ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ; ಅಭಿಮಾನಿಗಳಿಗೆ ನಿರಾಸೆ
ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರ ತೆರೆಗೆ ಬಂದಿದೆ. ಪ್ರಚಾರಕ್ಕಾಗಿ ಸ್ವೀಟಿ ಕ್ಯಾಮರಾ ಮುಂದೆ ಬರಲಿದೆ. ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಗೊಂದಲ ತಂದಿದೆ. ಅನುಷ್ಕಾಗೆ ಏನಾಯ್ತು? ಅಜ್ಞಾತದಲ್ಲಿರೋದ್ಯಾಕೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ.
ವಯಸ್ಸು 40 ದಾಟಿದ್ರು ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಯೋಚಿಸಿದಂತೆ ಕಾಣ್ತಿಲ್ಲ. ಈ ಹಿಂದೆ ಕೂಡ ಆಕೆಯ ಮದುವೆ ಬಗ್ಗೆ ಸಾಕಷ್ಟು ಊಹಾಪೋಹ, ವದಂತಿಗಳು ಹರಿದಾಡಿತ್ತು. ಪ್ರಭಾಸ್ ಸೇರಿ ಕೆಲವರ ಜೊತೆಗೆ ಹೆಸರು ತಳಕು ಹಾಕಿಕೊಂಡಿತ್ತು. ಆದರೆ ಯಾವುದೇ ನಿಜವಾಗಲಿಲ್ಲ. 'ಬಾಹುಬಲಿ' ಸರಣಿ ಸಿನಿಮಾಗಳ ಬಳಿಕ ದೇಹದ ತೂಕ ಹೆಚ್ಚಾಗಿ ಸ್ವೀಟಿ ನಟಿಸೋದು ಕಮ್ಮಿ ಮಾಡಿದ್ದರು. ಆಗೊಂದು ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಸದ್ಯ ಕಥನಾರ್ ಎಂಬ ಮಲಯಾಳಂ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. 'ಘಾಟಿ' ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಚಿತ್ರದ ಪ್ರಚಾರಕ್ಕಾಗಿ ಫೋನ್ ಕಾಲ್ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ನಟ ರಾಣಾ ದಗ್ಗುಬಾಟಿ ಜೊತೆ ಫೋನ್ ಕಾಲ್‌ನಲ್ಲಿ ಮಾತನಾಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆಯೂ ಚರ್ಚೆ ಆಗಿದೆ. ನನ್ನ ಮದುವೆ ಸದ್ಯಕ್ಕಿಲ್ಲ ಎಂದು ಕರಾವಳಿ ಚೆಲುವೆ ಹೇಳಿದ್ದಾರೆ.
ರಾಣಾ ಮಾತನಾಡಿ ಯಾಕೆ ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ತಿಲ್ಲ. ಸಿನಿಮಾ ಪ್ರಚಾರಕ್ಕೂ ಬಂದಿಲ್ಲ. ಫೋನ್‌ನಲ್ಲಿ ಸಿನಿಮಾ ಬಗ್ಗೆ ಮಾತನಾಡುವಂತಾಗಿದೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಅನುಷ್ಕಾ ಶೆಟ್ಟಿ ಎಲ್ಲೇ ಹೋದರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ನಾನು ಬರೀ ಸಿನಿಮಾ ಪ್ರಚಾರ ಮಾತ್ರವಲ್ಲ, ಯಾವುದೇ ಸಭೆ ಸಮಾರಂಭಗಳಿಗೆ ಹೋಗುತ್ತಿಲ್ಲ ಎಂದು ಸ್ವೀಟಿ ಶೆಟ್ಟಿ ಹೇಳಿದ್ದಾರೆ.

ಮುಂದಿನ ವರ್ಷ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತೀನಿ. ಕ್ಯಾಮರಾ ಮುಂದೆ ಬಂದು ಮಾತನಾಡುತ್ತೀನಿ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. "ಎಲ್ಲಾ ಕಡೆ ಇದೇ ಪ್ರಶ್ನೆ ಎದುರಾಗುತ್ತಿದೆ. ಯಾಕೆ ಎಲ್ಲಿಗೂ ಬರಲ್ಲ ಎಂದು ಕೇಳುತ್ತಿದ್ದಾರೆ. ಊರಲ್ಲಿ ಮದುವೆ ಸಮಾರಂಭ ನಡೆದರೂ ಅನುಷ್ಕಾ ಯಾಕೆ ಬರ್ತಿಲ್ಲ ಎಂದು ಕೇಳ್ತಾರೆ" ಎಂದು ಆಕೆ ಹೇಳಿದ್ದಾರೆ. ಏನು ನಿನ್ನ ಮದುವೆನಾ? ಎಂದು ರಾಣಾ ಮರುಪ್ರಶ್ನೆ ಹಾಕಿದ್ದಾರೆ.
"ಅಯ್ಯೋ ನನ್ನ ಮದುವೆ ಅಲ್ಲ. ನಮ್ಮ ಮನೆಯಲ್ಲಿ ಮದುವೆ. ನಾನು ಪದೇ ಪದೆ ಹೇಳ್ತಿದ್ದೀನಿ, ನನ್ನ ಮದುವೆ ಅಲ್ಲ, ನಮ್ಮ ಮನೆಯಲ್ಲಿ ಮದುವೆ ಅಷ್ಟೆ. ಸದ್ಯಕ್ಕೆ ನನ್ನ ಮದುವೆ ಇಲ್ಲ" ಎಂದು ಅನುಷ್ಕಾ ಶೆಟ್ಟಿ ಹೇಳಿ ನಕ್ಕಿದ್ದಾರೆ. ಸ್ವೀಟಿ ಶೀಘ್ರದಲ್ಲೇ ಮದುವೆ ಆಗ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಆಕೆಯ ಹೇಳಿಕೆಯಿಂದ ನಿರಾಸೆಯಾಗಿದೆ.
ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಮೊದಲಿಗೆ ಯೋಗ ಟೀಚರ್ ಆಗಿದ್ದರು. ಬಳಿಕ 'ಸೂಪರ್' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಕೆಲ ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದ್ದರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಒಂದ್ಕಾಲದಲ್ಲಿ ಗ್ಲಾಮರಸ್ ರೋಲ್‌ಗಳಲ್ಲಿ ಮಿಂಚಿ ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ ಬಳಿಕ ಡೀ-ಗ್ಲಾಮರಸ್ ರೋಲ್‌ಗಳಲ್ಲಿ ನಟಿಸೋಕೆ ಆರಂಭಿಸಿದರು.
'ಅರುಂಧತಿ', 'ಭಾಗಮತಿ', 'ಬಾಹುಬಲಿ' ರೀತಿಯ ಸಿನಿಮಾಗಳು ಸ್ವೀಟಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅದ್ಯಾಕೋ ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಇವತ್ತಿಗೂ ಆಕೆಯನ್ನು ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬರಲು ಕೆಲ ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ.


Click it and Unblock the Notifications











