ನನ್ನ ಹೆಸರು 'ಪವನ್ ಕಲ್ಯಾಣ್' ಅಲ್ಲ; ತಮ್ಮ ನಿಜವಾದ ಹೆಸರು ಹೇಳಿದ ಆಂಧ್ರ ಡಿಸಿಎಂ
ಹೆಸರಲ್ಲೇನಿದೆ ಬಿಡಿ.. ಆದರೆ ನಿಮಗೆ ಗೊತ್ತಾ ಹೆಸರಿನಲ್ಲೇ ಎಲ್ಲವೂ ಅಡಗಿದೆ. ಒಬ್ಬ ವ್ಯಕ್ತಿಯ ಅಸ್ತಿತ್ವ, ವ್ಯಕ್ತಿತ್ವ ಹಾಗೂ ಗುರುತು ಎಲ್ಲವೂ ಆ ಹೆಸರು ಆಗಿರುತ್ತದೆ. ನಾನಾ ಕಾರಣಗಳಿಂದ ಕೆಲವರು ಹೆಸರು ಬದಲಿಸಿಕೊಳ್ಳುತ್ತಾರೆ. ಹೆಸರು ಬದಲಿಸಿಕೊಂಡ ಮೇಲೆ ಯಶಸ್ಸು ಸಿಕ್ತು ಎನ್ನುತ್ತಾರೆ. ಹಾಗಿದ್ದರೆ ಹೆಸರಿನಲ್ಲಿ ಏನೋ ಇದೆ ಅಲ್ವಾ ಎನ್ನುವುದು ಇದ್ದಾರೆ. ಅಂದಹಾಗೆ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ನನ್ನ ಹೆಸರು ಇದಲ್ಲ, ಬೇರೆ ಎಂದಿದ್ದಾರೆ.
ಸಾಕಷ್ಟು ಸಿನಿಮಾ ನಟ-ನಟಿಯರು ಹೆಸರು ಬದಲಿಸಿಕೊಂಡು ಸಕ್ಸಸ್ ಕಂಡಿದ್ದಾರೆ. ಸ್ವತಃ ಪವನ್ ಕಲ್ಯಾಣ್ ಸಹೋದರ ಕೂಡ ಚಿರಂಜೀವಿ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದರು. ಆ ಬಳಿಕ ಚಿತ್ರರಂಗದಲ್ಲಿ ಯಶಸ್ಸು ಸಿಕ್ತು ಎನ್ನುತ್ತಾರೆ. ಅಂದಹಾಗೆ ಟಾಲಿವುಡ್ ಮೆಗಾಸ್ಟಾರ್ ನಿಜವಾದ ಹೆಸರು ಶಂಕರವರಪ್ರಸಾದ್. ಚಿತ್ರರಂಗಕ್ಕೆ ಬರುವಾಗ ಕರೆಯಲು ಸುಲಭವಾಗಿರಲಿ, ಸ್ಟೈಲಿಶ್ ಆಗಿ ಇರಲಿ ಎಂದು ಹೆಸರು ಬದಲಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸಿನಿಮಾ ನಿರ್ದೇಶಕ, ನಿರ್ಮಾಪಕರ ಸೂಚನೆ ಮೇರೆಗೆ ಹೆಸರು ಬದಲಿಸಿಕೊಂಡಿರುವವರು ಇದ್ದಾರೆ. ಒಂದೇ ಹೆಸರಿನ ಇಬ್ಬರು, ಮೂವರು ಕಲಾವಿದರು ಇದ್ದಾಗ ಗೊಂದಲ ಆಗದೇ ಇರಲಿ ಎನ್ನುವ ಕಾರಣಕ್ಕೆ ಬೇರೆ ಹೆಸರು ಇಟ್ಟುಕೊಳ್ಳುವವರು ಇದ್ದಾರೆ.

