"ಜೀವನಾಂಶ ನೀಡಿ ಯಾರು ಎಷ್ಟು ಮದುವೆ ಆದರೂ ಆಗಬಹುದಾ?" ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಪವನ್ ಕಲ್ಯಾಣ್‌ಗೆ ನೋಟೀಸ್
ಆಂಧ್ರಪ್ರದೇಶದ ರಾಜಕೀಯದಲ್ಲಿ ಕೆಲ ದಿನಗಳಿಂದ ಆಡಳಿತರೂಢ ವೈಸಿಪಿ ಹಾಗೂ ಜನಸೇನಾ ಪಕ್ಷದ ನಡುವೆ ಸಂಘರ್ಷ ನಡೀತಿದೆ. ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಇತ್ತೀಚೆಗೆ ವೈಸಿಪಿ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ಉತ್ತರಾಂಧ್ರದಲ್ಲಿ ಜನವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶಾಖಪಟ್ಟಣಂಗೆ ಆಗಮಿಸಿದ ಜನಸೇನಾನಿನ ಸ್ಥಳೀಯ ಪೊಲೀಸರು ತಡೆದಿದ್ದಾರೆ. ಈ ವಿವಾದದ ಹಿನ್ನಲೆಯಲ್ಲಿ ಅಕ್ಟೋಬರ್ 18ರಂದು ಪವನ್ ಕಲ್ಯಾಣ್ ಪಕ್ಷದ ಸಮಾವೇಶದಲ್ಲಿ ಮಾತನಾಡಿ ವೈಪಿಸಿ ನಾಯಕರ ವಿರುದ್ಧ ಕೆಂಡ ಕಾರಿದ್ದರು. ಚಪ್ಪಲಿ ತೋರಿಸಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದರು. ತಮ್ಮ 3 ಮದುವೆಗಳ ಬಗ್ಗೆ ಮಾತನಾಡುವ ವೈಸಿಪಿ ನಾಯಕರ ವಿರುದ್ಧ ಪವನ್ ಹರಿಹಾಯ್ದಿದ್ದರು.
ಪವನ್ ಕಲ್ಯಾಣ್ ಮೂರು ಮದುವೆ ವಿಚಾರದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಡೈಲಾಗ್ ವಾರ್ ಜೋರಾಗಿ ನಡೀತಿದೆ. ಇದೀನ ಜನಸೇನಾನಿಗೆ ಆಂಧ್ರ ಸರ್ಕಾರ ಶಾಕ್ ನೀಡಿದೆ. ಎಪಿ ಮಹಿಳಾ ಆಯೋಗ ಪವನ್ ಕಲ್ಯಾಣ್‌ಗೆ ನೋಟಿಸ್ ಜಾರಿ ಮಾಡಿದೆ. ಮೂರು ಮದುವೆಗಳ ಬಗ್ಗೆ ಪವನ್ ಕಲ್ಯಾಣ್ ಅವರ ಹೇಳಿಕೆ ವಿಚಾರವಾಗಿ ನೋಟಿಸ್ ನೀಡಲಾಗಿದೆ. ಮೂರು ಮದುವೆಗಳ ಬಗ್ಗೆ ಪವನ್ ತಮ್ಮ ಹೇಳಿಕೆ ಹಿಂಪಡೆಯುವಂತೆ ಎಪಿ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿರೆಡ್ಡಿ ಪದ್ಮಾ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಕೋಟಿಗಟ್ಟಲೆ, ಲಕ್ಷಗಟ್ಟಲೆ ಜೀವನಾಂಶ ನೀಡಿ ತಮ್ಮ ಅಂತಸ್ತಿಗೆ ತಕ್ಕಂತೆ ವಿಚ್ಛೇದನ ಪಡೆಯಬಹುದು ಎನ್ನುವ ಪವನ್ ಮಾತು ಅತಿರೇಕವಾಗಿದೆ. ಈ ಬಗ್ಗೆ ಸಾಕಷ್ಟು ಮಹಿಳೆಯರು ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ವಾಸಿರೆಡ್ಡಿ ಪದ್ಮಾ ಹೇಳಿದ್ದಾರೆ.
