ಅನುಷ್ಕಾ ಶೆಟ್ಟಿಗೆ ಕೈ ಕೊಟ್ಟಿದೆಯಾ ಅದೃಷ್ಟ..?
'ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಅನುಷ್ಕಾ ಶೆಟ್ಟಿ. ಹೌದು, ಅನುಷ್ಕಾ ಶೆಟ್ಟಿ ಪಕ್ಕದ ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡತಿ. ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹಲವಾರು ಚಿತ್ರ ಮತ್ತು ವೈವಿಧ್ಯಮಯ..
ಪಾತ್ರವನ್ನು ಮಾಡಿರುವ ಅನುಷ್ಕಾ ಹಿಂದೊಮ್ಮೆ ಟಾಲಿವುಡ್‌ನ ಮಹಾರಾಣಿಯಾಗಿ ಮೆರೆದವರು. ನಿರ್ಮಾಪಕರ ಕಣ್ಣಿಗೆ ಚಿನ್ನದ ಗಣಿಯಂತೆ ಕಂಡವರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅನುಷ್ಕಾಗೆ ನಸೀಬು ಕೈ ಕೊಟ್ಟಂತೆ ಇದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ.. ಅನುಷ್ಕಾ ಅಭಿನಯದ ಚಿತ್ರ ತೆರೆಗೆ ಬಂದು ಎರಡು ವರ್ಷಗಳಾಗಿವೆ. ಇದಿಷ್ಟೇ ಅಲ್ಲ ಕೈಯಲ್ಲಿರುವ .. ಚಿತ್ರೀಕರಣ ಮುಕ್ತಾಯಗೊಂಡಿರುವ ಚಿತ್ರವನ್ನಾದರು ಬಿಡುಗಡೆ ಮಾಡೋಣ ಎಂದರೆ ಅದಕ್ಕೂ ಕೂಡ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲಿವೆ.
ಹೌದು, ಅಸಲಿಗೆ.. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಇದೇ ಜುಲೈ ಹನ್ನೊಂದರಂದು ಅನುಷ್ಕಾ ಅಭಿನಯದ ಘಾಟಿ ಚಿತ್ರ ಬಿಡುಗಡೆಯಾಗಬೇಕಿತ್ತು. ಬಿಡುಗಡೆಯ ತಯಾರಿಗಳನ್ನು ಕೂಡ ನಿರ್ಮಾಣ ಸಂಸ್ಥೆ ಮಾಡಿಕೊಂಡಿತ್ತು. ಅನುಷ್ಕಾ ಅವರ ಭಕ್ತಗಣ ಕೂಡ ಚಿತ್ರವನ್ನು ನೋಡಲು ಕಾತುರದಿಂದ ಕಾದು ಕುಳಿತಿತ್ತು.
ಆದರೆ ದುರಾದೃಷ್ಟವಶಾತ್ .. ಬಿಡುಗಡೆಯ ದಿನ ಹತ್ತಿರ ಬಂದರೂ ಕೂಡ ಚಿತ್ರದ ಕೆಲಸಗಳು ಇನ್ನು ಮುಗಿದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ವಿಎಫ್‌ಎಕ್ಸ್‌ನ ಹಲವು ಕೆಲಸ ಬಾಕಿ ಉಳಿದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮತ್ತೆ ಮುಂದೂಡಲಾಗಿದ್ದು, ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಚಿತ್ರದ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಪ್ರಕಟಣೆ ಹೊರಡಿಸಿದೆ. ಅನುಷ್ಕಾ ಅವರ ಅಭಿಮಾನಿಗಳಲ್ಲಿ.. ಕಲಾಪ್ರಿಯರಲ್ಲಿ.. ನಿರ್ಮಾಣ ಸಂಸ್ಥೆ ಕ್ಷಮೆಯನ್ನು ಕೋರಿದ್ದು ನಮಗೆ ಇನ್ನೂ ಸಮಯ ಬೇಕಿದೆ ಎಂದು ಹೇಳಿದೆ. ಅಭಿಮಾನಿಗಳ ತಾಳ್ಮೆಗೆ ಧನ್ಯವಾದವನ್ನು ಹೇಳಿದೆ.
