ತಮಿಳಿಗೆ ಕಾಲಿಟ್ಟು ಎಡವಿದ್ದ ಆಶಿಕಾ ನಟನೆಯ ಮೊದಲ ತೆಲುಗು ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?
2016ರಲ್ಲಿ ತೆರೆಕಂಡ ಕ್ರೇಜಿ ಬಾಯ್ ಎಂಬ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಆಶಿಕಾ ರಂಗನಾಥ್ ಬಳಿಕ ಶಿವ ರಾಜ್‌ಕುಮಾರ್ ನಟನೆಯ ಮಾಸ್ ಲೀಡರ್ ಎಂಬ ಚಿತ್ರದಲ್ಲೂ ನಟಿಸಿದ್ದರು. ಗಣೇಶ್ ನಟನೆಯ ಮುಗುಳು ನಗೆ ಚಿತ್ರದಲ್ಲಿ ಬಣ್ಣ ಹಚ್ಚಿದ ಬಳಿಕ ಆಶಿಕಾ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದರು. ನಂತರ ರಾಂಬೋ 2, ಮದಗಜ ಹಾಗೂ ಅವತಾರ ಪುರುಷ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಆಶಿಕಾ ರಂಗನಾಥ್‌ಗೆ ಕನ್ನಡದ ಮುಂಚೂಣಿ ಸ್ಟಾರ್ ನಟರುಗಳಿಗೆ ನಟಿಯಾಗುವ ಅವಕಾಶ ಒದಗಿಬರುವುದು ಇನ್ನೂ ಬಾಕಿ ಇದೆ.
ಇನ್ನು ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ ಬಳಿಕ ಪರಭಾಷಾ ಚಿತ್ರರಂಗಗಳಿಗೂ ಆಶಿಕಾ ಕಾಲಿಟ್ಟರು. ಕಳೆದ ವರ್ಷ ತೆರೆಕಂಡ ಅಥರ್ವ ನಟನೆಯ ಪಟ್ಟದು ಅರಸನ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಆಶಿಕಾ ರಂಗನಾಥ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರ ಹೇಳಿಕೊಳ್ಳುವಂತಹ ಹಿಟ್ ಏನೂ ಆಗಲಿಲ್ಲ. ನಟಿ ಆಶಿಕಾಗೆ ಕನ್ನಡದಲ್ಲಿ ಸಿಕ್ಕಂತಹ ಗುರುತಿಸುವಿಕೆ ತಮಿಳಿನಲ್ಲಿ ಸಿಗಲಿಲ್ಲ.
ಹೀಗೆ ತಮಿಳಿಗೆ ಕಾಲಿಟ್ಟು ನಿರೀಕ್ಷಿಸಿದ್ದ ಗೆಲುವು ಪಡೆದುಕೊಳ್ಳುವಲ್ಲಿ ಎಡವಿದ್ದ ನಟಿ ಆಶಿಕಾ ರಂಗನಾಥ್ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ತೆಲುಗಿನ ನಂದಮೂರಿ ಕುಟುಂಬದ ನಟರಲ್ಲಿ ಓರ್ವರಾದ ನಂದಮೂರಿ ಕಲ್ಯಾಣ್ ರಾಮ್ ನಟನೆಯ ಚಿತ್ರ ಅಮಿಗೊಸ್ ಮೂಲಕ ಆಶಿಕಾ ಟಾಲಿವುಡ್ ಪ್ರವೇಶಿಸಿದ್ದಾರೆ. ಕನ್ನಡ ನಟಿಯರು ಆಳುತ್ತಿರುವ ತೆಲುಗು ಚಿತ್ರರಂಗದಲ್ಲಿ ಆಶಿಕಾ ಕ್ಲಿಕ್ ಆದರೆ ದೊಡ್ಡಮಟ್ಟದ ಆಫರ್ ಹುಡುಕಿಕೊಂಡು ಬರಲಿವೆ ಎಂಬುದು ಸಿನಿ ಮಂದಿಯ ಲೆಕ್ಕಾಚಾರವಾಗಿತ್ತು. ಹೀಗಾಗಿ ಆಶಿಕಾ ನಟಿಸಿರುವ ಈ ಚಿತ್ರ ಯಾವ ರೀತಿ ಕಲೆಕ್ಷನ್ ಮಾಡಲಿದೆ ಎಂಬ ಊಹೆ ಇತ್ತು ಹಾಗೂ ಚಿತ್ರಕ್ಕೆ ಒಳ್ಳೆಯ ಟಾಕ್ ಬಂದರೆ ನಟಿಗೆ ಒಳ್ಳೆಯ ಪ್ರಚಾರ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಇನ್ನು ಈ ಸಿನಿಮಾ ನಿನ್ನೆಯಷ್ಟೇ ( ಫೆಬ್ರವರಿ 10 ) ಬಿಡುಗಡೆಗೊಂಡಿದ್ದು, ಚಿತ್ರ ಎಷ್ಟು ಗಳಿಸಿದೆ ಹಾಗೂ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅಮಿಗೊಸ್ ಹೇಗಿದೆ?
ಅಮಿಗೊಸ್ ಮೂವರು ತದ್ರೂಪಿಗಳ ಕಥೆ. ಒಬ್ಬೊಬ್ಬನೂ ಒಂದೊಂದು ರೀತಿಯ ಲಕ್ಷಣಗಳನ್ನು ಹೊಂದಿದ್ದು, ಈ ಮೂವರ ನಡುವಿನ ಥ್ರಿಲ್ಲಿಂಗ್ ಕಥೆಯೇ ಚಿತ್ರ ಎನ್ನಲಾಗ್ತಿದೆ. ಇನ್ನು ಚಿತ್ರದ ಕಾನ್ಸೆಪ್ಟ್ ಸಖತ್ತಾಗಿದ್ದು, ನಿರ್ದೇಶಕ ಹೆಣೆದಿರುವ ಚಿತ್ರಕಥೆ ಗಟ್ಟಿಯಾಗಿಲ್ಲ ಎಂಬ ಅಭಿಪ್ರಾಯವನ್ನು ಸಿನಿಮಾ ನೋಡಿದ ಬಹುತೇಕರು ವ್ಯಕ್ತಪಡಿಸಿದ್ದಾರೆ. ಚಿತ್ರಕಥೆಯನ್ನು ಸರಿಯಾದ ರೀತಿಯಲ್ಲಿ ರಚಿಸಿದ್ದರೆ ಅದ್ಭುತ ಸಿನಿಮಾ ಆಗುತ್ತಿದ್ದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಸಿನಿ ರಸಿಕರು ತಿಳಿಸಿದ್ದಾರೆ. ಈ ಒಂದು ಹಿನ್ನಡೆಯಿಂದ ಒಳ್ಳೆಯ ಸಿನಿಮಾ ಈಗ ಸಾಧಾರಣ ಎನಿಸಿಕೊಂಡಿದೆ.

