಿತ್ತು. ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ದೇಶಕನಿಗೆ ಚಿರು ದುಬಾರಿ ರೇಂಜ್ ರೋವರ್ ಕಾರ್ ಗಿಫ್ಟ್ ಕೊಟ್ಟಿದ್ದರು. ಹಾಗಾಗಿ ಮತ್ತೆ ಸಿನಿಮಾ ಮಾಡ್ತಾರೆ ಎಂದು ಚರ್ಚೆ ನಡೆದಿತ್ತು. ಮುಂದಿನ ದಿನಗಳಲ್ಲಿ ಅಂತಾದೊಂದು ಸಾಧ್ಯತೆ ಕಂಡಿತ ಇದೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ.
2015ರಲ್ಲಿ 'ಪಟಾಸ್' ಎಂಬ ಸಿನಿಮಾ ಮೂಲಕ ಅನಿಲ್ ರಾವಿಪುಡಿ ಸ್ವತಂತ್ರ ನಿರ್ದೇಶಕರಾಗಿದ್ದರು. ಬಳಿಕ 'ಸುಪ್ರೀಂ', 'ರಾಜಾ ದಿ ಗ್ರೇಟ್', 'F2: ಫನ್ ಅಂಡ್ ಫಸ್ಟ್ರೇಷನ್' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡ್ತಾ ಬಂದರು. 'F2: ಫನ್ ಅಂಡ್ ಫಸ್ಟ್ರೇಷನ್' ಜೊತೆ ವೆಂಕಟೇಶ್ ಜೊತೆ ಕಾಂಬಿನೇಷನ್ ಶುರುವಾಗಿತ್ತು. ಬಳಿಕ 'F3' ಚಿತ್ರದಲ್ಲಿ ಜೋಡಿ ಮತ್ತೆ ಕಮಾಲ್ ಮಾಡಿತ್ತು.
ಬಾಲಕೃಷ್ಣ ಹಾಗೂ ಶ್ರೀಲೀಲಾ ನಟನೆಯ 'ಭಗವಂತ್ ಕೇಸರಿ' ಚಿತ್ರಕ್ಕೂ ಅನಿಲ್ ಆಕ್ಷನ್ ಕಟ್ ಹೇಳಿದ್ದರು. ಕಾಮಿಡಿ ಅನಿಲ್ ಸಿನಿಮಾಗಳ ಪ್ಲಸ್ ಪಾಯಿಂಟ್. ಆಕ್ಷನ್, ಫ್ಯಾಮಿಲಿ ಎಮೋಷನ್ ಜೊತೆಗೆ ಕಾಮಿಡಿ ಸೇರಿಸಿ ಸಿನಿಮಾ ಮಾಡಿ ಗೆಲ್ಲುತ್ತಿದ್ದಾರೆ. ಕಳೆದ ವರ್ಷ 'ಸಂಕ್ರಾಂತಿಕಿ ವಸ್ತುನ್ನಾಂ' ಎಂಬ ಸಿನಿಮಾ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದರು. ಈ ವಾರ 'ಮನ ಶಂಕರವರಪ್ರಸಾದ್‌ಗಾರು' ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಚಿರಂಜೀವಿ ಜೊತೆ ವೆಂಕಟೇಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಅನಿಲ್ ರಾವಿಪುಡಿ ನಿರ್ದೇಶನದ 'ಭಗವಂತ್ ಕೇಸರಿ' ಚಿತ್ರವನ್ನು ತಮಿಳಿನಲ್ಲಿ 'ಜನ ನಾಯಗನ್' ಹೆಸರಿನಲ್ಲಿ ದಳಪತಿ ವಿಜಯ್ ರೀಮೆಕ್ ಮಾಡಿದ್ದಾರೆ. ತಮಿಳಿನಲ್ಲಿ ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿದ್ರು ಅನಿಲ್ ಒಪ್ಪಿರಲಿಲ್ಲ. ಇನ್ನು 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರ ಕೂಡ ಹಿಂದಿಗೆ ರೀಮೆಕ್ ಆಗುತ್ತಿದೆ. ಬಾಲಿವುಡ್ ನಿರ್ಮಾಪಕರು ಕೂಡ ಸಿನಿಮಾ ಮಾಡುವಂತೆ ಅನಿಲ್ ಹಿಂದೆ ಬಿದ್ದಿದ್ದಾರೆ. ಆದರೆ ಆ ಅವಕಾಶಗಳನ್ನೆಲ್ಲಾ ಬಿಟ್ಟು ತನಗೆ ಮೊದಲು ಅವಕಾಶ ಕೊಟ್ಟಿದ್ದ ನಟನಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.


Click it and Unblock the Notifications