ಸಿನಿಮಾ ಎನ್ನುವುದು ನದಿಯಂತೆ, ಕೆಲ ಒಮ್ಮೆ ಅದು ಹರಿಯುತ್ತಲಿರುತ್ತೆ ಎಂದು ಹೇಳಿರುವ ನಿರ್ಮಾಣ ಸಂಸ್ಥೆ ಘಾಟಿ ಕೇವಲ ಚಿತ್ರ ಅಲ್ಲ ಅದೊಂದು ಪರ್ವತದ ಪ್ರತಿಧ್ವನಿ.. ಕಲ್ಲು.. ಮಣ್ಣಿನಿಂದ ಕೆತ್ತಲಾದ ಕಥೆ.. ಈ ಹಿನ್ನೆಲೆ ಚಿತ್ರದ ಬಿಡುಗಡೆಗೆ ಇನ್ನು ಕೆಲ ಕಾಲ ಸಮಯದ ಅವಶ್ಯಕತೆ ಇದೆ ಎಂದು ಹೇಳಿದೆ. ಈ ಕಾಯುವಿಕೆಯ ಫಲ ಇನ್ನೂ ಸಿಹಿಯಾಗಿರುತ್ತೆ ಎನ್ನುವ ಭರವಸೆಯನ್ನು ಕೂಡ ನೀಡಿದೆ.

ನಿರ್ಮಾಣ ಸಂಸ್ಥೆಯ ಈ ನಿರ್ಧಾರದಿಂದ ಸಹಜವಾಗಿ ಅನುಷ್ಕಾ ಶೆಟ್ಟಿ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಯಾಕೆಂದರೆ.. ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅಂದರೆ ಏಪ್ರಿಲ್ 18ರಂದೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಆಗಲೂ ಕೂಡ ಕಾರಣಗಳನ್ನು ಹೇಳಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಮತ್ತೊಮ್ಮೆ ಮುಂದೂಡಲಾಗಿದೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಘಾಟಿ ಚಿತ್ರದ ನಾನ್ ಥಿಯೇಟರಿಕಲ್ ಹಕ್ಕುಗಳು ಅಂದರೆ ಚಿತ್ರದ ಓಟಿಟಿ, ಸ್ಯಾಟಲೈಟ್ ಹಕ್ಕು ಮತ್ತು ಆಡಿಯೋ ಹಕ್ಕು ಈ ಮೂರು ಹಕ್ಕಗಳು 36 ಕೋಟಿಗೆ ಬಿಕರಿಯಾಗಿವೆ. ಮಹಿಳಾ ಪ್ರಧಾನ ಚಿತ್ರದ ಹಕ್ಕುಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು ಎಂದು 'ಡೆಕ್ಕನ್ ಕ್ರೋನಿಕಲ್' ವರದಿಯನ್ನು ಮಾಡಿತ್ತು.
ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳನ್ನು ನಿರ್ಮಾಪಕರು 12 ಕೋಟಿಗೆ ಮಾರಿದ್ದಾರೆ ಎಂದು ಕೂಡ 'ಡೆಕ್ಕನ್ ಕ್ರೋನಿಕಲ್' ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಈ ವಿಚಾರ ತಿಳಿದು ಅನುಷ್ಕಾ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರು. ಆದರೆ ಈಗ ಈ ಸಂಭ್ರಮಕ್ಕೆ ಚಿತ್ರದ ನಿರ್ಮಾಣ ಸಂಸ್ಥೆಯೇ ಬ್ರೇಕ್ ಹಾಕಿದೆ.
Team #GHAATI pic.twitter.com/UhUtWuMR6g
— UV Creations (@UV_Creations) July 5, 2025


Click it and Unblock the Notifications











