ಮುಖ ತೋರಿಸೋಕೆ ಅನುಷ್ಕಾ ಶೆಟ್ಟಿ ಹಿಂದೇಟು; ಆಕೆಗಿರುವ ಆರೋಗ್ಯ ಸಮಸ್ಯೆ ಏನು?
ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಬಹಳ ದಿನಗಳ ಬಳಿಕ ಸ್ವೀಟಿ ನಟಿಸಿರುವ ಸಿನಿಮಾ ಇದು. ಕರ್ನಾಟಕದಲ್ಲಿ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರಕ್ಕೆ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ 'ಘಾಟಿ' ಸಿನಿಮಾ ನಿರ್ಮಾಣವಾಗಿದೆ. ಈ ಹಿಂದೆ ಸ್ವೀಟಿ ನಟನೆಯ 'ವೇದಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಕ್ರಿಶ್ 'ಘಾಟಿ' ಚಿತ್ರದ ಸಾರಥ್ಯ ವಹಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಚಿತ್ರದಲ್ಲಿ ಗಾಂಜಾ ಸ್ಮಗ್ಲಿಂಗ್ ಮಾಡುವ ಸಮುದಾಯದ ಕಥೆಯನ್ನು ಹೇಳಲಾಗುತ್ತಿದೆ. ಸ್ವೀಟಿಗೆ ಬಹಳ ಪವರ್‌ಫುಲ್ ಪಾತ್ರವೇ ಸಿಕ್ಕಿದೆ.

ಅನುಷ್ಕಾ ಶೆಟ್ಟಿ ಗಾಂಜಾ ಸರಬರಾಜು ಮಾಡುವ ಮಹಿಳೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮತ್ತೊಂದು ವಿಭಿನ್ನ ಶೇಡ್ ಪಾತ್ರದಲ್ಲಿ ಮಿಂಚಿದ್ದಾರೆ. ನಾಗವೇಲಿ ವಿದ್ಯಾಸಾಗರ್ ಸಂಗೀತ 'ಘಾಟಿ' ಚಿತ್ರಕ್ಕಿದೆ. 'ಘಾಟಿ' ಜೊತೆಗೆ ಮಲಯಾಳಂನ 'ಕಥನಾರ್' ಎಂಬ ಚಿತ್ರದಲ್ಲಿ ಕೂಡ ಆಕೆ ನಟಿಸಿದ್ದಾರೆ. ಸ್ವೀಟಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಊಹಾಪೋಹ ಇದೀಗ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ.
ಯಾವುದೇ ಚಿತ್ರಕ್ಕೆ ಆಗಲಿ ಪ್ರಚಾರ ಬಹಳ ಮುಖ್ಯ. ಇತ್ತೀಚೆಗೆ ಸಿನಿಮಾ ಪ್ರಚಾರಕ್ಕಾಗಿ ಫಿಲ್ಮ್ ಮೇಕರ್ಸ್ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಸ್ಟಾರ್ ನಟ, ನಟಿಯರೇ ಸಂದರ್ಶನಗಳಲ್ಲಿ ಭಾಗಿ ಆಗಿ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರೀ-ರಿಲಿಸ್ ಈವೆಂಟ್‌ಗಳು ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿನ್, ಬೆಂಗಳೂರಿಗೆ ಟೂರ್ ಮಾಡಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಆದರೆ 'ಘಾಟಿ' ಸಿನಿಮಾ ಪ್ರಚಾರದಲ್ಲಿ ಅನುಷ್ಕಾ ಶೆಟ್ಟಿ ಅನುಪಸ್ಥಿತಿ ಎದ್ದು ಕಾಣುತ್ತಿದೆ.