ಯಾರು ಬೇಕಾದರೂ ಪತ್ನಿಯರನ್ನು ದೂರ ಮಾಡುತ್ತಾ ಹೋದರೆ ಮಹಿಳೆಯರಿಗೆ ಭದ್ರತೆ ಇರುತ್ತದಾ ಎಂದು ಕೇಳಿದ್ದಾರೆ. ಇನ್ನು ಮಹಿಳೆಯರ ಬಗ್ಗೆ ಪವನ್ ಕಲ್ಯಾಣ್, ಸ್ಟೆಪ್ನಿ ಎಂಬ ಪದ ಬಳಕೆ ಅತ್ಯಂತ ಆಕ್ಷೇಪಾರ್ಹ ಎಂದು ಪದ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪವನ್ ಕಲ್ಯಾಣ್ ಕ್ಷಮೆಯಾಚಿಸಬೇಕು ಹಾಗೂ ಮಹಿಳೆಯರ ಬಗ್ಗೆ ತಮ್ಮ ಮಾತುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪವನ್ ಹೇಳಿಕೆಯಿಂದ ಸಮಾಜಕ್ಕೆ ಕೆಟ್ಟ ಸಂದೇಶ!
ಮದುವೆ ವಿಚಾರದಲ್ಲಿ ಪವನ್ ಕಲ್ಯಾಣ್ ಅವರ ಹೇಳಿಕೆ ನನಗೆ ನೋವುಂಟು ಮಾಡಿದೆ ಎಂದು ಎಪಿ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿರೆಡ್ಡಿ ಪದ್ಮಾ ಹೇಳಿದ್ದಾರೆ. ಜೀವನಾಂಶ ನೀಡಿದರೆ ಪತ್ನಿಯಿಂದ ಮುಕ್ತಿ ಪಡೆಯಬಹುದು ಎನ್ನುವ ಅವರ ಮಾತುಗಳು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಜೀವನಾಂಶ ನೀಡಿ ನೀವು ಮೂರು ಮದುವೆಯಾಗಿ ಎನ್ನುವ ಮಾತುಗಳನ್ನು ಪವನ್ ಕಲ್ಯಾಣ್ ಹಿಂಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಪತ್ನಿಯರನ್ನು ದೂರ ಮಾಡುತ್ತಾ ಹೋದರೆ ಮಹಿಳೆಯರಿಗೆ ಭದ್ರತೆ ಇರುತ್ತಾ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರ ಬಗ್ಗೆ ಸ್ಟೆಪ್ ಎನ್ನುವ ಪದ ಬಳಸಿದ್ದು ಸರಿಯಲ್ಲ. ಸಿನಿಮಾ ಹೀರೋ ಆಗಿ, ಒಂದು ಪಕ್ಷದ ಅಧ್ಯಕ್ಷನಾಗಿ ಮೂರು ಮದುವೆ ವಿಚಾರದಲ್ಲಿ ನಿಮ್ಮ ಮಾತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಮಾತುಗಳು ಮಹಿಳೆಯರ ಸುರಕ್ಷತೆಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಈ ಬಗ್ಗೆ ಪವನ್ ಕಲ್ಯಾಣ್ ವಿವರಣೆಗಾಗಿ ಎಪಿ ಮಹಿಳಾ ಆಯೋಗವು ಕಾಯುತ್ತಿದೆ ಎಂದು ವಾಸಿರೆಡ್ಡಿ ಪದ್ಮಾ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

3 ಮದುವೆ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು?
ಮಂಗಳವಾರ ಮಂಗಳಗಿರಿಯಲ್ಲಿ ನಡೆದ ಜನಸೇನಾ ಪಕ್ಷದ ಕಾರ್ಯಕ್ರಮದಲ್ಲಿ ಆವೇಶದಿಂದ ಮಾತನಾಡಿದ ಪವನ್ ಕಲ್ಯಾಣ್, ಕೈಯಲ್ಲಿ ಚಪ್ಪಲಿ ಹಿಡಿದು ವೈಸಿಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ತಮ್ಮ ಮೂರು ಮದುವೆ, ವಿಚ್ಛೇದನ ನೀಡಿದ ಇಬ್ಬರು ಪತ್ನಿಯರಿಗೆ ನೀಡಿದ ಹಣ, ಆಸ್ತಿಯ ಬಗ್ಗೆಯೂ ಮಾತನಾಡಿದ್ದರು. ''ಮಾತೆತ್ತಿದರೆ ಮೂರು ಮದುವೆ ಆದವನು ಎನ್ನುತ್ತೀರ. ಹೌದು ನಾನು ಮೂರು ಮದುವೆ ಆಗಿದ್ದೇನೆ. ನೀವು ಆಗಿ, ಬೇಡ ಎಂದವರ್ಯಾರು? ಮೊದಲು ಮದುವೆಯಾದೆ ಆದರೆ ಅದ್ಯಾಕೊ ವರ್ಕೌಟ್ ಆಗಲಿಲ್ಲ. ಅವರಿಗೆ ಐದು ಕೋಟಿ ನೀಡಿ ವಿಚ್ಛೇಧನ ಪಡೆದೆ. ಬಳಿಕ ಎರಡನೇ ಮದುವೆ ಆದೆ ಅವರಿಗೆ ಉಳಿದ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟೆ. ಆ ನಂತರ ಹೌದು ಮೂರನೇ ಮದುವೆಯನ್ನೂ ಆಗಿದ್ದೇನೆ'' ಎಂದು ಪವನ್ ಕಲ್ಯಾಣ್ ಹೇಳಿದ್ದರು.

