ರಾಮ್‌ಚರಣ್ ಬಳಿ ಇರುವ ನಾಯಿಮರಿ ಬೇಕು; ಕೆಲವೇ ಗಂಟೆಯಲ್ಲಿ ಅಭಿಮಾನಿ ಆಸೆ ಈಡೇರಿಸಿದ ಪವನ್ ಕಲ್ಯಾಣ್
ಸ್ಟಾರ್ ನಟರಿಗೆ ಸಾಕಷ್ಟು ಜನ ಅಭಿಮಾನಿಗಳಿರುತ್ತಾರೆ. ನೆಚ್ಚಿನ ನಟನನ್ನು ಜೀವನದಲ್ಲಿ ಒಮ್ಮೆ ಭೇಟಿ ಮಾಡಬೇಕು, ಮಾತನಾಡಬೇಕು ಎಂದು ಕಾಯುವವರಿಗೆ ಲೆಕ್ಕವಿಲ್ಲ. ಸ್ಟಾರ್ಸ್ ಕೂಡ ಅಭಿಮಾನಿಗಳ ಮೇಲಿನ ತಮ್ಮ ಪ್ರೀತಿ ಕಾಳಜಿಯನ್ನು ಆಗಾಗ್ಗೆ ಬಹಿರಂಗಪಡಿಸುತ್ತಾರೆ. ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ತಮ್ಮ ವೀರಾಭಿಮಾನಿಯ ಮಹದಾಸೆಯನ್ನು ಈಡೇರಿಸಿದ್ದಾರೆ. ಪವನ್ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತೆಲಂಗಾಣದ ಹನಮಕೊಂಡದ ಜಿಲ್ಲೆಯ ಹನುಮಾನ್ ನಗರದ ನಿವಾಸಿ 17 ವರ್ಷದ ನಿರಂಜನ್ ಮಾರಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ ಈತ. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಎನ್ನುವ ಆಸೆಯನ್ನು ನಿರಂಜನ್ ವ್ಯಕ್ತಪಡಿಸುತ್ತಿದ್ದರು. ಈ ವಿಷಯ ತಿಳಿದು ಪವನ್ ಆತನ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಕಳೆದರು. ನಿರಂಜನ್ ಪಕ್ಕ ಕೂತು ಮಾತನಾಡಿದರು. ಈ ವೇಳೆ ನಿರಂಜನ್ ನನಗೆ ಒಂದು ನಾಯಿ ಮರಿ ಬೇಕು ಎಂದು ಕೇಳಿದ್ದು ಕೆಲವೇ ಗಂಟೆಗಳಲ್ಲಿ ಆತನ ಆಸೆಯನ್ನು ಪವನ್ ಈಡೇರಿಸಿದ್ದಾರೆ.

ಮುಕ್ಕಾಲು ಗಂಟೆ ಕಾಲ ಅಭಿಮಾನಿ ನಿರಂಜನ್ ಮನೆಯಲ್ಲಿ ಪವನ್ ಕಲ್ಯಾಣ್ ಇದ್ದರು. ಆತನ ಆರೋಗ್ಯಸ್ಥಿತಿ, ವೈಯಕ್ತಿಕ ಜೀವನ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ ನನಗೆ ಪೂಡಲ್ ತಳಿಯ ನಾಯಿಮರಿ ಬೇಕು, ರಾಮ್‌ಚರಣ್ ಅವರ ಬಳಿ ಇದೆ ಅಲ್ವಾ, ಅಂತಹ ನಾಯಿ ಮರಿ ಎಂದು ನಿರಂಜನ್ ಕೇಳಿದ್ದಾರೆ. ಸರಿ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ಮಾತು ಕೊಟ್ಟಿದ್ದರು. ಸಂಜೆ ವೇಳೆಗೆ ನಿರಂಜನ್‌ಗೆ ಅಚ್ಚರಿ ಕಾದಿತ್ತು. ಜನಸೇನಾ ಪಕ್ಷದ ನಾಯಕರು ಆತನ ಮನೆಗೆ ನಾಯಿ ಮರಿಯನ್ನು ತಲುಪಿಸಿದ್ದಾರೆ. ಇದನ್ನು ನೋಡಿದ ನಿರಂಜನ್ ಸಂತಸ ಹೇಳತೀರದು. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗ್ತಿದೆ.
