ಮಹೇಶ್ ಬಾಬು ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಒಪ್ಪಿಗೆ: ದರ ಎಷ್ಟು ಹೆಚ್ಚಳ?
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಮೇ 12 ರಂದು ಬಿಡುಗಡೆ ಆಗಲಿದೆ. ಈ ನಡುವೆ ಆಂಧ್ರ ಪ್ರದೇಶ ಸರ್ಕಾರವು ಚಿತ್ರತಂಡಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಆಂಧ್ರ ಪ್ರದೇಶದಲ್ಲಿ ಮೊದಲಿನಿಂದಲೂ ಟಿಕೆಟ್ ದರದ ಬಗ್ಗೆ ವಿವಾದ ಇದ್ದೇ ಇದೆ. ಇತ್ತೀಚೆಗೆ ಆಂಧ್ರದ ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಹೈ ಬಜೆಟ್ ಸಿನಿಮಾಗಳ ಟಿಕೆಟ್ ದರ ಏರಿಕೆ ಮಾಡಲು ಅನುಮತಿ ನೀಡಲಾಗಿದೆ.
ಸರ್ಕಾರವು ಹೈ ಬಜೆಟ್, ಅಲ್ಟ್ರಾ ಹೈ ಬಜೆಟ್ ಸಿನಿಮಾಗಳನ್ನು ಗುರುತಿಸಿ ಅವುಗಳ ಬಂಡವಾಳದ ಆಧಾರದ ಮೇಲೆ ಟಿಕೆಟ್ ದರ ಹೆಚ್ಚಿಸಲು ಸರ್ಕಾರವು ಅನುಮತಿ ನೀಡುತ್ತದೆ.

ಇದೀಗ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಅಲ್ಟ್ರಾ ಹೈ ಬಜೆಟ್ ಸಿನಿಮಾ ಎಂದು ಗುರುತಿಸಿದ್ದು, ಟಿಕೆಟ್ ದರವನ್ನು ಸೀಮಿತ ಅವಧಿಯ ವರೆಗೆ ಹೆಚ್ಚಿಸಲು ಅನುಮತಿ ನೀಡಲಾಗಿದೆ.
'ಸರ್ಕಾರು ವಾರಿ ಪಾಟ' ಸಿನಿಮಾದ ಟಿಕೆಟ್ ದರವನ್ನು 45 ರುಪಾಯಿ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಸಾಮಾನ್ಯ ಟಿಕೆಟ್ ದರದ ಮೇಲೆ 45 ರುಪಾಯಿ ಹೆಚ್ಚಳ ಮಾಡಿ ಟಿಕೆಟ್ ಮಾರಾಟ ಮಾಡಬಹುದಾಗಿದೆ. ಆದರೆ ಈ ಹೆಚ್ಚುವರಿ ಟಿಕೆಟ್ ದರ ಕೇವಲ ಹತ್ತು ದಿನಗಳಿಗೆ ಮಾತ್ರ ಅನ್ವಯ. ಸಿನಿಮಾ ಬಿಡುಗಡೆ ಆದ ಹತ್ತು ದಿನದ ವರೆಗೆ ಮಾತ್ರವೇ ಟಿಕೆಟ್ ದರ ಹೆಚ್ಚು ಮಾಡಿ ಮಾರಾಟ ಮಾಡಬಹುದಾಗಿದೆ. ಆ ನಂತರ ಸಾಮಾನ್ಯ ದರಕ್ಕೆ ಮರಳಬೇಕಾಗಿದೆ.
ಆಂಧ್ರ ಸರ್ಕಾರವು ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿತ್ತು. ಇದರಿಂದ ತೆಲುಗು ಚಿತ್ರರಂಗ ತೀವ್ರ ನಷ್ಟಕ್ಕೆ ಸಿಲುಕಿತ್ತು. ನಂತರ ನಟ ಚಿರಂಜೀವಿ, ಸಿಎಂ ಜಗನ್ ಜೊತೆ ಸತತ ಮಾತುಕತೆ ನಡೆಸಿ ಸರ್ಕಾರವು ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸುವಂತೆ ಮನವೊಲಿಸಿದರು. ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಟಿಕೆಟ್ ದರ ಕಡಿಮೆಯೇ ಇರಲಿದೆ.
ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ನೀಡಿರುವ ಕಾರಣ ಆಂಧ್ರದಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾದ ಟಿಕೆಟ್ ದರವು 250-300-350 ರುಪಾಯಿ ಸರಾಸರಿ ದರದಲ್ಲಿ ಮಾರಾಟವಾಗುತ್ತಿದೆ.
ಅಮೆರಿಕದಲ್ಲಿ ಪ್ರೀಮಿಯರ್ ಶೋಗಳಿಂದಲೇ ಈವರೆಗೆ 1.45 ಕೋಟಿಗೂ ಹೆಚ್ಚು ಹಣ ಬಾಚಿರುವ 'ಸರ್ಕಾರು ವಾರಿ ಪಾಟ' ಸಿನಿಮಾ, ಮೇ 12 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಪರಶುಮಾರ್ ಪೆಟ್ಲ ನಿರ್ದೇಶನ ಮಾಡಿದ್ದಾರೆ.


Click it and Unblock the Notifications