ಸಂಬಳ ಬೇಡ ಎಂದ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಉಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 10 ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿದ ಪವನ್ ಈ ಬಾರಿ ಪೀಠಾಪುರಂ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿದ್ದರು. ತಮ್ಮ ಕ್ಷೇತ್ರವನ್ನು ದೇಶದಲ್ಲಿ ಮಾದರಿ ಕ್ಷೇತ್ರ ಮಾಡುವ ಪಣ ತೊಟ್ಟಿದ್ದಾರೆ.
ಚುನಾವಣೆ ಗೆದ್ದ ಬೆನ್ನಲ್ಲೇ ನಾನು ಶಾಸಕನಾಗಿ ಸಂಬಳ ಪಡೆಯುತ್ತೇನೆ. ಯಾಕಂದ್ರೆ ಅದು ಜನ ಶ್ರಮದ ಫಲ. ಸಂಬಳ ಪಡೆದಾಗಲೇ ನನ್ನ ಜವಾಬ್ದಾರಿ ಪದೇ ಪದೆ ನೆನಪಾಗುತ್ತದೆ. ಹಾಗಾಗಿ ಪ್ರತಿ ರೂಪಾಯಿಯನ್ನು ಪಡೆಯುತ್ತೇನೆ ಎಂದಿದ್ದರು. ಆದರೆ ಇದೀಗ ಸಂಬಳ ಪಡೆಯಲ್ಲ ಎಂದು ಪವನ್ ಹೇಳಿದ್ದಾರೆ. ಕಾಕಿನಾಡ ಜಿಲ್ಲೆ ಗೊಲ್ಲಪ್ರೋಲುನಲ್ಲಿ ನಡೆಸಿದ ಪಿಂಚಣಿ ವಿತರಣೆ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಭಾಗವಹಿಸಿ ಮಾತನಾಡಿದ್ದಾರೆ.

"ನಾನು ಬಹಳ ಮುಖ್ಯವಾದ ಖಾತೆಗಳನ್ನು ವಹಿಸಿಕೊಂಡಿದ್ದೇನೆ. ನಾನು ಕಡಿಮೆ ಮಾತಾಡಿ ಹೆಚ್ಚು ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ಪಂಚಾಯಿತಿ ಇಲಾಖೆಯಲ್ಲಿ ಎಷ್ಟು ಕೋಟಿ ಸಾಲವಿದೆಯೋ ಗೊತ್ತಿಲ್ಲ. ನಿಜವಾಗಿ ಯಾವ ಹೆಡ್ ಅಡಿಯಲ್ಲಿ ಎಷ್ಟು ಸಾಲ ಇವೆಯೋ ಕೂಡ ಅರ್ಥವಾಗುತ್ತಿಲ್ಲ. ಒಂದು ಸೆಕ್ಷನ್‌ನಲ್ಲಿ ಸರಿಯಾಗಿ ನೋಡಿದರೆ ಎಷ್ಟೆಷ್ಟು ಕೋಟಿ ಹೋಯಿತು ಎನ್ನುವುದು ಗೊತ್ತಾಗುತ್ತದೆ. ನನ್ನ ಎಕೌಂಟ್ಸ್ ವಿಚಾರಕ್ಕೂ 20 ವರ್ಷಗಳಲ್ಲಿ ಯಾವತ್ತೂ ಒಂದು ಗಂಟೆ ಕೂಡ ಕೂರಲಿಲ್ಲ. ಜನರ ಹಣಕ್ಕಾಗಿ ಎಲ್ಲಿಗೆ ಹೋಯ್ತು ಎಂದು ಒಂದು ಸೆಕ್ಷನ್‌ನಲ್ಲಿ ನಾಲ್ಕೈದು ಗಂಟೆಗಳ ಕಾಲ ಕುಳಿತಿದ್ದೇನೆ"
"ಇತ್ತೀಚೆಗೆ ನಾನು ಸಂಬಳ ತೆಗೆದುಕೊಂಡು ಕೆಲಸ ಮಾಡೋಣ ಎಂದುಕೊಂಡೆ. ಆದರೆ ನಾನು ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಖಾತೆ ಸಾಲದಲ್ಲಿ ಮುಳುಗಿದೆ. ಈ ನಿಧಿಯನ್ನು ನೋಡಿದರೆ ನಾನು ಸಂಬಳ ತೆಗೆದುಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ. ನನಗೆ ಸಂಬಳದ ಅಗತ್ಯವಿಲ್ಲ. ನನ್ನ ದೇಶಕ್ಕಾಗಿ, ನನ್ನ ನೆಲಕ್ಕಾಗಿ ನಾನು ಕೆಲಸ ಮಾಡುತ್ತೇನೆ. ನನ್ನಿಂದ ಯಾವುದೇ ಭ್ರಷ್ಟಾಚಾರ ನಡೆಯಲ್ಲ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಸರ್ಕಾರಕ್ಕೆ ಹಣದ ಕೊರತೆ ಇರುವುದರಿಂದ ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ ಸಂಬಳ ತೆಗೆದುಕೊಳ್ಳದಿರಲು ಪವನ್ ಕಲ್ಯಾಣ್ ನಿರ್ಧರಿಸಿದ್ದಾರೆ. ಜನಸೇನಾನಿ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನ್ನ ಸಿನಿ ವೃತ್ತಿಯಲ್ಲಿ 100 ಕೋಟಿ ರೂಪಾಯಿಗಿಂತ ಹೆಚ್ಚು ತೆರಿಗೆ ರೂಪದಲ್ಲಿ ಪಾವತಿಸಿದ್ದೇನೆ ಎಂದು ಪವನ್ ಹೇಳಿದ್ದಾರೆ.

ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟ. ದಿನವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿರುವ ದಿನಗಳು ಇವೆ. ಸದ್ಯ ಪವರ್ ಸ್ಟಾರ್ ಕೈಯಲ್ಲಿ 3 ಸಿನಿಮಾಗಳಿದ್ದು ಎಲ್ಲವೂ ಅರ್ಧಕ್ಕೆ ನಿಂತಿದೆ. 'ಹರಿಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವುದರಿಂದ ಒಪ್ಪಿಕೊಂಡ ಸಿನಿಮಾಗಳನ್ನು ಯಾವಾಗ ಪೂರ್ತಿ ಮಾಡುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ.
ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ 21 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. 2 ಲೋಕಸಭೆ ಕ್ಷೇತ್ರಗಳನ್ನಯ ಗೆದ್ದುಕೊಂಡಿತ್ತು. ಬಿಜೆಪಿ ಹಾಗೂ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಪವನ್ ಚುನಾವಣೆ ಎದುರಿಸಿದ್ದರು. ತಮ್ಮ ಪಕ್ಷ ಎಲ್ಲೆಲ್ಲಿ ಗೆಲ್ಲಬಹುದು ಎನಿಸಿತ್ತೋ ಅಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪವನ್ ಲೆಕ್ಕಾಚಾರ ತಪ್ಪಾಗಲಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ತು.


Click it and Unblock the Notifications











