"ದಕ್ಷಿಣದಲ್ಲಿ ಒಳ್ಳೆ ಅವಕಾಶ ಸಿಗ್ಲಿಲ್ಲ.. ಅದ್ಕೆ ಚಿತ್ರರಂಗ ಬಿಟ್ಟೆ": ಟೈಪ್‌ಕಾಸ್ಟ್ ಬಗ್ಗೆ ಮೌನ ಮುರಿದ ಮಧೂ
ಕ್ರೇಜಿಸ್ಟಾರ್ ರವಿಚಂದ್ರನ್ ಪರಭಾಷೆಯ ಸಾಕಷ್ಟು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರಲ್ಲಿ 'ಅನ್ನಯ್ಯ' ಚಿತ್ರದ ಮಧೂ ಕೂಡ ಒಬ್ಬರು. ಮಣಿರತ್ನಂ ನಿರ್ದೇಶನದ 'ರೋಜಾ' ಸಿನಿಮಾ ಆಕೆಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. 'ಅಳಗನ್' ಎನ್ನುವ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮಧೂ ಮುಂದೆ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದರು.
ಏಳೆಂಟು ವರ್ಷಗಳ ಹಿಂದೆ ಸುದೀಪ್ ನಟನೆಯ 'ರನ್ನ' ಚಿತ್ರದಲ್ಲಿ ಪೋಷಕ ನಟಿಯಾಗಿ ಮಧೂ ಮಿಂಚಿದರು. ಸದ್ಯ ಸಮಂತಾ ನಟನೆಯ 'ಶಾಕುಂತಲಂ' ಚಿತ್ರದಲ್ಲೂ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಚಿತ್ರರಂಗದಲ್ಲಿರುವ ಲಿಂಗಭೇದ ವಿಚಾರವಾಗಿ ಮಾತನಾಡಿದ್ದಾರೆ. ಕರಿಯರ್ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕರಿಯರ್ ಮುಗಿಯುವ ಸಮಯದಲ್ಲಿ ನನಗೆ ಸರಿಯಾದ ಅವಕಾಶಗಳು ಸಿಗಲಿಲ್ಲ ಎಂದಿದ್ದಾರೆ.

ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮದುವೆ ನಂತರ ಕೂಡ ಸಿನಿಮಾಗಳಲ್ಲಿ ನಟಿಸುತ್ತಾ ಆ ಪರಿಸ್ಥಿತಿಯನ್ನು ಬದಲಿಸಿದ್ದಾರೆ ಎಂದು ಹೇಳಿದ್ದಾರೆ. ಟೈಪ್‌ಕಾಸ್ಟ್ ಕುರಿತು ಮಾತನಾಡಿರುವ ಮಧೂ "ನಾನು ನಾಯಕಿ ಪಾತ್ರಗಳಲ್ಲೇ ಹೆಚ್ಚು ನಟಿಸಿದೆ. ಹಾಗಾಗಿ ಆ ಸಮಯದಲ್ಲಿ ಹೀರೊಯಿನ್ಸ್ ಎಲ್ಲರನ್ನು ಟೈಪ್‌ಕಾಸ್ಟ್ ಮಾಡಿದರು. ನಮಗೆ ಒಂದಷ್ಟು ಅದ್ಭುತ ಹಾಡುಗಳಿವೆ. ಡ್ಯಾನ್ಸ್ ಕೂಡ ಮಾಡಿದ್ದೇವೆ. ಅದರಲ್ಲಿ ರೊಮ್ಯಾಂಟಿಕ್ ಸನ್ನಿವೇಶಗಳು ಇವೆ."
