Anushka Shetty: ತಮ್ಮದೇ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್‌ನಲ್ಲಿ ಅನುಷ್ಕಾ? ಶೀಘ್ರದಲ್ಲೇ ಸಿನಿಮಾ ಘೋಷಣೆ
ಅರುಂಧತಿ, ದೇವಸೇನಾ, ಭಾಗಮತಿ ರೀತಿಯ ಪವರ್‌ಫುಲ್ ಪಾತ್ರಗಳಿಂದ ನಟಿ ಅನುಷ್ಕಾ ಶೆಟ್ಟಿ ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ. ಇನ್ನು ತಮ್ಮ ಬೋಲ್ಡ್ ಅಭಿನಯದಿಂದಲೂ ಕರಾವಳಿ ಚೆಲುವೆ ಅಭಿಮಾನಿಗಳ ಮನಗೆದ್ದಿದ್ದಾರೆ. ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದು ಇದೆ. ಆದರೆ ಇತ್ತೀಚೆಗೆ ಅನುಷ್ಕಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ.
'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಅನುಷ್ಕಾ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದರು. ಆದರೆ ಮತ್ತೆ ತೂಕ ಇಳಿಸಿಕೊಂಡು ಮೊದಲಿನ ಪಿಜಿಕ್ ಮರಳಿ ಪಡೆಯೋಕೆ ಸಾಧ್ಯವಾಗಲೇ ಇಲ್ಲ. ಹಾಗಾಗಿ ನಿಧಾನವಾಗಿ ಸಿನಿಮಾಗಳಿಂದ ದೂರಾಗಿದ್ದರು. ಇತ್ತೀಚೆಗೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸಿ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದರು. ಒಂದು ಸೆನ್ಸಿಟೀವ್ ಸಬ್ಜೆಕ್ಟ್‌ನಲ್ಲಿ ಮಾಸ್ಟರ್ ಶೆಫ್ ಆಗಿ ಸ್ವೀಟಿ ಕಾಣಿಸಿಕೊಂಡಿದ್ದರು. ನವೀನ್ ಪೊಲಿಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ಮಿಂಚಿದ್ದರು.

ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಇನ್ನು ಸ್ವೀಟಿ ಕೈಯಲ್ಲಿ ಸದ್ಯ ಯಾವುದೇ ಸಿನಿಮಾ ಇಲ್ಲ. ಬೇಕಂತಲೇ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾಗಿ ಇತ್ತೀಚೆಗೆ ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದರು. ಸದ್ಯ ಸ್ವೀಟಿ ಸಿನಿಮಾಗಳ ಸಂಖ್ಯೆ ಹಾಫ್ ಸೆಂಚುರಿ ಗಡಿಯಲ್ಲಿದೆ. ತಮ್ಮದೇ ಸಿನಿಮಾ ಸೀಕ್ವೆಲ್ ಮೂಲಕ 50 ಸಿನಿಮಾಗಳನ್ನು ಪೂರೈಸಲು ಆಕೆ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.
ಸ್ವೀಟಿ ನಟನೆಯ ಆ ಸೂಪರ್ ಹಿಟ್ ಸಿನಿಮಾ ಯಾವುದು? ಆಕೆಯ ಯಾವ ಸಿನಿಮಾ ಸೀಕ್ವೆಲ್ ಮಾಡಬಹುದು? ಎನ್ನುವ ಕುತೂಹಲ ಮೂಡುವುದು ಸಹಜ. ಅದಕ್ಕೆ ಉತ್ತರ 'ಭಾಗಮತಿ'. ಹೌದು 5 ವರ್ಷಗಳ ಹಿಂದೆ ತೆರೆಕಂಡಿದ್ದ ಈ ಥ್ರಿಲ್ಲರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಚಂಚಲ ಎನ್ನುವ ಐಎಎಸ್ ಅಧಿಕಾರಿ ಪಾತ್ರದಲ್ಲಿ ಸ್ವೀಟಿ ಶೆಟ್ಟಿ ಮಿಂಚಿದ್ದರು. 'ಭಾಗಮತಿ'ಯಾಗಿ ಮತ್ತೊಂದು ಶೇಡ್‌ನಲ್ಲಿ ಅಬ್ಬರಿಸಿದ್ದರು. ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲೈಮ್ಯಾಕ್ಸ್ ಟ್ವಿಸ್ಟ್ ಮಜವಾಗಿತ್ತು. ಎಸ್. ತಮನೆ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು.
ಕೆಲವೊಮ್ಮೆ ಹಾರರ್ ಥ್ರಿಲ್ಲರ್ ಎನಿಸಿದ್ದ 'ಭಾಗಮತಿ' ಸಿನಿಮಾ ಸಿನಿರಸಿಕರ ಮನಗೆದ್ದಿತ್ತು. ಕೆಲವೊಮ್ಮೆ ಚಂಚಲ ವಿಲನ್ ಎಂದು ಭಾಸವಾಗುವಂತೆ ತೋರಿಸಿ ಒಂದಷ್ಟು ಟ್ವಿಸ್ಟ್‌ಗಳೊಂದಿಗೆ ಬೊಂಬಾಟ್ ಆಗಿ ಎಂಡ್ ಕಾರ್ಡ್ ಹಾಕಲಾಗಿತ್ತು. ಈ ಸಿನಿಮಾ ನೋಡಿದಾಗಲೇ 'ಭಾಗಮತಿ' ಪಾತ್ರದ ಸುತ್ತಾ ಮತ್ತೊಂದು ಸಿನಿಮಾ ಮಾಡಬಹುದು ಎಂದು ಕೆಲವರಿಗೆ ಅನ್ನಿಸಿತ್ತು. ಇದೀಗ ಈ ಸಿನಿಮಾ ಸೀಕ್ವೆಲ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಜಿ. ಅಶೋಕ್ ನಿರ್ದೇಶನದ 'ಭಾಗಮತಿ' ಚಿತ್ರವನ್ನು ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸಿತ್ತು. ಯುವಿ ಒಂದು ರೀತಿಯಲ್ಲಿ ಅನುಷ್ಕಾ ಶೆಟ್ಟಿ ಹೋಮ್ ಬ್ಯಾನರ್ ಇದ್ದಂತೆ. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಕೂಡ ಇದೇ ಬ್ಯಾನರ್‌ನಲ್ಲಿ ಬಂದಿತ್ತು. ಇದೀಗ 'ಭಾಗಮತಿ'-2 ವಿಚಾರ ಚರ್ಚೆಗೆ ಬಂದಿದೆ. ಸ್ವೀಟಿ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಘೋಷಣೆ ಆಗುತ್ತಾ? ಎನ್ನುವ ಕುತೂಹಲ ಕೆಲವರಲ್ಲಿದೆ.
ಮತ್ತೊಂದು ಕಡೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಕೂಡ ಚರ್ಚೆ ನಡೆಯುತ್ತಲೇ ಇದೆ. ವಯಸ್ಸು 40 ದಾಟಿದರೂ ಸ್ವೀಟಿ ಯಾಕೆ ಇನ್ನು ಮಾದುವೆ ಆಗಿಲ್ಲ ಎಂದು ಕೆಲವರು ಕೇಳುತ್ತಲೇ ಇದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಪ್ಲ್ಯಾನ್ಸ್ ಏನಾದರೂ ಇದ್ಯಾ? ಎನ್ನುವ ಪ್ರಶ್ನೆಗೆ "ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ" ಎಂದು ಹೇಳಿದ್ದರು.


Click it and Unblock the Notifications