ಚಿತ್ರದಲ್ಲಿ ನಟ ವಿಕ್ರಂ ಪ್ರಭು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ ಅವರು ಭಾಗಿ ಆಗಿದ್ದರು. ಆದರೆ ಅನುಷ್ಕಾ ಶೆಟ್ಟಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಂತ ಚಿತ್ರತಂಡದ ಜೊತೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಎಫ್‌ಎಂ ಹಾಗೂ ದಿನಪತ್ರಿಕೆಗಳಿಗೆ ಫೋನ್ ಮೂಲಕ ಸಂದರ್ಶನ ನೀಡುತ್ತಿದ್ದಾರೆ. ಕ್ಯಾಮರಾ ಮುಂದೆ ಮಾತ್ರ ಬರುತ್ತಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸ್ವೀಟಿ ಯಾಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅನುಮಾನಗೊಂಡಿದ್ದಾರೆ.
'ಬಾಹುಬಲಿ'-2 ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾಗಳನ್ನು ಮಾಡುವ ವೇಗ ತಗ್ಗಿಸಿದ್ದರು. ಕಳೆದ 8 ವರ್ಷಗಳಲ್ಲಿ ಆಕೆ 3 ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ. ಎರಡು ವರ್ಷಗಳ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಪ್ರಚಾರಕ್ಕೂ ಸ್ವೀಟಿ ಕ್ಯಾಮರಾ ಮುಂದೆ ಬಂದಿರಲಿಲ್ಲ. ಸಿನಿಮಾ ಪ್ರಚಾರ ಮಾತ್ರವಲ್ಲ ಆಪ್ತರನ್ನು ಕೂಡ ಆಕೆ ಹೆಚ್ಚು ಭೇಟಿ ಮಾಡುತ್ತಿಲ್ಲ. ಸದ್ಯ 'ಘಾಟಿ' ಚಿತ್ರಕ್ಕಾಗಿ ಫೋನ್ ಕಾಲ್ ಸಂದರ್ಶನಗಳನ್ನು ಅನುಷ್ಕಾ ಕೊಟ್ಟಿದ್ದಾರೆ.
'ಘಾಟಿ' ಸಿನಿಮಾ ಬಗ್ಗೆ ಫೋನ್ ಕಾಲ್ ಮೂಲಕ ಅನುಷ್ಕಾ ಶೆಟ್ಟಿ ಅವರನ್ನು ನಟ ರಾಣಾ ದಗ್ಗುಬಾಟಿ ಮಾತನಾಡಿಸಿದ್ದಾರೆ. ಅದೇ ರೀತಿ 4 ಮಂದಿ ಪತ್ರಕರ್ತರ ಜೊತೆಗೂ ಫೋನ್ ಕಾಲ್ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಸ್ವೀಟಿ ಚರ್ಚಿಸಿದ್ದಾರೆ. ಈ ವೇಳೆ ಕೂಡ ಯಾಕೆ ಮುಖ ತೋರಿಸುತ್ತಿಲ್ಲ, ಸಿನಿಮಾ ಪ್ರಚಾರಕ್ಕೆ ಕ್ಯಾಮರಾ ಮುಂದೆ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಸ್ವೀಟಿಗೆ ಎದುರಾಗಿದೆ.
"ನಾನು ಫೋನ್ ಕಾಲ್ ಮೂಲಕ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ನನ್ನ ವೈಯಕ್ತಿಕ ಆಯ್ಕೆ. ಬರೀ ಸಿನಿಮಾ ಪ್ರಮೋಷನ್ ಮಾತ್ರ ಅಂತ ಅಲ್ಲ, ಯಾವುದೇ ಸಭೆ, ಸಮಾರಂಭ ಅಥವಾ ಫ್ಯಾಮಿಲಿ ಫಂಕ್ಷನ್‌ಗಳಿಗೂ ಹೋಗ್ತಿಲ್ಲ. ನಾನು ಬ್ರೇಕ್ ತಗೊಂಡಿದ್ದೆ. ಬಳಿಕ ಹುಷಾರಿರಲಿಲ್ಲ. ಬಳಿಕ 'ಘಾಟಿ' ಹಾಗೂ 'ಕಥನಾರ್' ಚಿತ್ರಗಳಲ್ಲಿ ನಟಿಸಿದೆ. ಶೀಘ್ರದಲ್ಲೇ ಮತ್ತೊಂದು ಸಿನಿಮಾ ಶುರುವಾಗಲಿದೆ. ಮುಂದಿನ ದಿನಗಳಲ್ಲಿ ಕಂಡಿತ ಕ್ಯಾಮರಾ ಮುಂದೆ ಬರ್ತೀನಿ. ಸಾಕಷ್ಟು ಮಾತಾಡ್ತೀನಿ" ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.
ನಟ ರಾಣಾ ದಗ್ಗುಬಾಟಿ ಕೂಡ ಇದೇ ಪ್ರಶ್ನೆ ಕೇಳಿದ್ದಾರೆ. ನನ್ನನ್ನು ಕೂಡ ಇತ್ತೀಚೆಗೆ ಭೇಟಿ ಮಾಡ್ತಿಲ್ಲ ಯಾಕೆ ಎಂದಿದ್ದಾರೆ. ಅನುಷ್ಆ ಶೆಟ್ಟಿ ಪ್ರತಿಕ್ರಿಯಿಸಿ "ಎಲ್ಲರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಆದಷ್ಟು ಬೇಗ ಬರ್ತೀನಿ. ಮಾತನಾಡುತ್ತೇನೆ" ಎಂದು ಸ್ವೀಟಿ ಹೇಳಿದ್ದಾರೆ. ಅನುಷ್ಕಾ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನಿಸುತ್ತೆ, ಅದಕ್ಕೆ ಕ್ಯಾಮರಾ ಮುಂದೆ ಬರುತ್ತಿಲ್ಲ, ಆದರೆ ಯಾರು ಆತಂಕಪಡುವ ಅಗತ್ಯ ಇಲ್ಲ, ಶೀಘ್ರದಲ್ಲೇ ಮತ್ತೆ ಕ್ಯಾಮರಾ ಮುಂದೆ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.


Click it and Unblock the Notifications











