ರಾಮಲಕ್ಷ್ಮಿ ಪಾತ್ರಕ್ಕೆ ಅನುಪಮಾ ಆಡಿಷನ್: ಚೆನ್ನಾಗಿ ನಟಿಸಿದ್ರು ಸುಕುಮಾರ್ ರಿಜೆಕ್ಟ್ ಮಾಡಿದ್ದೇಕೆ?
ರಾಮ್‌ಚರಣ್ ಹಾಗೂ ಸಮಂತಾ ನಟನೆಯ 'ರಂಗಸ್ಥಳಂ' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಆದರೆ ಈ ಚಿತ್ರದಲ್ಲಿ ರಾಮಲಕ್ಷ್ಮಿ ಪಾತ್ರದಲ್ಲಿ ಅನುಪಮಾ ಪರಮೇಶ್ವರನ್ ನಟಿಸಬೇಕಿತ್ತು. ಈ ವಿಚಾರವನ್ನು ಸ್ವತಃ ನಿರ್ದೇಶಕ ಸುಕುಮಾರ್ ಬಿಚ್ಚಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಕೆಲವೊಮ್ಮೆ ಆಕಸ್ಮಿಕವಾಗಿ ಅವಕಾಶಗಳು ಸಿಗೋದು, ಮತ್ತೆ ಕೆಲವೊಮ್ಮೆ ಸಿಕ್ಕ ಅವಕಾಶ ಕೈಜಾರುವುದು ಸರ್ವೇಸಾಮಾನ್ಯ. ಮಲಯಾಳಂ ಚೆಲುವೆ ಅನುಪಮಾ ಪರಮೇಶ್ವರನ್‌ಗೂ ಇಂತಹ ಅನುಭವ ಆಗಿತ್ತು. 2018ರ ಸೂಪರ್ ಹಿಟ್ 'ರಂಗಸ್ಥಳಂ' ಚಿತ್ರದಲ್ಲಿ ನಟಿಸೋ ಲಕ್ಕಿ ಛಾನ್ಸ್ ಮಿಸ್ ಆಗಿತ್ತು. ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು. ನಂತರ ಆ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಚಿಟ್ಟಿ ಬಾಬು - ರಾಮಲಕ್ಷ್ಮಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
ನಿರ್ದೇಶಕರ ಸುಕುಮಾರ್ ಕಥೆ ಬರೆದು ನಿರ್ಮಾಣ ಮಾಡಿರುವ ಸಿನಿಮಾ '18 ಪೇಜಸ್'. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ಬಣ್ಣ ಹಚ್ಚಿದ್ದಾರೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ 'ರಂಗಸ್ಥಳಂ' ಬಗ್ಗೆ ಸುಕುಮಾರ್ ಮಾತನಾಡಿದ್ದಾರೆ.

ಅನುಪಮಾಗೆ ಸುಕ್ಕು ಬಹುಪರಾಕ್
'ರಂಗಸ್ಥಳಂ' ಚಿತ್ರದಲ್ಲಿ ಸಮಂತಾ ಲಂಗಾ ದಾವಣಿಯಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ದರು. ಇದೇ ಪಾತ್ರಕ್ಕೆ ಅನುಪಮಾ ಸೂಟ್ ಆಗುತ್ತಾರೆ ಎಂದು ಸುಕುಮಾರ್ ಅಂದುಕೊಂಡಿದ್ದರಂತೆ. "ಆಕೆ ಒಳ್ಳೆ ನಟಿ, ನೋಡಲು ಸುಂದರವಾಗಿದ್ದಾರೆ. ತೆಲುಗು ಕೂಡ ಮಾತನಾಡುತ್ತಾರೆ. ಇದು ಆಕೆಗೆ ಇರುವ ಮತ್ತೊಂದು ಒಳ್ಳೆ ಕ್ವಾಲಿಟಿ. ಅನುಪಮಾ ರಂಗಸ್ಥಳಂ ಚಿತ್ರದಲ್ಲೂ ನಟಿಸಬೇಕಿತ್ತು" ಎಂದಿದ್ದಾರೆ.