ಕಲೆಕ್ಷನ್ ಎಷ್ಟು?
ಅಮಿಗೊಸ್ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆಯನ್ನೇನೂ ಸಿನಿ ರಸಿಕರಲ್ಲಿ ಹುಟ್ಟುಹಾಕಿಲ್ಲ. ಕಲ್ಯಾಣ್ ರಾಮ್ ನಟನೆಯ ಕಳೆದ ಚಿತ್ರ ಬಿಂಬಿಸಾರ ಬೃಹತ್ ಹಿಟ್ ಆದರೂ ಸಹ ಈ ಚಿತ್ರಕ್ಕಾಗಿ ಕಾದು ಕೂತವರ ಸಂಖ್ಯೆ ಕಡಿಮೆಯೇ. ಹೀಗೆ ಕಡಿಮೆ ಹೈಪ್‌ನೊಂದಿಗೆ ಬಿಡುಗಡೆಗೊಂಡ ಅಮಿಗೊಸ್ ಮೊದಲ ದಿನ 3 ಕೋಟಿ ರೂಪಾಯಿ ಗ್ರಾಸ್ ಅನ್ನು ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದೆ. ದುಬಾರಿ ಟಿಕೆಟ್ ದರ, ದೊಡ್ಡ ಸಿನಿ ರಸಿಕರು ಚಿತ್ರಮಂದಿರಗಳತ್ತ ಬಾರದ ಕಾರಣ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿದೆ.

ಹಾಟ್ ಆಗಿ ಕಾಣಿಸಿಕೊಂಡ ಆಶಿಕಾ
ಇನ್ನು ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಈ ಹಿಂದಿನ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹೊರಬಿದ್ದಿದ್ದ ಹಾಡುಗಳಲ್ಲಿ ಆಶಿಕಾ ರಂಗನಾಥ್ ಹಾಟ್ ಅವತಾರ ವೈರಲ್ ಆಗಿತ್ತು. ಅದರಲ್ಲೂ ಎನ್ನೋ ರಾತ್ರುಲೊಸ್ತಾಯಿ ಹಾಡಿನಲ್ಲಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರದಲ್ಲಿ ನಟಿ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ತೆಲುಗು ಚಿತ್ರಗಳ ಹಾಗೆ ಇಲ್ಲೂ ಸಹ ನಟಿಗೆ ಹೆಚ್ಚೇನೂ ಸ್ಕೋಪ್ ಇಲ್ಲ. ಆದರೆ ಆಶಿಕಾ ಈ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತ್ತಷ್ಟು ತೆಲುಗು ಚಿತ್ರಗಳಲ್ಲಿ ಆಶಿಕಾ ನಟಿಸುವುದು ಪಕ್ಕಾ.


Click it and Unblock the Notifications











