ಮತ್ತೊಮ್ಮೆ ಅರೆಸ್ಟ್ ಮಾಡಿ, ಅಲ್ಲು ಅರ್ಜುನ್ ವಿರುದ್ಧ ವ್ಯಾಪಕ ಆಕ್ರೋಶ
ರಾಜಕಾರಣಿಯೇ ಆಗಿರಲಿ.. ಚಿತ್ರರಂಗದ ಬಹುದೊಡ್ಡ ಸ್ಟಾರೇ ಆಗಿರಲಿ.. ಯಾರೇ ಆಗಿದ್ದರೂ ಕೂಡ ನಿಯಮಗಳನ್ನು ಪಾಲಿಸಬೇಕು. ಆದರೆ.. ಕೆಲವರು ಈ ನಿಯಮಗಳಿಗೆ ಕ್ಯಾರೇ ಎನ್ನಲ್ಲ. ಬದಲಿಗೆ ಆನೆ ನಡೆದಿದ್ದೇ ದಾರಿ ಎಂಬಂತೆ ಓಡಾಡುತ್ತಾರೆ. ಪ್ರಶ್ನೆ ಮಾಡಲು ಹೋದರೆ ಕಿರಿಕ್ ಮಾಡುತ್ತಾರೆ. ಅದರಲ್ಲಿಯೂ ದಿನಬೆಳಗಾದರೆ ಊರೂರು ಸುತ್ತಾಡುವ ಕೆಲ ಸ್ಟಾರ್‌ಗಳಿಗೆ ಈಗೀಗ ಕುತ್ತಿಗೆಯ ಮೇಲೆ ತಲೇನೆ ನಿಲ್ಲುತ್ತಿಲ್ಲ.
ಒಂದು ಚಿತ್ರ ಗೆದ್ದರೆ ಸಾಕು ಆ ಅಮಲನ್ನೇರಿಸಿಕೊಂಡೇ ಓಡಾಡುತ್ತಿರುತ್ತಾರೆ. ಇದಕ್ಕೆ.. ಅಲ್ಲು ಅರ್ಜುನ್ ಸದ್ಯದ ಉದಾಹರಣೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರ ಗೆದ್ದ ಸಂಭ್ರಮದಲ್ಲಿದ್ದಾರೆ.

ಇದೇ ಸಂಭ್ರಮದಲ್ಲಿ ಆಟ್ಲಿ ಜೊತೆ ಹೊಸ ಚಿತ್ರವನ್ನು ಶುರು ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ನಮ್ಮ ಚಿತ್ರ ಹಾಗಿರುತ್ತೆ ಹೀಗಿರುತ್ತೆ ಎಂದೆಲ್ಲ ಬಿಲ್ಡಪ್‌ಗಳನ್ನು ಕೂಡ ಕೊಡಲಾಗಿದೆ. ಚಿತ್ರದ ಹಣೆಬರಹ ಚಿತ್ರ ತೆರೆಗೆ ಬಂದಾಗಲೇ ಗೊತ್ತಾಗಲಿದೆಯಾದರೂ ಸದ್ಯ ಅಲ್ಲು ಅರ್ಜುನ್ ಮುಂಬೈನ ವಿಮಾನ ನಿಲ್ದಾಣದಲ್ಲಿ ವಿಚಿತ್ರವಾಗಿ ವರ್ತಿಸಿದ್ದಾರೆ.
ಹೌದು, ಅಸಲಿಗೆ ಮುಂಬೈದಿಂದ ಪ್ರಯಾಣಕ್ಕೆ ಅಲ್ಲು ಅರ್ಜುನ್ ಮುಂದಾದಾಗ ಯಾರಿಗೂ ಗೊತ್ತಾಗಬಾರದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಪ್ರವೇಶ ದ್ವಾರದ ಬಳಿ ಬಂದಾಗ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಅಧಿಕಾರಿಗೆ ಐಡಿ ಪ್ರೂಫ್‌ನ್ನು ಕೂಡ ನೀಡಿದ್ದಾರೆ.
ಶಿಷ್ಟಾಚಾರದ ಪ್ರಕಾರ ಅಧಿಕಾರಿ ಅಲ್ಲು ಅರ್ಜುನ್‌ಗೆ ಮಾಸ್ಕ್ ತೆಗೆದು ಮುಖ ತೋರಿಸುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪ ಮಾಡಿಕೊಂಡ ಅಲ್ಲು ಅರ್ಜುನ್ ಅಧಿಕಾರಿಯ ಜೊತೆ ವಾಗ್ವಾದ ಮಾಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಇದ್ದ ವ್ಯಕ್ತಿ ಕೂಡ ತಗಾದೆ ತೆಗೆದಿದ್ದಾರೆ.
ಕೊನೆಗೆ ಆ ಅಧಿಕಾರಿ ಮಾಸ್ಕ್ ತೆಗಿಯಲೇಬೇಕು ಎಂದು ಒತ್ತಾಯ ಮಾಡಿದಾಗ ಅಲ್ಲು ಅರ್ಜುನ್ ಒಲ್ಲದ ಮನಸಿಂದ ಕೋಪದಲ್ಲಿ ಕೇವಲ ಅರ್ಧ ಮಾಸ್ಕ್ ತೆಗೆದು ಮುಖ ತೋರಿಸಿದ್ದಾರೆ. ಆ ನಂತರ ಅವರನ್ನು ಒಳಗಡೆ ಬಿಡಲಾಗಿದೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಅಲ್ಲು ಅರ್ಜುನ್ ವರ್ತನೆಯನ್ನು ಖಂಡಿಸಿದ್ದು ಇದು ದುರಂಹಕಾರದ ಪರಮಾವಧಿ ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದ ಒಳಗೆ ಹೋಗುವಾಗ ಸಾಮಾನ್ಯ ಜನರಿಗೆ ಮಾತ್ರ ಅಲ್ಲ ಸೆಲೆಬ್ರಿಟಿಗಳಿಗೆ, ವಿಐಪಿಗಳಿಗೆ, ರಾಜಕಾರಣಿಗಳಿಗೆ ನಿಯಮಗಳು ಒಂದೇ ಇರುತ್ತಾವೆ. ಭದ್ರತಾ ತಪಾಸಣೆಯ ಸಮಯದಲ್ಲಿ ಯಾರಾದರೂ ತಮ್ಮ ಮುಖವನ್ನು ಸರಿಯಾಗಿ ಬಹಿರಂಗಪಡಿಸಲು ನಿರಾಕರಿಸಿದರೆ, ಅದು ಕೇವಲ ಗೌಪ್ಯತೆಯ ಬಗ್ಗೆ ಅಲ್ಲ, ಅದು ರಾಷ್ಟ್ರೀಯ ಸುರಕ್ಷತೆಗೆ ಅಪಾಯವನ್ನುಂಟು ಮಾಡಬಹುದು ಎಂಬ ಕನಿಷ್ಟ ಜ್ಞಾನ ನಿಮಗೆ ಇಲ್ವಾ ಎಂದು ಪ್ರಶ್ನೆಯನ್ನು ಮಾಡುತ್ತಿರುವ ಹಲವರು ಪ್ರಸಿದ್ಧರಾದ ಮಾತ್ರಕ್ಕೆ ನಿಯಮಗಳನ್ನು ಗಾಳಿಗೆ ತೂರಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಜವಾಬ್ದಾರಿಯಿಂದ ವರ್ತಿಸಿ ಅಭಿಮಾನಿಗಳಿಗೆ ಮಾದರಿಯಾಗಬೇಕಾದವರೇ ಈ ತರಹದ ವರ್ತನೆಯ ಮೂಲಕ ತಪ್ಪು ಸಂದೇಶಗಳನ್ನು ಕೊಡುತ್ತಾರೆ ಎಂದು ಕಿಡಿ ಕಾರುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ಅಲ್ಲು ಅರ್ಜುನ್ ಮತ್ತು ಆಟ್ಲಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆಯ ಪಾತ್ರದ ಸುತ್ತ ಮುತ್ತ ಬಿಡುಗಡೆಯಾಗಿರುವ ವಿಡಿಯೋ ಕುತೂಹಲವನ್ನು ಕೂಡ ಹುಟ್ಟು ಹಾಕಿದೆ. ''ಸನ್ ಪಿಕ್ಚರ್ಸ್'' ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಗ್ಲೋಬಲ್ ಲೆವಲ್‌ನ ಸಿನಿಮಾ ಇದು ಎಂದು ಚಿತ್ರತಂಡ ಹೇಳಿಕೊಂಡಿದೆ.


Click it and Unblock the Notifications