"ಒಂದು ಮದುವೆ ಆಗಿ 30 ಸ್ಟೆಪ್ನಿ ಜೊತೆ ಸುತ್ತಾಡುತ್ತೀರಾ"
ಇನ್ನು ವೈಸಿಪಿ ನಾಯಕರು ತಮ್ಮ 3 ಮದುವೆ ಬಗ್ಗೆ ಮಾತನಾಡುವುದರ ವಿರುದ್ಧ ಆಕ್ರೋಶ ಹೊರಹಾಕಿದ್ದ ಪವನ್ ಕಲ್ಯಾಣ್ ''ನಾನು ಮೂರು ಮದುವೆ ಆಗಿರುವ ಬಗ್ಗೆ ಪದೇ ಪದೇ ಮಾತನಾಡುವ ನೀವು, ಒಂದು ಮದುವೆ ಆಗಿ ಮೂವತ್ತು ಸ್ಟೆಪ್ನಿಗಳ ಜೊತೆ ಸುತ್ತಾಡುವ ಲಂಪಟರು ನೀವು. ನಿಮ್ಮ ಮನೆಗಳಿಗೆ ನುಗ್ಗಿ ಶರ್ಟ್ ಕಾಲರ್ ಹಿಡಿದು ದರ-ದರನೆ ಹೊರಗೆ ಎಳೆದುಕೊಂಡು ಬಂದು ಹೊಡೆಯುತ್ತೇನೆ ಜಾಗೃತೆ. ಇನ್ನೊಮ್ಮೆ ನನ್ನ ಬಗ್ಗೆ ಮಾತನಾಡೀರಿ ಎಚ್ಚರಿಕೆ'' ಎಂದು ಪವನ್ ಕಲ್ಯಾಣ್ ಅಬ್ಬರಿಸಿದ್ದರು.

3 ಮದುವೆ ಆಗಿರುವ ಪವನ್ ಕಲ್ಯಾಣ್
1997ರಲ್ಲಿ ನಂದಿನಿ ಎಂಬುವವರನ್ನು ನಟ ಪವನ್ ಕಲ್ಯಾಣ್ ಮದುವೆ ಆಗಿದ್ದರು. 2 ವರ್ಷವೂ ಇಬ್ಬರು ಒಟ್ಟಿಗೆ ಸಂಸಾರ ನಡೆಸಿರಲಿಲ್ಲ. ಅದೇ ಸಮಯದಲ್ಲಿ ಪವನ್ ಸಹನಟಿ ರೇಣು ದೇಸಾಯಿ ಜೊತೆ ಲಿವ್ ಇನ್‌ರಿಲೇಷನ್‌ಶಿಪ್ ನಡೆಸಿದ್ದರು. 2007ರಲ್ಲಿ ನಂದಿನಿಗೆ ವಿಚ್ಛೇಧನ ನೀಡಿ ರೇಣುದೇಸಾಯಿ ಜೊತೆ ಮದುವೆ ಆಗಿದ್ದರು. 2012ರಲ್ಲಿ ಆಕೆಗೂ ವಿಚ್ಧೇಧನ ನೀಡಿದ್ದರು. 2013ರಲ್ಲಿ ರಷ್ಯಾದ ಅನ್ನಾ ಲೆಜ್ನೇವಾ ಎನ್ನುವ ರಷ್ಯನ್ ಯುವತಿಯನ್ನು ಮದುವೆ ಆಗಿದ್ದರು. ಆಕೆಯ ಜೊತೆಗೆ ಸದ್ಯ ಪವನ್ ಕಲ್ಯಾಣ್ ವಾಸವಿದ್ದಾರೆ.


Click it and Unblock the Notifications











