ಮಗಳ ಯಶಸ್ಸಿಗಾಗಿ ಅರ್ಜುನ್ ಸರ್ಜಾ ಪಣ: ತೆಲುಗಿನಲ್ಲಿ ನಿರ್ದೇಶನಕ್ಕಿಳಿದ ನಟ!
ನಟ ಅರ್ಜುನ್ ಸರ್ಜಾ ಕನ್ನಡದ ಮೂಲಕದ ನಟ. ಆ್ಯಕ್ಷನ್ ಕಿಂಗ್ ಅಂತಲೇ ಕರೆಸಿಕೊಳ್ಳುವ ನಟ ಅರ್ಜುನ್ ಸರ್ಜಾ ಕನ್ನಡದಲ್ಲಿ ಸಾಕಷ್ಟು ಹಿಟ್‌ಗಳನ್ನು ಕೊಟ್ಟಿದ್ದಾರೆ. ಬಳಿಕ ತಮಿಳಿನಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ.
ಅರ್ಜುನ್ ಸರ್ಜಾಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳು ಐಶ್ವರ್ಯಾ ಅರ್ಜುನ್ ಸಿನಿಮಾ ರಂಗಕ್ಕೆ ಹಲವು ವರ್ಷಗಳ ಹಿಂದೆಯೇ ಪದಾರ್ಪಣೆ ಮಾಡದ್ದಾರೆ. ಐಶ್ವರ್ಯಾ ಅರ್ಜುನ್ ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆದರೆ ಅದ್ಯಾಕೋ ಐಶ್ವರ್ಯಾ ಅದೃಷ್ಟ ಸರಿ ಇಲ್ಲ ಎನಿಸುತ್ತೆ. ತಮಿಳು ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹೌದು ನಟಿ ಐಶ್ವರ್ಯಾ ಅರ್ಜುನ್ ಸದ್ಯ ತೆಲುಗು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತೆಲುಗಿನಲ್ಲಿ ಮೊದಲ ಸಿನಿಮಾ ಮಾಡುತ್ತಿದ್ದಾರೆ.

ಅಪ್ಪಂದಿರ ದಿನವಾದ ಇಂದು (ಜೂನ್ 19) ಚಿತ್ರದ ಮೊದಲ ಪೋಸ್ಟರ್ ಜೊತೆಗೆ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಆದರೆ, ಚಿತ್ರದ ಟೈಟಲ್ ರಿವೀಲ್ ಮಾಡಿಲ್ಲ. ಚಿತ್ರ ತಂಡದ ಹೆಸರಿನೊಂದಿದೆ ಆದಷ್ಟು ಬೇಗ ಸಿನಿಮಾ ಶುರುವಾಗಲಿದೆ ಎಂದು ಮಾತ್ರ ಬರೆಯಲಾಗಿದೆ. ಇನ್ನು ಈ ಚಿತ್ರವನ್ನು ಅರ್ಜುನ್ ಸರ್ಜಾ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.
ಅರ್ಜುನ್ ಸರ್ಜಾ ನಟನಾಗಿ ಮಾತ್ರವಲ್ಲದೆ. ನಿರ್ದೇಶಕನಾಗಿಯೂ ಉತ್ತಮ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗ ಮಗಳಿಗಾಗಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಾಗಿದ್ದಾರೆ. ಹಾಗಂತಾ ಮಗಳಿಗೆ ಅರ್ಜುನ್ ಸರ್ಜಾ ನಿರ್ದೇಶನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕನ್ನಡದಲ್ಲಿ ಬಂದ 'ಪ್ರೇಮ ಬರಹ' ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದ್ದರು.
ಕನ್ನಡದಲ್ಲಿ ಐಶ್ವರ್ಯಾ ಅಭಿನಯದ ಮೊದಲ ಸಿನಿಮಾ ''ಪ್ರೇಮ ಬರಹ'. ಆದರೆ ಈ ಚಿತ್ರಕ್ಕೂ ಮುನ್ನ ತಮಿಳಿನಲ್ಲಿ 'ಪಟ್ಟತ್ತು ಯಾನೈ' ಚಿತ್ರದಲ್ಲಿ ನಟಿಸಿದ್ದಾರೆ. ಈ ಬಾರಿ ಐಶ್ವರ್ಯಾ ತೆಲುಗಿನಲ್ಲಿ ಲಾಂಚ್ ಆಗುತ್ತಿದ್ದಾರೆ. ತಮಿಳು ಮತ್ತು ಕನ್ನಡದಲ್ಲಿ ಐಶ್ವರ್ಯಾಗೆ ಅಂತಹ ದೊಡ್ಡ ಯಶಸ್ಸು ಸಿಕ್ಕಿಲ್ಲ. ಹಾಗಾಗಿ ತೆಲುಗಿನತ್ತ ಮುಖ ಮಾಡಿದಂತಿದೆ.
ಕನ್ನಡ ಮತ್ತು ತಮಿಳಿನಲ್ಲು ಐಶ್ವರ್ಯ ಕೇವಲ ಒಂದೊಂದು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಬಳಿಕ ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ಈಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಚಿತ್ರತಂಡ.


Click it and Unblock the Notifications