"ಹಲವು ಭಾಷೆಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದೇನೆ. ಅದರ ಬಗ್ಗೆ ನನಗೆ ಯಾವುದೇ ಆರೋಪ ಇಲ್ಲ" ಎಂದಿದ್ದಾರೆ. ಕೆಲವೇ ಪಾತ್ರಗಳಿಗೆ ನಮ್ಮನ್ನು ಸೀಮಿತ ಮಾಡಿಬಿಟ್ಟರು. ಆ ಸಮಯದಲ್ಲಿ ನಾಯಕಿ ಅಂದರೆ ಸಾಂಗ್ಸ್‌ನಲ್ಲಿ ಡ್ಯಾನ್ಸ್ ಮಾಡೋದು, ನಾಯಕನ ಜೊತೆ ರೊಮ್ಯಾನ್ಸ್ ಮಾಡೋದು ಅಷ್ಟೇ ಎನ್ನುವಂತೆ ಮಾಡಿಬಿಟ್ಟರು ಎಂದು ಪರೋಕ್ಷವಾಗಿ ಹೇಳಿದ್ದಾರೆ.

"ನನಗೆ ಇಷ್ಟವಾಗದ ಪಾತ್ರಗಳ ಸಿಗದ ಕಾರಣ ನಾನು ಚಿತ್ರರಂಗದಿಂದ ದೂರಾದೆ. ಆದರೆ ಅದೇ ಸಮಯದಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ. ಆದರೆ ಸರಿಯಾದ ಪಾತ್ರಗಳು ಸಿಗಲಿಲ್ಲ. ಅದು ಸಾಧ್ಯವಾಗಲಿಲ್ಲ ಎಂದು ಮಧೂ ಹೇಳಿದ್ದಾರೆ.
ಇನ್ನು ಸೂಪರ್ ಹಿಟ್ 'ರೋಜಾ' ಸಿನಿಮಾದಲ್ಲಿ ನಟಿಸಿದ್ದರ ಬಗ್ಗೆ "ನಾನು ಹೆಚ್ಚು ಆಕ್ಷನ್ ಹೀರೊಗಳ ಸಿನಿಮಾಗಳಲ್ಲಿ ನಟಿಸಿದೆ. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡೆ. 'ಯೋಧ', 'ರೋಜಾ'ದಂತಹ ಸಿನಿಮಾಗಳನ್ನು ಮಾಡಿದ್ದೇನೆ. ದಕ್ಷಿಣದಲ್ಲೂ ಅಂತಹ ಅವಕಾಶಗಳು ಬರಬೇಕು ಎಂದುಕೊಂಡೆ. ಆದರೆ ಅದು ಸಿಗಲಿಲ್ಲ. ಆ ನಂತರ ನಾನು ಮದುವೆಯಾಗುವ ನಿರ್ಧಾರ ಮಾಡಿದೆ. ಇದರಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ" ಎಂದಿದ್ದಾರೆ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ನಟಿ ಮಧೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಮೊದಲ ಹೆಸರು ಪದ್ಮಮಾಲಿನಿ. ಚಿತ್ರರಂಗಕ್ಕೆ ಬಂದಮೇಲೆ ಮಧೂ ಆಗಿ ಬದಲಿಸಿಕೊಂಡರು. ಮಧುಬಾಲ ಎಂದು ಕೂಡ ಆಕೆಯನ್ನು ಕರೆಯುತ್ತಾರೆ. ಕನ್ನಡದಲ್ಲಿ 'ಅನ್ನಯ್ಯ' ನಂತರ 'ರನ್ನ', 'ನಾನು ಮತ್ತು ವರಲಕ್ಷ್ಮಿ', 'ಸೀತಾರಾಮ ಕಲ್ಯಾಣ', 'ಪ್ರೀಮಿಯರ್ ಪದ್ಮಿಣಿ', 'ರೇಮೋ' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರನ್ನ' ಚಿತ್ರದಲ್ಲಿ ಸುದೀಪ್ ಸೋದರತ್ತೆ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.
ಸದ್ಯ ಗುಣಶೇಖರ್ ನಿರ್ದೇಶನದ ಪೌರಾಣಿಕ ಕಥಾಹಂದರದ 'ಶಾಕುಂತಲಂ' ಚಿತ್ರದಲ್ಲಿ ಮಧೂ ಬಣ್ಣ ಹಚ್ಚಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಚಿತ್ರದಲ್ಲಿ ಮೇನಕಾ ಆಗಿ ಮಧು ನಟಿಸುತ್ತಿರುವುದು ವಿಶೇಷ. ಈ ವಾರ ಆ ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications











