ಮೊದಲ ಬಾರಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ ಅನುಷ್ಕಾ ಶೆಟ್ಟಿ!?
ತೆಲುಗು ಸಿನಿರಂಗದ ಬಹುಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ಮೆಗಾಸ್ಟಾರ್ ಚಿರಂಜೀವಿ ಜೊತೆ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ದೊಡ್ಡ ಸ್ಟಾರ್‌ಗಳು ಇದುವರೆಗೂ ಒಟ್ಟಿಗೆ ಒಂದು ಪೂರ್ತಿ ಸಿನಿಮಾದಲ್ಲಿ ಜೊತೆಯಾಗಿಲ್ಲ ಎಂಬುದು ಗಮನಿಸಬೇಕು.
ಇಬ್ಬರು ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಯ ನಡುವೆಯೇ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ತೆಲುಗು ಸಿನಿಮಾ ಪ್ರೇಮಿಗಳೂ ಕೂಡ ಇಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಕಾತುರರಾಗಿದ್ದಾರೆ. ಸತತ ಸೋಲುಗಳನ್ನು ಕಾಣುತ್ತಿರುವ ಚಿರಂಜೀವಿ ಅವರ ಮುಂಬರುವ ದೊಡ್ಡ ಬಜೆಟ್ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ನಟಿಸಲು ಅನುಷ್ಕಾ ಶೆಟ್ಟಿ ಅವರನ್ನು ಕೇಳಲಾಗಿದೆ ಎಂದು ಊಹಪೋಹಗಳು ಹರಿದಾಡುತ್ತಿವೆ.

ಅನುಷ್ಕಾ ಶೆಟ್ಟಿ ಮತ್ತು ಚಿರಂಜೀವಿ ಸಿನಿಮಾ
ವದಂತಿಗಳ ಪ್ರಕಾರ ಮೆಗಾಸ್ಟಾರ್ ಚಿರಂಜೀವಿ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಮುಂಬರುವ ಚಿತ್ರಕ್ಕೆ ಬಿಂಬಿಸಾರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮಲ್ಲಿಡಿ ವಸಿಷ್ಟ ನಿರ್ದೇಶಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಮಲ್ಲಿಡಿ ವಸಿಷ್ಟ ಮತ್ತು ಮೆಗಾ 157 ರ ತಯಾರಕರು ಮೆಗಾಸ್ಟಾರ್‌ಗೆ ನಾಯಕಿಯ ಹುಡುಕಾಟದಲ್ಲಿದ್ದರು. ಕೊನೆಗೆ ಅನುಷ್ಕಾ ಶೆಟ್ಟಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಈಗಾಗಲೇ ನಟಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಜೊತೆಗೆ ಒಂದು ಸಿನಿಮಾಗೆ ಶಕ್ತಿಯಾಗಿ ಒಬ್ಬರೇ ನಿಲ್ಲಬಲ್ಲರು ಎಂಬುದನ್ಉ ಸಾಬೀತುಪಡಿಸಿದ್ದಾರೆ. ಅರುಂಧತಿಯಾಗಿ ಅವರನ್ನು ಬಿಟ್ಟು ಬೇರೆ ಯಾರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲದಂತಹ ನಟನೆ ನೀಡಿದ್ದಾರೆ. ಹೀಗಿರುವಾಗ ಚಿರಂಜೀವಿ ಅವರ ಜೊತೆಗೆ ಅನುಷ್ಕಾ ಜುಗಲ್‌ಬಂಧಿ ನೋಡಲು ಸಿನಿಪ್ರೇಮಿಗಳು ಆಸಕ್ತರಾಗಿದ್ದಾರೆ.
ಇನ್ನು ಚಿರಂಜೀವಿ ಅವರಿಗೆ ನಾಯಕಿಯಾಗಿ ತ್ರಿಶಾ ಕೃಷ್ಣನ್ ಮತ್ತು ಸೋನಾಕ್ಷಿ ಸಿನ್ಹಾ ಅವರನ್ನು ಕೂಡ ಆಯ್ಕೆ ಮಾಡಲಾಗಿತ್ತು. ಆದರೆ ಆ ಪಾತ್ರವನ್ನು ಅನುಷ್ಕಾ ಶೆಟ್ಟಿ ಪಡೆದುಕೊಂಡಿದ್ದಾರೆ ಎಂದು ವರಂತಿಗಳು ಹರಡಿವೆ. ಇನ್ನು, ನಟಿ ತ್ರಿಶಾ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ದಳಪತಿ ವಿಜಯ್, ರಜನಿಕಾಂತ್, ಅಜಿತ್ ಕುಮಾರ್ ಮತ್ತು ಕಮಲ್ ಹಾಸನ್ ಸೇರಿದಂತೆ ದೊಡ್ಡ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿಯಿದೆ.

ಚಿರಂಜೀವಿ - ಅನುಷ್ಕಾ ಶೆಟ್ಟಿ ಅವರ ಹಿಂದಿನ ಸಿನಿಮಾಗಳು
ಅನುಷ್ಕಾ ಶೆಟ್ಟಿ ಈವರೆಗೆ ಒಂದು ಚಿತ್ರದಲ್ಲಿಯೂ ಚಿರಂಜೀವಿಯೊಂದಿಗೆ ಜೋಡಿಯಾಗಿಲ್ಲ. ಆದರೆ ಇಬ್ಬರು ನಟಿಸಬಾರದು ಎಂದುಕೊಂಡಿರಲಿಲ್ಲ. ಅವಕಾಶವಿರಲಿಲ್ಲ ಅಷ್ಟೇ. ಈ ಹಿಂದೆ ಚಿರಂಜೀವಿಯವರ 2006 ರಲ್ಲಿ ಬಿಡುಗಡೆಯಾದ ಸ್ಟಾಲಿನ್ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ನಾಯಕಿಯಾಗಿದ್ದರು.
ಇನ್ನು 2018 ರಲ್ಲಿ, ಅನುಷ್ಕಾ ಐತಿಹಾಸಿಕ ಚಿತ್ರ ಸೈರಾ ನರಸಿಂಹ ರೆಡ್ಡಿಯಲ್ಲಿ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು, ಸಿನಿಮಾದಲ್ಲಿ ರಾಣಿ ಲಕ್ಷ್ಮಿ ಬಾಯಿ ಪಾತ್ರವನ್ನು ನಿರ್ವಹಿಸಿದ್ದರು. ವರದಿಗಳ ಪ್ರಕಾರ, ಮೆಗಾ 157 ಅನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ಇದೇ ಸಂಸ್ಥೆ ಅನುಷ್ಕಾ ಅವರ ಇತ್ತೀಚೆಗೆ ಬಿಡುಗಡೆಯಾದ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾವನ್ನು ಬೆಂಬಲಿಸಿತ್ತು.
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಸದ್ಯ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಅನುಷ್ಕಾ ಜೊತೆಗೆ ನವೀನ್ ಪೋಲಿಶೆಟ್ಟಿ ನಟಿಸಿರುವ ಈ ಚಿತ್ರವು ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾವನ್ನು ಎಸ್ಎಸ್ ರಾಜಮೌಳಿ, ಮೆಗಾಸ್ಟಾರ್ ಚಿರಂಜೀವಿ, ಸಮಂತಾ ರುತ್ ಪ್ರಭು, ರಾಮ್ ಚರಣ್ ಮತ್ತು ರವಿತೇಜ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಶ್ಲಾಘಿಸಿದ್ದಾರೆ.


Click it and Unblock the Notifications