ಅನುಪಮಾ ರಿಜೆಕ್ಟ್ ಆಗಿದ್ದೇಕೆ?
"ಚಿತ್ರದ ಆಡಿಷನ್‌ಗೆ ಅನುಪಮಾ ಬಂದಿದ್ದರು. ಚೆನ್ನಾಗಿ ನಟಿಸಿ ತೋರಿಸಿದ್ದರು. ಆದರೆ ಏನೇ ಕೇಳಿದರೂ ಅವರ ಅಮ್ಮನ ಮುಖ ನೋಡುತ್ತಿದ್ದರು. ವಯಸ್ಸಿನಲ್ಲಿ ಚಿಕ ಹುಡುಗಿ. ಹಾಗಾಗಿ ಸಂದೇಹ ಬಂದು ಆಕೆಯನ್ನು ರಿಜೆಕ್ಟ್ ಮಾಡಿದ್ದೆ. ಅನುಪಮಾ ಆ ಚಿತ್ರದಲ್ಲಿ ನಟಿಸಿದ್ದರೆ ಚೆನ್ನಾಗಿತ್ತು. ಮುಂದಿನ ದಿನಗಳಲ್ಲಿ ಖಂಡಿತ ಆಕೆಯ ಜೊತೆ ಸಿನಿಮಾ ಮಾಡುತ್ತೇನೆ" ಎಂದು ಸುಕುಮಾರ್ ವಿವರಿಸಿದ್ದಾರೆ.

ಹಳ್ಳಿ ತುಂಟ ಹುಡ್ಗಿಯಾಗಿ ಸ್ಯಾಮ್
ಅನುಪಮಾಗೆ ಆತ್ಮವಿಶ್ವಾಸ ಕಮ್ಮಿ ಇತ್ತು. ಹಾಗಾಗಿ ಆಕೆಯನ್ನು 'ರಂಗಸ್ಥಳಂ' ಚಿತ್ರದಿಂದ ಕೈಬಿಟ್ಟಿದ್ದಾಗಿ ಸುಕುಮಾರ್ ಪರೋಕ್ಷವಾಗಿ ಹೇಳಿದ್ದಾರೆ. ಅನುಭವಿ ನಟಿ ಸಮಂತಾ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಸ್ಯಾಮ್ ಕರಿಯರ್‌ನಲ್ಲಿ ಇದು ಒಳ್ಳೆ ಸಿನಿಮಾ ಎನಿಸಿಕೊಂಡಿದ್ದು ಸುಳ್ಳಲ್ಲ. ಹಳ್ಳಿಯ ತುಂಟ ಹುಡುಗಿ ರಾಮಲಕ್ಷ್ಮಿಯಾಗಿ ಚಿಟ್ಟಿಬಾಬುನ ಕಾಡಿದ್ದರು.

ಈ ವಾರ '18 ಪೇಜಸ್' ರಿಲೀಸ್
'ರಂಗಸ್ಥಳಂ' ಚಿತ್ರದಲ್ಲಿ ಅನುಪಮಾ ನಟಿಸಿದ್ದರೆ ಒಳ್ಳೆ ಬ್ರೇಕ್ ಸಿಗುತ್ತಿತ್ತು. ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳು ಅರಸಿ ಬರುತ್ತಿತ್ತು. ಒಳ್ಳೆ ಅವಕಾಶವನ್ನು ಕೈಯಾರ ಹಾಳು ಮಾಡಿಕೊಂಡಂತೆ ಕಾಣ್ತಿದೆ. ಇನ್ನು 'ಪುಷ್ಪ- 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಸುಕುಮಾರ್ ಮತ್ತೊಂದು ಕಡೆ '18 ಪೇಜಸ್' ಚಿತ್ರ ರಿಲೀಸ್ ಮಾಡುತ್ತಿದ್ದಾರೆ.


Click it and Unblock the Notifications