ಕೆಲವೊಮ್ಮೆ ಮನಸ್ಸಿಗೆ ಇಷ್ಟವಾದ ಹೆಸರನ್ನು ಅಥವಾ ಯಾರಾದರೂ ಸೂಚಿಸಿದ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಜಾತಕ, ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಿಸಿಕೊಂಡಿರುವವರು ಇದ್ದಾರೆ. ಆದರೆ ಮಾರ್ಷಲ್ ಆರ್ಟ್ಸ್ ಕಲಿಯುವಾಗ ತಮ್ಮ ತಾಕತ್ತು ನೋಡಿ ಪವನ್ ಎಂದು ಹೆಸರು ಕೊಟ್ಟರು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪವನ್ ಕಲ್ಯಾಣ್. ಅವರನ್ನು ಆಪ್ತರು ಕಲ್ಯಾಣ್ ಬಾಬು ಎಂದು ಕರೆಯುತ್ತಾರೆ. ನಾನು ಹುಟ್ಟಿದಾಗ ಬೇರೆ ಹೆಸರು ನನಗೆ ನಾಮಕರಣ ಮಾಡಿದ್ದರು ಎಂದು ಆಂಧ್ರ ಡಿಸಿಎಂ ಹೇಳಿ ಅಚ್ಚರಿ ಮೂಡಿಸಿದ್ದಾರೆ. ANI News ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಹೆಸರಿನ ಬಗ್ಗೆ ಅವರು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
"ತಿರುಪತಿಯ ಯೋಗನರಸಿಂಹ ದೇವಸ್ಥಾನದಲ್ಲಿ ನನಗೆ ಹೆಸರಿಟ್ರು. ನನಗೆ 'ಶ್ರೀ ಕಲ್ಯಾಣ್ ಕುಮಾರ್' ಎಂದು ಮನೆಯಲ್ಲಿ ನಾಮಕರಣ ಮಾಡಿದ್ದರು. ಶಾಲೆಗೆ ಸೇರಿಸುವಾಗ 'ಶ್ರೀ' ಮಿಸ್ ಆಗಿ ಕೆ. ಕಲ್ಯಾಣ್ ಕುಮಾರ್ ಎಂದು ದಾಖಲೆಗಳಲ್ಲಿ ಉಳಿದುಕೊಂಡಿತ್ತು. ಚಿತ್ರರಂಗಕ್ಕೆ ಬರುವ ಮುನ್ನ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದೆ. ಅಲ್ಲಿ ನಮ್ಮ ಗುರುಗಳು ನನಗೆ ಪವನ್ ಎನ್ನುವ ಹೆಸರು ಕೊಟ್ರು. ನಾನು ಸಾಕಷ್ಟು ಪವರ್ ಡೆಮಾಟೆಷನ್ ಕೊಡ್ತಿದ್ದೆ. ನನ್ನ ಎದೆ ಮೇಲೆ ನೂರಾರು ಕೆಜಿ ತೂಕದ ಚಪ್ಪಡಿ ಕಲ್ಲು ಇಟ್ಟು ಒಡೆದು ಪುಡಿ ಮಾಡುತ್ತಿದ್ರು. ನೀನು ಪವನಪುತ್ರ ಹನುಮಾನ್, ಅಷ್ಟು ಬಲ ನಿಂಗೆ ಎನ್ನುತ್ತಿದ್ರು. ಆಗ ನನ್ನ ಹೆಸರು ಪವನ್ ಕಲ್ಯಾಣ್ ಎಂದು ಬದಲಾಯ್ತು" ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
'ಕೋನಿದೇಲ' ಎನ್ನುವುದು ಪವನ್ ಕಲ್ಯಾಣ್ ಮನೆ ಹೆಸರು. ಹಾಗಾಗಿ ಅವರ ಮನೆಯಲ್ಲಿ ಎಲ್ಲರೂ ತಮ್ಮ ಹೆಸರಿನ ಮುಂದೆ 'ಕೋನಿದೇಲ' ಅಥವಾ 'ಕೆ' ಎಂದು ಸೇರಿಸಿಕೊಂಡಿದ್ದಾರೆ. ಹಾಗಾಗಿ ಕೋನಿದೇಲ ಕಲ್ಯಾಣ್ ಕುಮಾರ್ ಆಗಿದ್ದ ಅವರು ಬಳಿಕ ಕೋನಿದೇಲ ಪವನ್ ಕಲ್ಯಾಣ್ ಎಂದು ಈಗ ಜನಪ್ರಿಯರಾಗಿದ್ದಾರೆ. ಆ ಹೆಸರು ಕೂಡ ಅದೃಷ್ಟ ತಂದುಕೊಟ್ಟಿದೆ. ಚಿರಂಜೀವಿ ಹನುಮಂತನ ಭಕ್ತ. ಹಾಗಾಗಿ ತಮ್ಮ ಹೆಸರನ್ನು ಚಿರಂಜೀವಿ ಎಂದು ಬದಲಿಸಿಕೊಂಡಿದ್ದರು. ಮಗನಿಗೆ ರಾಮ್‌ಚರಣ್ ತೇಜ ಎಂದು ಹೆಸರಿಟ್ಟಿದ್ದಾರೆ. ಪವನ್ ಹೆಸರಿಗೂ ಇದೇ ಕಾರಣ ಇರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಅಸಲಿ ಸಂಗತಿ ಈಗ ಬಹಿರಂಗವಾಗಿದೆ.


Click it and Unblock the Notifications