ನಿರಂಜನ್ ಜೊತೆಗಿನ ಸಂಭಾಷಣೆ ವೇಳೆ ನಾಯಿಮರಿ ಬಗ್ಗೆಯೇ ಹೆಚ್ಚು ಚರ್ಚೆ ನಡೀತು. ಮೊಬೈಲ್‌ನಲ್ಲಿ ಫೋಟೊ ತೋರಿಸಿ ರಾಮ್‌ಚರಣ್ ಬಳಿ ಇರುವ ಪೂಡಿಲ್ ತಳಿ ನಾಯಿಮರಿ ಬೇಕು ಎಂದು ನಿರಂಜನ್ ಹೇಳಿದ್ರು. ಈ ಸಮಯದಲ್ಲಿ ಮನೆಯಲ್ಲಿ ನಾಯಿಮರಿ ಸಾಕಬಹುದಾ? ಅದರಿಂದ ನಿರಂಜನ್ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅಲ್ಲವೇ ಎಂದು ಕೇಳಿ ವೈದ್ಯರ ಸಲಹೆ ಪಡೆದು ಬಳಿಕ ಪವನ್ ನಾಯಿಮರಿಯನ್ನು ತಲುಪಿಸಿದ್ದಾರೆ. ಜೊತೆಗೆ ತಮ್ಮ ಸಿನಿಮಾ, ಹಾಡು ನೋಡಲು ಒಂದು ಐಪ್ಯಾಡ್ ಕೂಡ ಕಳುಹಿಸಿಕೊಟ್ಟಿದ್ದಾರೆ.
ಪವನ್ ಕಲ್ಯಾಣ್ ಸಿನಿಮಾಗಳನ್ನು ನೋಡುವ ಇಂಗಿತವನ್ನು ಕೂಡ ನಿರಂಜನ್ ವ್ಯಕ್ತಪಡಿಸಿದ್ದಾರೆ. 'OG- 2' ಚಿತ್ರದಲ್ಲಿ ನಟಿಸಬೇಕು ಎಂದು ನೆಚ್ಚಿನ ನಟನ ಬಳಿ ಮನವಿ ಮಾಡಿದ್ದಾರೆ. "ಖಂಡಿತ ನಟಿಸ್ತೀನಿ, ಚಿತ್ರದ ಕಾರ್ಯಕ್ರಮಕ್ಕೆ ನೀನೇ ಮುಖ್ಯ ಅತಿಥಿ" ಎಂದು ಪವನ್ ಮಾತು ಕೊಟ್ಟಿದ್ದಾರೆ. ಅಂದಹಾಗೆ ನಿರಂಜನ್ ಚಿಕಿತ್ಸೆಗಾಗಿ ಪವನ್ 1 ಲಕ್ಷ ರೂ. ಹಣದ ನೆರವು ನೀಡಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಆತನ ಪೋಷಕರಿಗೆ ಕ್ಯಾಂಟೀನ್ ಆರಂಭಿಸಲು ಸಹಾಯ ಮಾಡುವುದಾಗಿ ಕೂಡ ಪವನ್ ಭರವಸೆ ನೀಡಿದ್ದಾರೆ.
ರಾಜಕೀಯರಂಗದಲ್ಲಿ ಬ್ಯುಸಿಯಾಗಿರುವ ಪವನ್ ಸಿನಿಮಾಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು 'OG- 2' ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಈ ಬಗ್ಗೆ ಈಗಾಗಲೇ ಅಧಿಕೃತ ಮಾಹಿತಿ ಬಂದಿದೆ. ಸುಜಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕಳೆದ ವರ್ಷ ತೆರೆಗಪ್ಪಳಿಸಿದ್ದ 'OG' ಸಿನಿಮಾ ಹಿಟ್ ಆಗಿತ್ತು. ಸೀಕ್ವೆಲ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications